ಬೆಳ್ತಂಗಡಿ : ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನೂತನವಾಗಿ ತುಳು ತರಗತಿ ಆರಂಭವಾಯಿತು.
ತೃತೀಯ ಭಾಷೆಯಾಗಿ ಅಳವಡಿಸ ಲ್ಪಡುತ್ತಿರುವ ನೂತನ ತರಗತಿಯನ್ನು ಬೆಳಾಲು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಉದ್ಘಾಟಿಸಿ ಮಾತನಾಡಿ, ತುಳು ತರಗತಿಯ ಮೂಲಕ ನಮ್ಮ ನೆಲದ ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಈ ನೆಲೆಯಲ್ಲಿ ಬೆಳಾಲು ಪ್ರೌಢಶಾಲೆಯಲ್ಲಿ ಆರಂಭವಾಗುತ್ತಿರುವ ತುಳು ತರಗತಿ ಯಶಸ್ವಿಯಾಗಿ ಈ ಮೂಲಕ ತುಳುವಿಗೆ ಉನ್ನತ ಸ್ಥಾನ ಲಭ್ಯವಾಗಲಿ ಎಂದರು.
ಅತಿಥಿಗಳಾಗಿ ಬೆಳಾಲು ಗ್ರಾ. ಪಂ. ಸದಸ್ಯರಾದ ಸತೀಶ್ ಎಳ್ಳುಗದ್ದೆ, ವಿಮಲಾ ಒಡಿಪ್ರೊಟ್ಟು, ಕುಸುಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ಸಿಬಂದಿ, ಹೆತ್ತವರು ಭಾಗವಹಿಸಿದ್ದರು.
ಶಿಕ್ಷಕಿ ವಾರಿಜಾ ಎಸ್. ಗೌಡ ಸ್ವಾಗತಿಸಿ, ರವಿಚಂದ್ರ ಜೈನ್ ವಂದಿಸಿದರು. ವಿದ್ಯಾರ್ಥಿಗಳಾದ ಪವಿತ್ರಾ ಮತ್ತು ರೇಷ್ಮಾ ಕಾರ್ಯಕ್ರಮ ನಿರ್ವಹಿಸಿದರು.