Advertisement

ಬೇರು ಮಟ್ಟದಿಂದ ಪಕ್ಷ ಸಂಘಟಿಸಿ: ರಾಯರಡ್ಡಿ

12:35 PM Jul 25, 2019 | Naveen |

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಿರಬಹುದು. ಆದರೆ ನಿರ್ಣಾಮವೇನೂ ಆಗಿಲ್ಲ. ಪಕ್ಷವನ್ನು ಹಂತಹಂತವಾಗಿ ತಳಮಟ್ಟದಿಂದ ಬಲಪಡಿಸುತ್ತೇವೆ. ಮತ್ತೆ ದೇಶದ ಚುಕ್ಕಾಣಿ ಹಿಡಿಯಲಾಗುವುದು ಎಂದು ಸತ್ಯಶೋಧನಾ ಸಮಿತಿಯ ಸಂಚಾಲಕ ಬಸವರಾಜ ರಾಯರಡ್ಡಿ ಭರವಸೆ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸೋಲಿಗೆ ಅನೇಕ ಕಾರಣಗಳಿವೆ. ಆ ಕಾರಣಗಳ ಶೋಧ ನಡೆದಿದೆ. ಮತ್ತೆ ದೇಶದಲ್ಲಿ ಅಧಿಕಾರ ಹಿಡಿಯುವುದೇ ಕಾಂಗ್ರೆಸ್‌ನ ಗುರಿ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ವೇಗ ಪಡೆದುಕೊಂಡಿದೆ ಎಂದು ಹೇಳಿದರು.

ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್‌ಗೆ ಸೋಲಾಗಿ ಕೇವಲ ಎರಡೇ ರಾಜ್ಯಗಳಲ್ಲಿ ಮಾತ್ರ ಅಧಿಕಾರ ಕಾಂಗ್ರೆಸ್‌ಗೆ ಉಳಿದುಕೊಂಡಿತ್ತು. ಅಂತಹ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್‌ನ್ನು ಸಂಘಟಿಸಿ ದೇಶದಾದ್ಯಂತ ಅಧಿಕಾರ ಹಿಡಿಯಲಾಗಿತ್ತು. ಈಗಲೂ ಅದೇ ಮಾದರಿಯಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗುವುದು ಎಂದರು.

ಪಕ್ಷದ ಸೋಲಿನ ಕುರಿತು ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ವಿಭಿನ್ನವಾದ ಕಾರಣಗಳು ಬರುತ್ತಿವೆ. ಸೋಲಿನ ನಿಖರ ಕಾರಣ ಕುರಿತು ಅವಲೋಕನ ಮಾಡಲಾಗುತ್ತಿದೆ. ಸೋಲಿನ ಪರಾಮರ್ಶೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ರಾಜ್ಯಾದ್ಯಂತ ಸಂಚರಿಸಿ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ವಿವರಿಸಿದರು.

ಈಗಾಗಲೇ ದಾವಣಗೆರೆ, ಚಿಕ್ಕೋಡಿ, ಬೆಳಗಾವಿ ಸೇರಿದಂತೆ 12 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಲ್ಲರಿಂದಲು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅಂತಿಮ ವರದಿಯನ್ನು ಅಕೋrಬರ್‌ 2ರಂದು ಕೆಪಿಸಿಸಿಗೆ ಸಲ್ಲಿಸಲಾಗುವುದು. ನಂತರದಲ್ಲಿ ಹೈಕಮಾಂಡ್‌ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಕೆಲವು ಅಂಶಗಳ ಬಗೆಗೆ ಕಟ್ಟುನಿಟ್ಟಿನ ಆದೇಶವೂ ಬರಲಿದೆ. ಮುಂದೆ ಪಕ್ಷ ಸಂಘಟನೆಯ ರೂಪರೇಷೆ ಸಿದ್ಧವಾಗಲಿದೆ ಎಂದರು.

Advertisement

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಸೇರಿ ಒಟ್ಟು 26 ಕ್ಷೇತ್ರಗಳಲ್ಲಿ ಸೋಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲು ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಸೋಲಿನಲ್ಲಿ ವಿಭಿನ್ನ ಕಾರಣಗಳು ಸಿಗುತ್ತಿವೆ.

