ಭೈರೋಬಾ ಕಾಂಬಳೆ
ಬೆಳಗಾವಿ: ಕನ್ನಡದ ಹಬ್ಬ ರಾಜ್ಯೋತ್ಸವ ಬಂತೆಂದರೆ ಗಡಿ ಜಿಲ್ಲೆಯಲ್ಲಿ ರೂಪಕ ವಾಹನಗಳ ತಯಾರಿ ಜೋರು ಪಡೆದುಕೊಳ್ಳುತ್ತದೆ. ಆದರೆ ಉತ್ಸವದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ರೂಪಕಗಳು ಕಾಟಾಚಾರಕ್ಕೆ ತಯಾರಾಗುತ್ತಿದ್ದು, ಹೆಸರಿಗೆ ಮಾತ್ರ ಟ್ಯಾಬ್ಲೋ ತಯಾರಿಸಿ ದಾಖಲೆಗೆ ಸೀಮಿತಗೊಳಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿಯ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ನೂರಾರು ರೂಪಕ ವಾಹನಗಳು ಭಾಗವಹಿಸುತ್ತವೆ. ಇದರಲ್ಲಿ 20ಕ್ಕೂ ಹೆಚ್ಚು ವಾಹನಗಳು ವಿವಿಧ ಇಲಾಖೆಗಳಿಂದ ಬಂದಿರುತ್ತವೆ. ನಾಡಿನ ಗತ ವೈಭವ ಸಾರುವ ಅಂಶಗಳನ್ನು ಇಟ್ಟುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ಆದರೆ ಪ್ರತಿ ವರ್ಷ ಒಂದೇ ಮಾದರಿಯ ರೂಪಕ ತಯಾರಿಸುತ್ತಿರುವುದು ಕಂಡು ಬರುತ್ತಿದೆ.
ರಾಜ್ಯೋತ್ಸವಕ್ಕೆ ಟ್ಯಾಬ್ಲೊ ತಯಾರಿಸಬೇಕೆಂಬ ಮಾಹಿತಿ ಇದ್ದರೂ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿವೆ. ಆದರೆ ಈ ವರ್ಷ ಪ್ರವಾಹದಿಂದಾಗಿ ಕೆಲ ಇಲಾಖೆಗಳಿಗೆ ಸಾಧ್ಯವಾಗದೇ ಕೇವಲ 16 ಇಲಾಖೆಗಳ ವಾಹನಗಳು ಮಾತ್ರ ಪಾಲ್ಗೊಳ್ಳುತ್ತಿವೆ. ರೂಪಕ ವಾಹನಗಳ ಆಯ್ಕೆ ಉಪಸಮಿತಿ ಸಭೆ ನಡೆಸಿ ಆಯಾ ಇಲಾಖೆಗಳಿಗೆ ಮುನ್ಸೂಚನೆ ನೀಡುತ್ತದೆ. ಆದರೆ ರಾಜ್ಯೋತ್ಸವ ಇನ್ನೇನು ಎರಡು ದಿನ ಬಾಕಿ ಇರುವಾಗಲೇ ಕಲಾವಿದರ ಬಳಿ ಬಂದು ತರಾತುರಿಯಲ್ಲಿ ರೂಪಕಗಳನ್ನು ಮಾಡಿಸಿಕೊಳ್ಳುತ್ತವೆ. ಆಕರ್ಷಕ ರೂಪಕಗಳ ಬಗ್ಗೆ ಕಾಳಜಿ ತೋರದೇ ಹೇಗಾದರೂ ಟ್ಯಾಬ್ಲೋ ಮಾಡಿಕೊಂಡು ರಾಜ್ಯೋತ್ಸವದಲ್ಲಿ ಭಾಗವಹಿಸಬೇಕೆಂಬ ಧಾವಂತ ಕಾಣುತ್ತಿದೆ. ತೋರಿಕೆಗೆ ಮಾತ್ರ ಕನ್ನಡಾಭಿಮಾನ ಕಾರ್ಯ ನಡೆಯುತ್ತಿದೆ. ಬಿಟ್ಟರೆ ಬಹುತೇಕ ಇಲಾಖೆಗಳು ಈ ರೀತಿ ಮಾಡುತ್ತಿವೆ ಎಂದು ಆರೋಪಿಸಲಾಗಿದೆ.
