Advertisement

ಬೆಳಗಾವಿ: ದೇಶದ ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ-ಜಾರಕಿಹೊಳಿ

05:49 PM Jul 01, 2023 | Team Udayavani |

ಬೆಳಗಾವಿ: ದೇಶದ ಹಾಗೂ ಮಹಾನ್‌ ಪುರುಷರ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ. ಯಾರೋ ಈಗ ಮಧ್ಯೆ ಬಂದು ಇತಿಹಾಸವನ್ನು ಎಷ್ಟೇ ತಿರುಚಿದರೂ ಕೆಲ ವರ್ಷಗಳ ನಂತರವಾದರೂ ಸತ್ಯ ಹೊರ ಬರುತ್ತದೆ. ಇತಿಹಾಸ ತಿರುಚದಂತೆ ನೋಡಿಕೊಂಡರೆ ಉತ್ತಮ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಎದುರು ಶುಕ್ರವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಬಸವಣ್ಣ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ್‌, ಬುದ್ಧ ಅವರಂಥ ಮಹಾನ್‌ ಪುರುಷರ ಇತಿಹಾಸವನ್ನು ತಿರುಚಲು
ಸಾಧ್ಯವಿಲ್ಲ. ಅವರ ಇತಿಹಾಸ ಇದ್ದ ಹಾಗೆಯೇ ಇರಬೇಕು ಎಂದು ಪ್ರತಿಮೆ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು.

ಕೆಲ ತಿಂಗಳ ಹಿಂದೆ ಪ್ರದರ್ಶನವಾಗಿದ್ದ ರಾಣಿ ಚನ್ನಮ್ಮ ನಾಟಕದಲ್ಲಿ ಟಿಪ್ಪು ಸುಲ್ತಾನ್‌ ಪಾತ್ರವನ್ನು ಸೇರಿಸಿ ಗೊಂದಲ ಸೃಷ್ಟಿಸಲಾಗಿತ್ತು. ಟಿಪ್ಪು ಸುಲ್ತಾನ ಹೇಗೆ ಬಂದರು ಎಂಬುದು ತಿಳಿಯುವುದೇ ಇಲ್ಲ. ಇದು ಎಲ್ಲಿಯೂ ಸಂಪರ್ಕ ಆಗುವುದೇ ಇಲ್ಲ. ಹೀಗಾಗಿ ಇತಿಹಾಸ ಮತ್ತು ಮಹಾನ್‌ ಪುರುಷರ ವಿಷಯದಲ್ಲಿ ನಾವೆಲ್ಲರೂ ಗಂಭೀರವಾಗಿ ಇರಬೇಕಾಗುತ್ತದೆ. ಇತಿಹಾಸ ತಿರುಚುವ ಪ್ರಯತ್ನ ಆಗಬಾರದು. ಈ ನಿಟ್ಟಿನಲ್ಲಿ ಜಾಗೃತರಾದರೆ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

2013ರಲ್ಲಿ ನಾನು ಸಚಿವನಾಗಿದ್ದಾಗ ಸಂಗೊಳ್ಳಿ ರಾಯಣ್ಣ ಕಾಲೇಜು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೆವು.. ಈಗ ಕಾಲೇಜು ದೊಡ್ಡದಾಗಿ ಬೆಳೆದಿದೆ. ಈಗ ನಾವೇ ಇಲ್ಲಿ ಪ್ರತಿಮೆ ಅನಾವರಣಗೊಳಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಸಂಗೊಳ್ಳಿ ರಾಯಣ್ಣನ ಹೋರಾಟ ಮತ್ತು ಸ್ವಾತಂತ್ರ್ಯ ಪ್ರೇರಣೆ ಆಗಿದೆ. ರಾಯಣ್ಣ ಅವರ ಹೆಸರಿನಲ್ಲಿ ಸಾಕಷ್ಟು ಪುಸ್ತಕ, ನಾಟಕ, ಸಿನಿಮಾಗಳಿವೆ.

ಅವರ ಹೋರಾಟ, ಜೀವನ ಚರಿತ್ರೆಯನ್ನು ಬೇರೆ ಬೇರೆ ವಿಧಾನದಲ್ಲಿ ತೋರಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನು ಮುಂದೆ ಕಣ್ಣು ಮುಂದೆ ರಾಯಣ್ಣ ಕಾಣಲಿ ಎಂಬ ಕಾರಣಕ್ಕೆ ಪ್ರತಿಮೆ ನಿರ್ಮಿಸಲಾಗಿದೆ ಎಂದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮನ ಹೆಸರು ಕೇಳಿದರೆ ಮನಸ್ಸು ರೋಮಾಂಚನಗೊಳ್ಳುತ್ತದೆ. ಚನ್ನಮ್ಮನೊಂದಿಗೆ ನಿಂತು ಹೋರಾಡಿದ ಮಹಾನ್‌ ಪುರುಷ ಸಂಗೊಳ್ಳಿ ರಾಯಣ್ಣನ ಸಾಹಸ, ಧೈರ್ಯ, ಬಲಿದಾನ ಪ್ರೇರಣೆ ಆಗಿದೆ ಎಂದರು.

