ಹುಬ್ಬಳ್ಳಿ: ಬೆಳಗಾವಿಯಿಂದ ಹುಬ್ಬಳ್ಳಿ, ಶೃಂಗೇರಿ ಮಾರ್ಗವಾಗಿ ಬಾಳೆಹೊನ್ನೂರಿಗೆ ನೂತನ ಬಸ್ ಸಾರಿಗೆ ಸೇವೆಗೆ ಶುಕ್ರವಾರ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನೂತನ ಬಸ್ ಸೇವೆಗೆ ಚಾಲನೆ ನೀಡಿದರು.
ಅನಂತರ ಮಾತನಾಡಿದ ಅವರು, ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ರಂಭಾಪುರಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ನೇರ ಬಸ್ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಹಲವು ವರ್ಷಗಳಿಂದ ಇದ್ದ ಬೇಡಿಕೆ ಇಂದು ಈಡೇರಿದೆ. ಇದಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಹಾಗೂ ಸಂಸ್ಥೆ ಅಧಿಕಾರಿಗಳನ್ನು ಭಕ್ತರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ರಾಜ್ಯದ ಹಾಗೂ ನೆರೆ ಹೊರೆಯ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಆರಂಭಿಸುವ ಚಿಂತನೆ ಇದೆ. ಬಾಳೆಹೊನ್ನೂರಿಗೆ ಬಸ್ ಬೇಡಿಕೆ ಅನೇಕ ವರ್ಷಗಳಿಂದ ಇತ್ತು.
ಅಧಿಕಾರಿಗಳು ಅದಕ್ಕೆ ಅಗತ್ಯ ತಯಾರಿ ಕೈಗೊಂಡಿದ್ದು ಹಾಗೂ ಇದಕ್ಕೆ ಸಾರಿಗೆ ಸಚಿವರು ಒಪ್ಪಿಗೆ ನೀಡಿದ್ದರಿಂದ ಇಂದಿನಿಂದ ಸಂಚಾರ ಆರಂಭಗೊಂಡಿದೆ ಎಂದರು. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಿಂದ ಹೊರನಾಡು, ಕುಕ್ಕೆ ಸುಬ್ರಮಣ್ಯ, ಕೂಡಲಸಂಗಮ ಇನ್ನಿತರ ಕ್ಷೇತ್ರಗಳಿಗೆ ಶೀಘ್ರವೇ ಬಸ್ ಸಂಚಾರ ಆರಂಭಿಸಲಾಗುವುದು ಎಂದರು.
ಬೆಳಗಾವಿ-ಬಾಳೆಹೊನ್ನೂರು ನೂತನ ಬಸ್ ಧಾರವಾಡ, ಹುಬ್ಬಳ್ಳಿ, ಮುಂಡಗೋಡ, ಶಿರಸಿ, ಸಾಗರ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಬಾಳೆಹೊನ್ನೂರಿಗೆ ತಲುಪಲಿದೆ.