Advertisement
ಈಗಾಗಲೇ ಹೋರಾಟದ ಕಿಡಿಯೊತ್ತಿಸಿರುವ ವಿಶ್ವ ಲಿಂಗಾಯತ ಮಹಾಸಭಾ ಇದೀಗ ಹೋರಾಟದ ಧ್ವನಿ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾಜ, ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಕಾರ, ಪ್ರೋತ್ಸಾಹದೊಂದಿಗೆ ರಾಜ್ಯದ ವಿವಿಧ ಕಡೆ ರ್ಯಾಲಿ ನಡೆಸಲು ಮುಂದಾಗಿದ್ದೇವೆ ಎಂಬುದು ವಿಶ್ವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಂಜಯ ಮಾಕಲ್ ಅವರ ಅನಿಸಿಕೆ.
ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಒತ್ತಾಯಿಸಿ ಬೀದರನಲ್ಲಿ ಇತ್ತೀಚೆಗೆ ನಡೆದ ಸಮಾವೇಶಕ್ಕೆ ದೊರೆತ ಜನ ಬೆಂಬಲ ಸಹಜವಾಗಿಯೇ ಹಲವು ಪರಿಣಾಮ ಬೀರತೊಡಗಿದೆ. ಸಮಾವೇಶದಿಂದ ಪ್ರೇರಿತರಾದ ರಾಜ್ಯದ ಇತರೆ ಜಿಲ್ಲೆಯವರು ಹಾಗೂ ನೆರೆಯ ಮಹಾರಾಷ್ಟ್ರದವರು ಸಹ ಸಮಾವೇಶಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಒತ್ತಾಯಿಸಿ ಆಗಸ್ಟ್ 22ರಂದು ಬೆಳಗಾವಿಯಲ್ಲಿ ರ್ಯಾಲಿ ನಡೆಸಲು ಉದ್ದೇಶಿಸಲಾಗಿದ್ದು, ಅದೇ ರೀತಿ ಸೆಪ್ಟಂಬರ್ 3ರಂದು ಮಹಾರಾಷ್ಟ್ರದ ಲಾತೂರಿನಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇನ್ನು ಆಗಸ್ಟ್ 14ರಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದರೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲೂ ಹೋರಾಟದ ಕಿಚ್ಚು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲೂ ಸಮಾವೇಶ ಕೈಗೊಳ್ಳಲು ಚಿಂತಿಸಲಾಗಿದೆ. ಬಸವ ಪರಂಪರೆಯ ವಿವಿಧ ಮಠಾಧೀಶರನ್ನು ಹೋರಾಟದಲ್ಲಿ ಸಕ್ರಿಯಗೊಳಿಸುವ ಮೂಲಕ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಗೆ ತೀವ್ರ ಸ್ವರೂಪ ನೀಡುವ ಯತ್ನಗಳು ನಡೆಯುತ್ತಿದ್ದು, ಗದಗ ತೋಂಟದಾರ್ಯ ಸ್ವಾಮೀಜಿ, ಚಿತ್ರದುರ್ಗದ ಡಾ| ಶಿವಮೂರ್ತಿ ಮುರುಘಾ ಶರಣರು, ಬಸವಧರ್ಮ ಪೀಠದ ಮಾತೆ ಮಹಾದೇವಿ, ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಸ್ವಾಮೀಜಿ, ಬೆಲ್ದಾಳ ಶರಣರು, ಅಕ್ಕ ಅನ್ನಪೂರ್ಣ ಮಾತಾಜಿ ಸೇರಿದಂತೆ ಅನೇಕ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ.
Related Articles
Advertisement
29ರಂದು ಜೆಡಿಎಸ್ ಲಿಂಗಾಯತ ಮುಖಂಡರ ಸಭೆ?ಲಿಂಗಾಯತ ಸ್ವತಂತ್ರ ಧರ್ಮದ ಕಾವು ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಜೆಡಿಎಸ್, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಲಿಂಗಾಯತ ಮುಖಂಡರ ಸಭೆ ಕರೆದು ಚರ್ಚಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸಭೆ ಜು.29ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಅಂದು ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾಪ ಹಾಗೂ ಜನ ಬೇಡಿಕೆಯಿಂದ ಉತ್ತರ ಕರ್ನಾಟಕದಲ್ಲಿ ಆಗಬಹುದಾದ ಪರಿಣಾಮ, ಪಕ್ಷದಿಂದ ಕೈಗೊಳ್ಳಬೇಕಾದ ನಿಲುವು, ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವರಿಕೆ ಕುರಿತಾಗಿ ಚರ್ಚಿಸಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಲಿಂಗಾಯತ ಅವೈದಿಕ ಧರ್ಮ
ಲಿಂಗಾಯತ ಅವೈದಿಕ ಧರ್ಮ, ವೀರಶೈವ ವೈದಿಕ ಧರ್ಮಕ್ಕೆ ಸೇರಿದ್ದು ಎರಡೂ ಒಂದೇ ಎನ್ನಲು ಹೇಗೆ ಸಾಧ್ಯ? ಕರ್ನಾಟಕದಲ್ಲಿನ ಲಿಂಗಾಯತರಿಗೆ ವೀರಶೈವರು ಎಂದು ಕರೆಯುವುದು ವಾಡಿಕೆ ಇದೆಯೇ ವಿನಃ ಲಿಂಗಾಯತ-ವೀರಶೈವ ಎರಡೂ ಒಂದೇ ಅಲ್ಲವೇ ಅಲ್ಲ. ಸ್ವತಂತ್ರ ಧರ್ಮದ ನಿಟ್ಟಿನಲ್ಲಿ ಈಗಾಗಲೇ ನಾವು ವಿವಿಧ ಮಠಾಧೀಶರನ್ನು ಭೇಟಿಯಾಗಿದ್ದು, ಹೋರಾಟ ತೀವ್ರಗೊಳ್ಳುವ ಅನಿವಾರ್ಯತೆ ಇದೆ.
– ಪ್ರೊ| ಎಸ್.ವಿ.ಪಟ್ಟಣಶೆಟ್ಟಿ, ಲಿಂಗಾಯತ ಸಮಾಜದ ಮುಖಂಡ. – ಅಮರೇಗೌಡ ಗೋನವಾರ