ರೂಪಕ ತಯಾರಿಸುವ ಕಲಾವಿದರನ್ನು ಕೊನೆಯ ಎರಡು ದಿನಗಳ ಮುಂಚೆ ಭೇಟಿಯಾಗಿ ಟ್ಯಾಬ್ಲೋಗಾಗಿ ಮುಗಿ ಬೀಳುತ್ತಾರೆ. ಆಗ ಸಮಯದ ಅಭಾವದ ನೆಪ ಹೇಳಿ ಹೇಗಾದರೊಂದು ಟ್ಯಾಬ್ಲೋ ಮಾಡಿಸಿಕೊಳ್ಳುತ್ತಾರೆ. ಇದರಿಂದ ಕಲಾವಿದರಿಗೂ ಸೂಕ್ತ ಸಂಭಾವನೆ ನೀಡದೇ, ಮೆರವಣಿಗೆಯಲ್ಲೂ ಆಕರ್ಷಕ ಟ್ಯಾಬ್ಲೋ ಇಲ್ಲದೇ ಇಲಾಖೆಗಳು ಮುಜುಗರಕ್ಕೀಡಾಗುವುದು ಸಹಜವಾಗಿದೆ.
ಕೊನೆಯ ದಿನ ಟ್ಯಾಬ್ಲೋಗಳು ತಯಾರಿ ಆಗುವುದಿಲ್ಲ ಎಂಬ ಖಾತ್ರಿ ಆಗುತ್ತಿದ್ದಂತೆ ಇಲಾಖೆಯ ಪ್ರತಿನಿಧಿಗಳು ನೇರವಾಗಿ ಸಂಘ-ಸಂಸ್ಥೆಗಳನ್ನು, ಗಣೇಶ ಮಂಡಳಿಗಳನ್ನು ಭೇಟಿಯಾಗುತ್ತಾರೆ. ಗಣೇಶೋತ್ಸವದಲ್ಲಿ ತಯಾರಿಸಿದ ಆಕರ್ಷಕ ಟ್ಯಾಬ್ಲೋಗಳ ಚಿತ್ರಗಳನ್ನು 5-10 ಸಾವಿರ ರೂ. ಗೆ ಖರೀದಿಸಿ ಅದಕ್ಕೆ ಬಣ್ಣ ಬಳಿದು ವಾಹನದಲ್ಲಿ ಮೆರವಣಿಗೆ ಮಾಡಿಸಿರುವ ಉದಾಹರಣೆಗಳೂ ಇವೆ. ನವರಾತ್ರಿಯಲ್ಲಿ ತಯಾರಿಸಿದ ದುರ್ಗಾ ಮಾತೆಯ ಮೂರ್ತಿ ತಂದು ಭುವನೇಶ್ವರಿ ಎಂದು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ ಎನ್ನುತ್ತಾರೆ ಕಲಾವಿದರು.
ಕಳೆದ 2018ರಲ್ಲಿ ರಾಜ್ಯೋತ್ಸವ ಮೆರವಣಿಗೆಯಲ್ಲಿ 21ಇಲಾಖೆಗಳ ರೂಪಕ ವಾಹನಗಳು ಪಾಲ್ಗೊಂಡಿದ್ದವು. ಇನ್ನು ಕೆಲ ಇಲಾಖೆಯವರು ಟ್ಯಾಬ್ಲೋ ತಯಾರಿಸಿದ ಕಲಾವಿದರ ಹಣವನ್ನೇ ನೀಡಿಲ್ಲ. ಅರ್ಧಕ್ಕರ್ಧ ಹಣ ಇನ್ನೂ ಕಲಾವಿದರ ಕೈಗೆ ಸಿಕ್ಕಿಲ್ಲ. ಚೆಕ್ ನೀಡದೇ ಹಂತ ಹಂತವಾಗಿ ನಗದು ರೂಪದಲ್ಲಿಯೇ ಹಣ ಸಂದಾಯ ಮಾಡುತ್ತಿವೆ. ಹೀಗಾದರೆ ಟ್ಯಾಬ್ಲೋ ತಯಾರಿಸುವುದಾದರೂ ಹೇಗೆ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.