ಬೆಳಗಾವಿ: ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿದ್ದ ತಾಯಿಯ ಪರದಾಟ ನೋಡದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಪ್ರಕರಣಕ್ಕೆ ದೊಡ್ಡ ತಿರುವು ದೊರಕಿದ್ದು, ಪೊಲೀಸರ ತನಿಖೆ ವೇಳೆ ಇಬ್ಬರ ಸಂಬಂಧ ತಾಯಿ-ಮಗನದ್ದು ಅಲ್ಲ ಎಂದು ಬಹಿರಂಗವಾಗಿದೆ.
ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಅವರು ಪ್ರಕರಣಕ್ಕೆ ಸಂಬಂಧಿಸಿ ವಿವರಗಳನ್ನು ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಯುವಕ ಹಾಗೂ ಮಹಿಳೆ ತಾಯಿ ಮಗ ಅಲ್ಲ. ಹಸಿವಿನಿಂದ ಆತ್ಮಹತ್ಯೆ ಎಂಬುದು ಸುಳ್ಳು ಎಂದು ತನಿಖೆ ವೇಳೆ ಕಂಡು ಬಂದಿದೆ.ಮೃತನ ನಿಜವಾದ ತಂದೆ, ತಾಯಿಯನ್ನು ನಂದಗಡ ಪೊಲೀಸರು ಕರೆಸಿ ವಿಚಾರಣೆ ಮಾಡಿದ್ದು ಸತ್ಯಾಂಶ ಬಯಲಾಗಿದೆ.
ಮೃತ ಬಸವರಾಜ್, ಶಾಂತವ್ವಳೊಂದಿಗೆ ಕಳೆದ 14ವರ್ಷದಿಂದ ಜತೆಗಿದ್ದ. ಕೂಲಿ ಕೆಲಸಕ್ಕಾಗಿ ಗೋವಾ, ಬೆಂಗಳೂರು ಸೇರಿ ಅನೇಕ ಕಡೆ ಇಬ್ಬರೂ ಜತೆಯಲ್ಲಿ ಹೋಗುತ್ತಿದ್ದರು. ಗೋವಾದಿಂದ ವಾಪಸಾಗುವ ವೇಳೆ ಇಬ್ಬರು ಪಾನಮತ್ತರಾಗಿದ್ದರು.ವಾಂತಿ ಮಾಡಿಕೊಂಡ ಕಾರಣ ರೈಲಿನಿಂದ ಕೆಳಗೆ ಇಳಿಸಲಾಗಿತ್ತು. ಬಳಿಕ ಶಾಂತವ್ವಳನ್ನು ಅಳ್ನಾವರದಲ್ಲಿ ಬಿಟ್ಟು ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಎನ್ ಜಿಓ ತನಿಖೆ ಪೂರ್ವಗೊಳ್ಳುವ ಮೊದಲೇ ತಾಯಿ, ಮಗ ಎಂಬ ನಿರ್ಧಾರಕ್ಕೆ ಬಂದಿದ್ದು, ಖಾನಾಪುರ ಮೂಲದ ಎನ್ ಜಿ ಓಗೆ ನೋಟಿಸ್ ಕೊಡಲಾಗಿದೆ. ಅನುಮಾನಸ್ಪದ ವಿಚಾರದಲ್ಲಿ ತಾವೇ ತಿರ್ಮಾನಕ್ಕೆ ಬರೋದು ತಪ್ಪು.ಇಬ್ಬರು ಪರಸ್ಪರ ಪರಿಚತರಾಗಿದ್ದು, ಜತೆಯಲ್ಲೇ ಇದ್ದರು . ಸಾವಿನಲ್ಲಿ ಮಹಿಳೆಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಎನ್ ಜಿಓ ಮೃತನ ಅಂತ್ಯಸಂಸ್ಕಾರಕ್ಕೆ ನೆರವಾಗಿತ್ತು. ಈ ವಿಚಾರ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಸುದ್ದಿಯಾಗಿ ಹಲವರು ಸಾಮಾಜಿಕ ತಾಣಗಳಲ್ಲಿ ಮರುಕ ವ್ಯಕ್ತಪಡಿಸಿದ್ದರು.