Advertisement

ಮೋದಿ ಸಾಧನೆಗೆ ಜಗತ್ತೇ ಬೆರಗು: ಸೂಲಿಬೆಲೆ

09:56 AM Jan 10, 2019 | Team Udayavani |

ಬೆಳಗಾವಿ: ಇಡೀ ಜಗತ್ತು ಈಗ ಭಾರತವನ್ನು ಗೌರವದಿಂದ ನೋಡುತ್ತಿದೆ ಎಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಹಾಗೂ ಕಾರ್ಯವೈಖರಿಯೇ ಕಾರಣ. ಹೀಗಾಗಿ ಅವರನ್ನೇ ಪುನಃ ಪ್ರಧಾನಿ ಮಾಡುವ ಉದ್ದೇಶದಿಂದ ನಾವು ಟೀಮ್‌ ಮೋದಿಯನ್ನು ಸ್ಥಾಪನೆ ಮಾಡಿದ್ದೇವೆ ಖ್ಯಾತ ವಾಗ್ಮಿ ಹಾಗೂ ಟೀ ಮೋದಿ ಸಾರಥಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಇಲ್ಲಿಯ ಖಾಸಭಾಗದಲ್ಲಿರುವ ದೇವಾಂಗ ಮಂಗಲ ಕಾರ್ಯದಲ್ಲಿ ಬುಧವಾರ ನಡೆದ ಟೀಂ ಮೋದಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಮಾಡಿರುವ ಒಂದೊಂದು ಕೆಲಸಗಳು ಅದ್ಭುತ. ಈ ಕೆಲಸಗಳು ಭಾರತವನ್ನು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿ ಮಾಡಿದೆ. ನಮ್ಮ ದೇಶವನ್ನು ಅತೀ ಎತ್ತರದ ಸ್ಥಾನಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಮೋದಿ ಅವರಿಗೆ ಮಾತ್ರ ಇದೆ ಎಂದರು.

ನಮ್ಮ ದೇಶಕ್ಕಾಗಿ. ಅದರ ಉನ್ನತಿಗಾಗಿ ನಾವು ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ಟೀಂ ಮೋದಿಯನ್ನು ಆರಂಭ ಮಾಡಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಾಗಿದೆ. ದೇಶದ ಜನರಲ್ಲಿ ಸ್ವಾಭಿಮಾನ ಹೆಚ್ಚಾಗಿದೆ. ಮುಂದಿನ 20 ವರ್ಷಗಳಲ್ಲಿ ಭಾರತವನ್ನು ಸಾರ್ವಭೌಮ ರಾಷ್ಟ್ರವಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಯೋಗವನ್ನು ಜಗತ್ತೇ ಗೌರವಿಸುವಂತೆ ಮಾಡಿದ್ದಾರೆ. ಇದಕ್ಕಾಗಿ ಮತ್ತೆ ಅವರನ್ನು ಪ್ರಧಾನಿ ಮಾಡಬೇಕು ಎಂದರು.

ಮೋದಿ ಅವರನ್ನು ಮುಸ್ಲಿಮರ ವಿರೋಧಿ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ ಮುಸ್ಲಿಂ ರಾಷ್ಟ್ರಗಳ ಜನರೇ ಮೋದಿ ಅವರನ್ನು ಹೀರೋ ರೀತಿ ಕಾಣುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಮೋದಿಯಿಂದ ವೈಯಕ್ತಿಕವಾಗಿ ಏನು ಲಾಭವಾಗಿದೆ ಎನ್ನುವುದಕ್ಕಿಂತ ಅವರು ದೇಶಕ್ಕೆ ಏನು ಮಾಡಿದ್ದಾರೆ ಎನ್ನುವುದನ್ನು ನಾವು ನೋಡಬೇಕು.

