ಬೆಳಗಾವಿ: ಜಾನಪದ ಸಾಹಿತ್ಯ ಅತಿ ಶ್ರೀಮಂತಿಕೆ ಹೊಂದಿದ್ದು, ಕನ್ನಡ ಸಾಹಿತ್ಯ ದೇವಿಯ ಚೊಚ್ಚಲ ಕೂಸು ಜಾನಪದ ಸಾಹಿತ್ಯ ಎಂದು ಸಾಹಿತಿ ಡಾ| ಬಸವರಾಜ ಜಗಜಂಪಿ ಹೇಳಿದರು. ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ರವಿವಾರ ನಡೆದ ಸುವಿಚಾರ ಚಿಂತನಾ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ ಕುರಿತು ಅವರು ಉಪನ್ಯಾಸ ನೀಡಿದ ಆವರು, ಶ್ರೀಮಂತ, ಬಡವ, ಅಕ್ಷರ ಕಲಿತ ಎಲ್ಲರಿಗೂ ಪ್ರಿಯವಾದಿದ್ದು ಜನಪದ ಸಾಹಿತ್ಯ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಜಾನಪದ ಸಾಹಿತ್ಯ ನಶಿಸುವ ಹಂತಕ್ಕೆ ತಲುಪಿದೆ. ಅದನ್ನು ನಿರಂತರವಾಗಿ ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಎಲ್ಲರೂ ಮಾಡಬೇಕು ಎಂದರು.
ಎಂದೂ ಮರೆಯದ, ಅತಿ ಸುಂದರವಾದ, ಮೂರು ಜಗತ್ತನ್ನು ಒಂದೆಡೆ ತರುವ ತಾಕತ್ತು ಜಾನಪದ ಸಾಹಿತ್ಯಕ್ಕಿದೆ. ಇದು ನಿತ್ಯ ಬೆಳಗಿನ ಜಾವದಿಂದ ಎಲ್ಲರ ಬಾಯಲ್ಲೂ ಹರಿದಾಡುವ ಜಾನಪದಕ್ಕೆ ತನ್ನದೆಯಾದ ವೈಭವವಿದೆ. ಅದನ್ನು ಆಸ್ವಾದಿಸಿದಾಗ ಸಿಗುವ ಸುಖ ಬೇರೆಲ್ಲೂ ಇಲ್ಲ ಎಂದರು.
ಮೌಲಿಕ ಸಂದೇಶವನ್ನು ಜನಪದ ಹಾಡುಗಳ ಮೂಲಕ ಮಹಿಳೆಯರು ನೀಡುತ್ತಿದ್ದಾರೆ. ಜನಪದ ವಿಶ್ವವಿದ್ಯಾಲಯವೇ ನಮ್ಮ ನಾಡಿನಲ್ಲಿ ನೆಲಸಿದೆ. ಎಲ್ಲ ಸಾಹಿತ್ಯಕ್ಕೂ ಮೂಲ ಸಾಹಿತ್ಯ ಜಾನಪದ. ಇಂಥ ವಿವಿಗಳನ್ನು ನಾವು ಉಪಯೋಗಿಸಿಕೊಳ್ಳಬೇಕು. ಸಾಹಿತ್ಯದ ಭಾಷೆಯನ್ನು ಉಳಿಸಬೇಕಾಗಿದೆ. ಬಾಯಿಂದ ಬಾಯಿಗೆ ಹರಡಿದ ಜಾನಪದವನ್ನು ಹಾಡನ್ನು ಕೇಳುವುದಕ್ಕೆ ಎಂದಿಗೂ ಬೇಸರಿಸುವುದಿಲ್ಲ. ತಾಯಂದಿರು ಹೇಳುವ ಜಾನಪದ ಹಾಡುಗಳನ್ನು ನಾವು ಪ್ರೀತಿಸಬೇಕು. ಸಮಾಜ ಜೀವಿಯಾಗಬೇಕಾದ ಇಂದಿನ ಮಕ್ಕಳು ಮೊಬೈಲ್ ಯುಗದಲ್ಲಿ ಅಪಾಯಕಾರಿಯಾಗುತ್ತಿದ್ದಾರೆ. ಜಾನಪದ ಸಾಹಿತ್ಯದತ್ತ ಮಕ್ಕಳನ್ನು ಸೆಳೆಯಬೇಕಿದೆ ಎಂದರು.
ಸಮನ್ವಯದ ಸಹಕಾರ ಮೂರ್ತಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹುಕ್ಕೇರಿಯಂಥ ಸಣ್ಣ ಪಟ್ಟಣದಲ್ಲಿ ಹಿರೇಮಠವನ್ನು ಸ್ಥಾಪಿಸಿ ಸಮಾಜಮುಖೀ ಕಾರ್ಯ ಮಾಡುವುದರ ಮೂಲಕ ಬೆಳಗಾವಿ ನಗರದಲ್ಲಿ ಶಾಖಾ ಮಠವನ್ನು ಪ್ರಾರಂಭಿಸಿ ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಶ್ರೀ ಸಿದ್ದಲಿಂಗಸ್ವಾಮಿ ಕುಲಕರ್ಣಿ, ಮುಕ್ತಾರ ಪಠಾಣ ಸೇರಿದಂತೆ ಇತರರು ಇದ್ದರು.