ಬೆಳಗಾವಿ: ಗಡಿನಾಡಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನವೆಂಬರ್ 1ರಂದು ಕರೆ ಕೊಟ್ಟಿದ್ದ ಕರಾಳ ದಿನಾಚರಣೆಗೆ ನಿರೀಕ್ಷಿತ ಮಟ್ಟದಲ್ಲಿ ಜನ ಬೆಂಬಲ ಸಿಗದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಪ್ರತಿವರ್ಷ ನವೆಂಬರ್ 1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನಾಚರಣೆ ನಡೆಸುತ್ತಿದ್ದು, ಈ ಬಾರಿಯೂ ಬೆಳಗಾವಿ ಪೊಲೀಸರು ಕರಾಳ ದಿನಾಚರಣೆಗೆ ಷರತ್ತು ಬದ್ಧ ಅನುಮತಿ ನೀಡಿದ್ದರು.
ಆದರೆ ವಿಪರ್ಯಾಸ ಎಂಬಂತೆ ಕನ್ನಡಿಗರ ವಿರುದ್ಧದ ಕರಾಳ ದಿನಾಚರಣೆಗೆ ಎಂಇಎಸ್ ನ ಮೂರು ಬಣಗಳು ಪ್ರತ್ಯೇಕವಾಗಿ ರಾಲಿಗಳನ್ನು ನಡೆಸಿದ್ದರಿಂದ ಬೆರಳೆಣಿಕೆಯಷ್ಟು ಕಾರ್ಯಕರ್ತರು ಭಾಗಿಯಾಗುವ ಮೂಲಕ ನೀರಸವಾಗಿತ್ತು ಎಂದು ವರದಿ ವಿವರಿಸಿದೆ.
ಶಾಸಕ ಸಂಭಾಜಿ ಪಾಟೀಲ್, ಕಿರಣ ಠಾಕೂರ್ ಮತ್ತು ಮನೋಹರ ಕಿಣೆಕರ್ ಬಣಗಳಿಂದ ಪ್ರತ್ಯೇಕ ಜಾಥ ನಡೆಸಿರುವುದು ಎಂಇಎಸ್ ಒಗ್ಗಟ್ಟು ಮುರಿಯಲು ಕಾರಣವಾಗಿದೆ ಎಂದು ವರದಿ ಹೇಳಿದೆ.
ನಗರದ ಧರ್ಮವೀರ ಸಂಭಾಜಿ ಮೈದಾನದೀದಮ ಕರಾಳ ದಿನದ ಜಾಥಾ ಆಯೋಜಿಸಲಾಗಿತ್ತು, ಜಾಥಾ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಏತನ್ಮಧ್ಯೆ ಕರಾಳ ದಿನಾಚರಣೆಯಲ್ಲಿ ಮೇಯರ್ ಸಂಜೋತಾ ಬಾಂದೇಕರ್ ಭಾಗಿಯಾಗಿದ್ದು, ಈ ಬಗ್ಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕರಾಳ ದಿನಾಚರಣೆಯಲ್ಲಿ ಶಾಸಕ ಸಂಭಾಜಿ ಪಾಟೀಲ್, ತಾಪಂ, ಜಿಪಂ ಸದಸ್ಯರು ಭಾಗವಹಿಸಿದ್ದರು.