Advertisement

“ಬರಗಾಲ ನಿರ್ವಹಿಸಲು ಆಗದಿದ್ದರೆ ಕೂಡಲೇ ತೊಲಗಿ’

06:00 AM Dec 12, 2018 | |

ವಿಧಾನಸಭೆ: ಸಮ್ಮಿಶ್ರ ಸರ್ಕಾರಕ್ಕೆ ಬರಗಾಲ ನಿರ್ವಹಿಸಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಪ್ರತಿಪಕ್ಷದ ನಾಯಕ
ಬಿ.ಎಸ್‌.ಯಡಿಯೂರಪ್ಪ ಕಿಡಿ ಕಾರಿದ್ದಾರೆ. ವಿಧಾನಸಭೆಯಲ್ಲಿ ಬರಗಾಲದ ಮೇಲೆ ನಿಲುವಳಿ ಸೂಚನೆ ಮಂಡಿಸಿ, ರಾಜ್ಯ ಸರ್ಕಾರದ ವೈಫ‌ಲ್ಯಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು. ರಾಜ್ಯದಲ್ಲಿ ನೂರು ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ, ಇದುವರೆಗೂ ಯಾವುದೇ ಸಚಿವರು ಬರ ಪೀಡಿತ ಜಿಲ್ಲೆಗಳಿಗೆ ತೆರಳಿ, ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿಲ್ಲ ಎಂದರು. ರಾಜ್ಯದಲ್ಲಿ 37 ಸದಸ್ಯರನ್ನು ಹೊಂದಿರುವ ಜೆಡಿಎಸ್‌ನವರಿಗೆ ಅಧಿಕಾರ ಮಾಡಲು ಅವಕಾಶ ಕೊಟ್ಟು ಕಾಂಗ್ರೆಸ್‌ ಕೈ ಕಟ್ಟಿ 
ಕುಳಿತುಕೊಂಡಿದೆ.

Advertisement

ರಾಜ್ಯದ ಈಗಿನದು ಸ್ಥಿತಿಗೆ ಕಾಂಗ್ರೆಸ್‌ ಜವಾಬ್ದಾರಿ ಹೊರಬೇಕು. ಕುಮಾರಸ್ವಾಮಿ ಅದೃಷ್ಟದ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮಿಬ್ಬರ ಹೊಂದಾಣಿಕೆ ಆಡಳಿತದಲ್ಲಿ ಕಂಡು ಬರುತ್ತಿಲ್ಲ. ಇಂತಹ ಸರ್ಕಾರ ಬೇಕಾ ಎಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ. ಸರ್ಕಾರದಲ್ಲಿ ಕೆಲಸ  ಮಾಡಲು ಆಗದಿದ್ದರೆ ಅಧಿಕಾರ ಬಿಟ್ಟುಹೊರಡಿ ಎಂದು ಆಗ್ರಸಿದರು. ತೆಂಗು ಬೆಳೆಗಾರರಿಗೆ ಪ್ರತಿ ಮರಕ್ಕೆ 500
ರೂ.ಪರಿಹಾರ ನೀಡುವ ಭರವಸೆ ನೀಡಿದ್ದರೂ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಿಲ್ಲ. ಜಲ ಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳಲ್ಲಿ 12 ಸಾವಿರ ಕೋಟಿ ರೂ.ಬಾಕಿ ಉಳಿದಿದೆ. ಶಾಲಾ ಮಕ್ಕಳಿಗೆ ಸೈಕಲ್‌ ವಿತರಣೆಯಾಗಿಲ್ಲ. ಬಸ್‌ ಪಾಸ್‌ ನೀಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳಿಂದ ಗೌರವ ಧನ ದೊರೆತಿಲ್ಲ. ಅನುದಾನಿತ ಶಾಲೆಗಳ ಶಿಕ್ಷಕರು, ಗುತ್ತಿಗೆ ನೌಕರರ ಸಂಬಳವಾಗಿಲ್ಲ ಎಂದು ಸರ್ಕಾರದ ವೈಫ‌ಲ್ಯಗಳನ್ನು ಪಟ್ಟಿ ಮಾಡಿದರು.
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 4,712 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ 481 ರೈತರು
ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರೆಯದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ
ಸರ್ಕಾರ ಕಾರ್ಖಾನೆ ಮಾಲೀಕರ ವಿರುದ್ಧ ದೂರು ದಾಖಲಿಸಲು ಮುಂದಾಗಬೇಕು ಎಂದು ಆಗ್ರಸಿದರು.

