Advertisement
ಸುದ್ದಿಗಾರರ ಜತೆ ಮಾತನಾಡಿ, ಸಿ.ಟಿ.ರವಿ ಅವರು ಇದರಲ್ಲಿ ನನ್ನ ಪಾತ್ರವಿಲ್ಲ. ನಾನು ಅಂತಹ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಹೀಗಿರುವಾಗ ಅದನ್ನು ಸಾರ್ವಜನಿಕವಾಗಿ ಬೆಳೆಸುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಇಂಥ ಘಟನೆಗಳು ಹೊಸದಲ್ಲ. ಸಂಸತ್ ಮತ್ತು ವಿಧಾನಸಭೆಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಕೆಲವು ಪ್ರಸಂಗಗಳಲ್ಲಿ ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಕೆಲವು ಘಟನೆಗಳು ಹಾಗೆಯೇ ಮುಚ್ಚಿ ಹೋಗಿವೆ. ಹೀಗಾಗಿ ಈ ಪ್ರಕರಣವನ್ನು ಈಗಲೇ ಮುಗಿಸುವುದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರಿಸುವುದು ಅನವಶ್ಯಕ ಎಂದರು.
ಸಿ.ಟಿ.ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಶಿಫ್ಟ್ ಮಾಡಿದ್ದರು. ಯಾರ ನಿರ್ದೇಶನದ ಮೇರೆಗೆ ಅವರನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನು ರಾತ್ರಿಯೇ ನ್ಯಾಯಾಲಯಕ್ಕೆ ಹಾಜರು ಮಾಡುವಂತೆ ನಾನು ಪೊಲೀಸರಿಗೆ ಹೇಳಿದ್ದೆ. ಪೊಲೀಸರು ಅಷ್ಟು ಮಾಡಿದ್ದರೆ ಇಷ್ಟೆಲ್ಲ ಗಲಾಟೆ ಆಗುತ್ತಿರಲಿಲ್ಲ. ಅವರನ್ನು ಎನ್ಕೌಂಟರ್ ಮಾಡುವ ಪ್ರಶ್ನೆಯೇ ಇಲ್ಲ. ಅವರೊಬ್ಬ ಶಾಸಕರು. ಪೊಲೀಸರು ಇನ್ನೂ ಪ್ರಕರಣ ದಾಖಲು ಮಾಡಿರದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು. ಪೊಲೀಸ್ ಠಾಣೆಗಳಿಗೆ ಜನರು ಹಾಗೂ ಬಿಜೆಪಿ ನಾಯಕರು ಬರುತ್ತಿದ್ದರಿಂದ ಪೊಲೀಸರು ಅವರನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ಸಿ.ಟಿ.ರವಿ ಅವರು ಸಹ ಇದಕ್ಕೆ ಪೂರಕವಾಗಿ ದೂರು ಕೊಟ್ಟಿದ್ದಾರೆ.