ಸೋಲಿಗೆ ಪ್ರಚಾರದ ಕೊರತೆ, ಮುಖಂಡರ ಹೊಂದಾಣಿಕೆ ಸಮಸ್ಯೆ, ಅಸಮರ್ಥ ಅಭ್ಯರ್ಥಿ, ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದು, ಬಿಜೆಪಿಯವರ ಷಡ್ಯಂತ್ರ, ಅಪಪ್ರಚಾರ, ಕೋಮು ಪ್ರಚೋದನೆ, ತಪ್ಪು ಮಾಹಿತಿ, ಬಿಜೆಪಿಯಿಂದ ಸುಳ್ಳು ಪ್ರಚಾರ ಸೇರಿದಂತೆ ಅನೇಕ ಕಾರಣಗಳು ವ್ಯಕ್ತವಾಗಿವೆ. ಜಿಲ್ಲೆಯಲ್ಲಿಯೂ ಮುಖಂಡರ ಹೊಂದಾಣಿಕೆ ಕೊರತೆ ಹಾಗೂ ಬಿಜೆಪಿಯವರ ಅಪಪ್ರಚಾರ ಸೋಲಿಗೆ ಪ್ರಮುಖ ಕಾರಣಗಳಾಗಿವೆ ಎಂದು ರಾಯರಡ್ಡಿ ವಿವರಿಸಿದರು.

ಸಮಿತಿಯ ಸದಸ್ಯ ಆರ್‌. ಧ್ರುವನಾರಾಯಣ ಮಾತನಾಡಿ, ಬಿಜೆಪಿ ಆಪರೇಷನ್‌ ಕಮಲ ನಡೆಸುವ ಮೂಲಕ ಹಾಗೂ ಷಡ್ಯಂತ್ರ ರಚಿಸುವ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದೆ. ಬಿಜೆಪಿ ವಾಮಮಾರ್ಗದಿಂದ ಅಧಿಕಾರ ಹಿಡಿದಿರುವುದು ದೇಶದ ಜನರಿಗೆ ಗೊತ್ತಾಗಿದೆ. ಬಿಜೆಪಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ದೇಶದ್ಯಂತ ಬಿಜೆಪಿ ಮಾತ್ರ ಅಧಿಕಾರದಲ್ಲಿರಬೇಕೆಂದು ಅವರು ಬಯಸುತ್ತಿದ್ದಾರೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿಯೂ ಹುನ್ನಾರ ನಡೆಸಿ ವಾಮಮಾರ್ಗವಾಗಿ ಸರ್ಕಾರ ರಚನೆಗೆ ಮುಂದಾಗುತ್ತಿದ್ದಾರೆ ಎಂದು ಟೀಕಿಸಿದರು.

ಸಮಿತಿಯ ಸದಸ್ಯ ಈರಣ್ಣ ಮತ್ತಿಕಟ್ಟಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಸುತ್ತಾಡಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಇನ್ನು ಮುಂದೆ ಮತ್ತಡ ಪಕ್ಷದ ಬಲವರ್ಧನೆಗಾಗಿ ತಳಮಟ್ಟದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕಾರ್ಯ ಸಾಗಿದೆ. ಕೆಪಿಸಿಸಿಯ ಸಮಿತಿಗಳನ್ನು ಹೊಸದಾಗಿ ರಚಿಸಲಾಗುತ್ತಿದೆ. ಕಳೆದ ಮೇ ತಿಂಗಳಿಂದ ನಮ್ಮ ಕಾಂಗ್ರೆಸ್‌ ಎಂಬ ಪಾಕ್ಷಿಕ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದ್ದು, ಇದರಲ್ಲಿ ಪಕ್ಷವನ್ನು ಬಲಪಡಿಸುವ ಕುರಿತ ಲೇಖನಗಳು, ಪಕ್ಷದಲ್ಲಿ ಉಂಟಾಗಿರುವ ಬದಲಾವಣೆಗಳ ಕುರಿತ ಮಾಹಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಮಿತಿಯ ಸದಸ್ಯರಾದ ಆರ್‌.ಸುದರ್ಶನ, ವೀರಕುಮಾರ ಪಾಟೀಲ, ಮುಖಂಡರಾದ ವಿ.ಎಸ್‌. ಸಾಧುನವರ, ರಾಜು ಸೇಠ್ , ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next