ಹೀಗಿರುವಾಗ ಈಗಿನ ಸರಕಾರ ಬದಲಾಯಿಸಿದರೆ ಮುಂದಿನ 5 ವರ್ಷಗಳು ಇದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಒಂದು ವೇಳೆ ಈಗಿನ ಸರ್ಕಾರ ಬದಲಾಯಿಸಿದರೆ ತಲೆಯೇ ಇಲ್ಲದ ವ್ಯಕ್ತಿ (ರಾಹುಲ್‌ ಗಾಂಧಿ) ಪ್ರಧಾನಿ ಆಗುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದರು. ನಾವು ನಡೆಸುತ್ತಿರುವ ಈ ಕಾರ್ಯಕ್ರಮಗಳಿಗೆ ಮೋದಿ ಹಣ ನೀಡುವುದಿಲ್ಲ. ಸಮಾಜವೇ ಆರ್ಥಿಕವಾಗಿ ಸಹಕಾರ ನೀಡುತ್ತಿದೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ನಮ್ಮ ತಂಡ ಶ್ರಮಿಸುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಸೂಕ್ಷ್ಮ ಸಂಗತಿ ಅರಿಯದವರು ಪ್ರಧಾನಿಯಾಗಬೇಕೇ?
ಬೆಳಗಾವಿ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ರಾಹುಲ್‌ ಅವರಿಗೆ ಅದರ ಸ್ಪೆಲ್ಲಿಂಗ್‌ ಗೊತ್ತಿಲ್ಲ ಎನಿಸುತ್ತದೆ. ಯುದ್ಧ ವಿಮಾನದಲ್ಲಿ ಏನೇನಿದೆ, ವಿಶೇಷಗಳೇನು ಎನ್ನುವುದನ್ನು ದೇಶ ರಕ್ಷಣೆಯ ದೃಷ್ಟಿಯಿಂದ ಬಹಿರಂಗಪಡಿಸಲು ಆಗುತ್ತದೆಯೇ ಎಂದು ಭಾಷಣಕಾರ ಚಕ್ರವರ್ತಿ ಸೂಲೆಬೆಲೆ ಕಟುವಾದ ಶಬ್ದಗಳಲ್ಲಿ ಟೀಕಿಸಿದರು. ನಗರದ ಖಾಸಬಾಗ್‌ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸುಭದ್ರತೆ ಹಿತದೃಷ್ಟಿಯಿಂದ ಇಂತಹ ಸೂಕ್ಷ್ಮ ಸಂಗತಿಗಳನ್ನು ಪ್ರಕಟಿಸಲಾಗದು ಎನ್ನುವುದು ರಾಹುಲ್‌ಗೆ ಗೊತ್ತಿಲ್ಲವೇ, ಇಂಥವರಿಗೆ ಅಧಿಕಾರ ಕೊಡಬೇಕಾ ಎಂದು ಪ್ರಶ್ನಿಸಿದರು. ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು ಎಂದು ಕೆಲವರು ಬಯಸುತ್ತಿದ್ದಾರೆ. ಒಂದು ವಂಶದವರೇ ದೊಡ್ಡ ಹುದ್ದೆಯಲ್ಲಿರಬೇಕು ಎನ್ನುವುದು ಅವರ ಆಸೆ ಎಂದು ಟೀಕಿಸಿದರು. ದೇಶದ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ಕಠಿಣ ನಿರ್ಧಾರಗಳನ್ನು ಮಾಡಿದ್ದಾರೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದರು. ಜಿಎಸ್‌ಟಿ ಜಾರಿಗೆ ತಂದರು. ಲೂಟಿ ಮಾಡುತ್ತಿದ್ದವರನ್ನು ಬಂಧಿಸಿ ಒಳಗೆ ಹಾಕಿದರು. ಯಾವುದರಲ್ಲೂ ರಾಜಿ ಮಾಡಿಕೊಂಡಿಲ್ಲ. ಮೂರು ರಾಜ್ಯಗಳ ಚುನಾವಣೆಯಲ್ಲಿ ಸೋತ ತಕ್ಷಣ ಅವರ ಕೈಬಿಡುತ್ತೇವೆ ಎನ್ನುವುದು ಸರಿಯೇ ಎಂದು ಸೂಲಿಬೆಲೆ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next