ಸಾಲ ಮನ್ನಾ ಗೊಂದಲ ಮುಗಿದಿಲ್ಲ: ಸಾಲ ಮನ್ನಾ ವಿಷಯದಲ್ಲಿ ರಾಜ್ಯ ಸರ್ಕಾರ ಸ್ಪಷ್ಟತೆ ಹೊಂದಿಲ್ಲ. ರಾಜ್ಯದಲ್ಲಿ ರೈತರಿಗೆ 45.8 ಲಕ್ಷ ಖಾತೆಗಳಿಗೆ 52,570 ಕೋಟಿ ರೂ.ಸಾಲ ನೀಡಲಾಗಿದೆ. ರೈತರ ಸಾಲವನ್ನು ನಾಲ್ಕು ವರ್ಷಗಳಲ್ಲಿ ಮನ್ನಾ ಮಾಡಲಾಗುವುದು
ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷದವರೆಗೆ ಸಾಲ ಮಾಡಿದ ರೈತರ ಕಥೆ ಏನಾಗಬೇಕು. ರಾಷ್ಟ್ರೀಕೃತ 
ಬ್ಯಾಂಕ್‌ಗಳಿಗೆ ಒನ್‌ ಟೈಮ್‌ ಸೆಟಲ್‌ ಮೆಂಟ್‌ ಮಾಡಿಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಸರ್ಕಾರ ಹೇಳಿದೆ. ಆದರೆ, 
ಬ್ಯಾಂಕ್‌ನವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಉದಯವಾಣಿ ಸಂದ ರ್ಶನ ಪ್ರಸ್ತಾಪಿಸಿದ ಬಿಎಸ್‌ವೈ
ವಿಧಾನಸಭೆ : “ಉದಯವಾಣಿ’ ಪತ್ರಿಕೆಯ ಮುಖಪುಟದಲ್ಲಿ ಸೋಮವಾರ ಪ್ರಕಟಗೊಂಡಿದ್ದ ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿಯವರ ಸಂದರ್ಶನವನ್ನು ಮಂಗಳವಾರ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಪ್ರಸ್ತಾಪಿಸಿದರು. ಬರ ಕುರಿತು ಚರ್ಚೆ ವೇಳೆ ಮುಖ್ಯಮಂತ್ರಿಯವರ ಸಂದರ್ಶನ ಪ್ರಸ್ತಾಪಿಸಿದ ಅವರು, “ಯಾರು ಏನೇ ಹೇಳಲಿ ಜನರಿಗೆ ಸುಲಭವಾಗಿ ಸಿಗುವ ಸಿಎಂ ನಾನು ಎಂದು ಉದಯವಾಣಿಗೆ ಸಂದರ್ಶನ ನೀಡಿದ್ದೀರಿ’ ಎಂದು ಹೇಳಿ ಕೆಲವು ಸಾಲುಗಳನ್ನು ಓದಿದರು. ಸರ್ಕಾರಿ ಬಂಗಲೆ ಪಡೆದಿಲ್ಲ ಎನ್ನುತ್ತೀರಿ. ಬೆಂಗಳೂರಿನಲ್ಲಿ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ತಂಗುತ್ತೀರಿ, ಶಾಸಕರಿಗೂ ಸಿಗುವುದಿಲ್ಲ. ಬೆಳಗಾವಿಗೆ ಬಂದರೆ ಸರ್ಕಾರಿ ಅತಿಥಿಗೃಹ ಬಿಟ್ಟು 18ಕಿ.ಮೀ. ದೂರದ ವಿಟಿಯು ಅತಿಥಿ ಗೃಹದಲ್ಲಿ ತಂಗಿದ್ದೀರಿ. ಯಾರೂ ಬರಬಾರದು ಎಂದು ಅಲ್ಲಿದ್ದೀರಾ? ಇನ್ನೆಲ್ಲಿ ಜನರಿಗೆ ಸುಲಭವಾಗಿ ಸಿಗುವುದು ಸ್ವಾಮಿ ಎಂದು ಪ್ರಶ್ನಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next