Advertisement

ದೇಶದಲ್ಲಿ ಚರಿತ್ರೆಯನ್ನು ತಿರುಚುವ ಕೆಲಸ ನಡೆಯುತ್ತಿದೆ. ಆದರೆ ಇಂಥ ಮಹಾನ್‌ ನಾಯಕರ ಚರಿತ್ರೆ ಯಾರಿಂದಲೂ ತಿರುಚಲು ಆಗುವುದಿಲ್ಲ. ಭೂಮಿ ಇರುವವರೆಗೆ ಇಂಥ ಮಹಾನ್‌ ಪುರುಷರ ಚರಿತ್ರೆ ಶಾಶ್ವತವಾಗಿ ಉಳಿಯುತ್ತದೆ. ರಾಷ್ಟ್ರಾಭಿಮಾನ ಈ
ಮಣ್ಣಿನ ಮೇಲೆ ಹುಟ್ಟಿದ ಪ್ರತಿಯೊಬ್ಬರ ಹಕ್ಕು. ಇದು ಯಾರೊಬ್ಬರ ಸ್ವತ್ತಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ ಮಾತನಾಡಿ, ಬೆಳಗಾವಿ ಅನೇಕ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇದೊಂದು ವೀರಭೂಮಿ. ಸಂಗೊಳ್ಳಿ ರಾಯಣ್ಣ, ಚನ್ನಮ್ಮ ಅವರಂಥ ಎಷ್ಟೋ ಸೇನಾನಿಗಳು ಈ ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಿಡದೇ ಅದನ್ನು ರಾಜ್ಯ ಶಿಕ್ಷಣ ನೀತಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಿ. ಸುಧಾರಣೆಗೋಸ್ಕರ ಬದಲಾವಣೆಯಾದರೆ ಉತ್ತಮ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮುಂದೆ ನಿಂತಾಗ ಅವರ ಚರಿತ್ರೆ ನಮ್ಮ ಕಣ್ಣ ಮುಂದೆ ಬರುತ್ತದೆ ಎಂದರು.

ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರಾಯೋಜಿ ಸಿದ ಮಾಜಿ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ, ಗೆರಿಲ್ಲಾ ಯುದ್ಧದ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದರು. ರಾಯಣ್ಣನೊಂದಿಗೆ ಏಳು ಜನರನ್ನು ಗಲ್ಲಿಗೇರಿಸಲಾಗಿದೆ. ಆ ಎಲ್ಲರನ್ನೂ ನಾವು ಸ್ಮರಿಸಬೇಕಿದೆ ಎಂದರು.

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿ ಕಾರಿ ಡಾ. ಎಂ. ಜಯಪ್ಪ ಮಾತನಾಡಿ, ನಾನು ಪ್ರಾಚಾರ್ಯನಾಗಿದ್ದಾಗ ಕೇವಲ ಏಳು ಕೋಣೆಗಳಿದ್ದವು. ಖಾಸಗಿ ಕಟ್ಟಡಗಳಲ್ಲಿ ತರಗತಿ ನಡೆಯುತ್ತಿದ್ದವು. ಇಂದು ಸುಮಾರು ಐವತ್ತು ತರಗತಿ ಕೊಠಡಿಗಳಿವೆ. ಇಂದು ಕಾಲೇಜು ಭೌತಿಕ ಮತ್ತು ಬೌದ್ಧಿಕವಾಗಿ ಬೆಳೆದಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಗ್ರಾಮೀಣ ಭಾಗದವರು. ಅವರಿಗೆ ತಕ್ಕಂತಹ ಉತ್ತಮ ಕಲಿಕಾ ವಾತಾವರಣ ಈ ಮಹಾವಿದ್ಯಾಲಯ ಈಗ ಹೊಂದಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ ಮಾತನಾಡಿ, ಜಾತಿ ಮತ್ತು ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ಇದರ ಕುರಿತು ಚಿಂತನೆ ನಡೆಸಬೇಕು ಎಂದರು. ಉತ್ತರ ಕ್ಷೇತ್ರದ ಶಾಸಕ ಆಸೀಫ್‌(ರಾಜು) ಸೇಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಶಸ್ತ್ರ ದ ಮೂಲಕ ಈ ದೇಶವನ್ನು ರಕ್ಷಿಸಲು ಹೋರಾಡಿದರು. ಇಂದು ವಿಜ್ಞಾನ ತಂತ್ರಜ್ಞಾನದ ಮೂಲಕ ದೇಶವನ್ನು ಕಟ್ಟುವಲ್ಲಿ ಹೋರಾಡಬೇಕು.

ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ತಕ್ಕಂತೆ ನಾವು ಸಿದ್ಧಗೊಳಿಸಬೇಕಿದೆ. ಶಿಕ್ಷಣ ಕ್ಷೇತ್ರ ಬದಲಾದರೆ ಎಲ್ಲಾ ಕ್ಷೇತ್ರಗಳು ಬದಲಾಗುತ್ತವೆ ಎಂದ ಅವರು, ಕಾಲೇಜಿಗೆ ಹೊಂದಿಕೊಂಡಿರುವ ಸಮುದಾಯ ಭವನವನ್ನು ಮಹಾವಿದ್ಯಾಲಯಕ್ಕೆ ಹಸ್ತಾಂತರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು. ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಕುಲಸಚಿವ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿ
ಪ್ರೊ. ಎಸ್‌.ಬಿ. ಆಕಾಶ, ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ, ಮುಖಂಡರಾದ ಲಕ್ಷ್ಮಣರಾವ ಚಿಂಗಳೆ, ಸುಧೀರ ಗಡ್ಡೆ, ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು. ಪ್ರಾಚಾರ್ಯ ಡಾ| ಎಸ್‌.ಎಸ್‌. ತೇರದಾಳ ವಂದಿಸಿದರು. ಡಾ| ಗಜಾನನ ನಾಯ್ಕ ನಿರೂಪಿಸಿ,. ಲಕ್ಷ್ಮಣ ನಾಯ್ಕ ಪ್ರಾರ್ಥಿಸಿದರು.

ವಿಶ್ವಗುರು ಬಸವಣ್ಣ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ್‌, ಬುದ್ಧ ಅವರಂಥ ಮಹಾಪುರುಷರ ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ. ಅವರ ಇತಿಹಾಸ ಇದ್ದ ಹಾಗೆಯೇ ಇರಬೇಕು.
ಸತೀಶ ಜಾರಕಿಹೊಳಿ,
ಜಿಲ್ಲಾ ಉಸ್ತುವಾರಿ ಸಚಿವರು

ದೇಶದಲ್ಲಿ ಚರಿತ್ರೆಯನ್ನು ತಿರುಚುವ ಕೆಲಸ ನಡೆಯುತ್ತಿದೆ. ಆದರೆ ಚರಿತ್ರೆ ಯಾರಿಂದಲೂ ತಿರುಚಲು ಆಗುವುದಿಲ್ಲ.
ರಾಷ್ಟ್ರಾಭಿಮಾನ ಈ ಮಣ್ಣಿನ ಮೇಲೆ ಹುಟ್ಟಿದ ಪ್ರತಿಯೊಬ್ಬರ ಹಕ್ಕು. ಇದು ಯಾರೊಬ್ಬರ ಸ್ವತ್ತಲ್ಲ.
ಡಾ| ಎಂ.ಸಿ. ಸುಧಾಕರ,
ಉನ್ನತ ಶಿಕ್ಷಣ ಸಚಿವರು

“ಕಾರ್ಯತತ್ಪರ’ ಅಭಿನಂದನಾ ಗ್ರಂಥ ಬಿಡುಗಡೆ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಅವರ ಕುರಿತು ಅಭಿನಂದನ ಗ್ರಂಥ ಕಾರ್ಯತತ್ಪರ ಬಿಡುಗಡೆಗೊಂಡಿತು. ಡಾ. ಸರಜೂ ಕಾಟ್ಕರ್‌ ಗ್ರಂಥದ ಕುರಿತು ಮಾತನಾಡಿದರು. ಈ ಗ್ರಂಥವನ್ನು ಪ್ರೊ. ಎಸ್‌.ಎಂ. ಗಂಗಾಧರಯ್ಯ ಪ್ರಧಾನ ಸಂಪಾದಕತ್ವದಲ್ಲಿ ಡಾ| ಪಿ. ನಾಗರಾಜ, ಡಾ| ಗಜಾನನ ನಾಯ್ಕ, ಡಾ| ಮಹೇಶ ಗಾಜಪ್ಪನವರ ಸಂಪಾದಿಸಿದ್ದಾರೆ. ಇದೇ ವೇಳೆ ಪ್ರೊ. ಎಂ. ರಾಮಚಂದ್ರಗೌಡ ದಂಪತಿಯನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next