ಬೆಳಗಾವಿ: ಕೊರೊನಾ ಮತ್ತು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಹೊಸ ಭರವಸೆ ಮೂಡಿಸಿದೆ.
ಜಿಲ್ಲೆಯಲ್ಲಿ ಯೋಜನೆಯಡಿ ಒಂದು ಕೋಟಿ ಮಾನವ ದಿನ ಸೃಜಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ರಾಯಚೂರು ಜಿಲ್ಲೆ 96.40 ಲಕ್ಷ ಮಾನವ ದಿನ ಸೃಜನೆಯೊಂದಿಗೆ 2ನೇ ಸ್ಥಾನದಲ್ಲಿದೆ. 71.91ಲಕ್ಷ ಮಾನವ ದಿನ ಸೃಜಿಸಿರುವ ಕೊಪ್ಪಳ 3ನೇ ಸ್ಥಾನದಲ್ಲಿದ್ದರೆ, ವಿಜಯನಗರ ಜಿಲ್ಲೆ 58.24 ಲಕ್ಷ ಮತ್ತು ಬಳ್ಳಾರಿ ಜಿಲ್ಲೆ 50.89 ಲಕ್ಷ ಸಾಧನೆಯೊಂದಿಗೆ ಅನಂತರದ ಸ್ಥಾನದಲ್ಲಿವೆ. ಕೊನೆಯ ಸ್ಥಾನದಲ್ಲಿರುವ ಕೊಡಗು ಜಿಲ್ಲೆಯಲ್ಲಿ 5.14 ಲಕ್ಷ ಮಾತ್ರ ಮಾನವ ದಿನಗಳನ್ನು ಸೃಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 7.26 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12.36 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.
305.23 ಕೋಟಿ ರೂ. ಕೂಲಿ ಪಾವತಿ
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಎಪ್ರಿಲ್‌ನಿಂದ ಜ.4ರ ವರೆಗೆ ಒಂದು ಕೋಟಿ ಮಾನವ ದಿನ ಸೃಜಿಸಿ ಕಾರ್ಮಿಕರ ಬ್ಯಾಂಕ್ ಖಾತೆಗೆ 305.23 ಕೋಟಿ ಕೂಲಿ ಪಾವತಿ ಮಾಡಲಾಗಿದೆ.
1 ಕೋಟಿ ಮಾನವ ದಿನ ಸೃಜನೆಯ ಗುರಿ
2020-21, 2021-22 ಎರಡು ವರ್ಷಗಳಲ್ಲಿ ಸತತ 1 ಕೋಟಿಗೂ ಅಧಿಕ ಮಾನವ ದಿನಗಳನ್ನು ಸೃಜಿಸಿದ್ದು, ಈ ವರ್ಷ 2022-23ನೇ ಸಾಲಿನಲ್ಲೂ ಡಿಸೆಂಬರ್ ಅಂತ್ಯದ ವರೆಗೆ 1 ಕೋಟಿಯ ಗುರಿ ತಲುಪಲಾಗಿದೆ. ಜಿಲ್ಲೆಯ ಎಲ್ಲ 500 ಗ್ರಾ.ಪಂ.ಗಳಲ್ಲಿ ನರೇಗಾ ಕಾಮಗಾರಿ ಜಾರಿಯಲ್ಲಿದ್ದು, ಮಹಿಳೆಯರು, ಪುರು ಷರು ಹಾಗೂ ರೈತರು ಯೋಜನೆಯ ಲಾಭ ಪಡೆದಿದ್ದಾರೆ.
Related Articles
ಯೋಜನೆಯಡಿ ಹೊಸ ಕೆರೆ ನಿರ್ಮಾಣ, ಅಮೃತ ಸರೋವರ, ಕೆರೆ ಹೂಳೆತ್ತುವುದು, ನಮ್ಮ ಹೊಲ ನಮ್ಮ ದಾರಿ (ತೋಟ ಪಟ್ಟಿ ರಸ್ತೆ), ಪಂಚ ಸೂತ್ರದಡಿ (ಶಾಲಾ ಕಾಂಪೌಂಡ್, ಶಾಲಾ ಪೇವರ್ಸ್, ಮೈದಾನ, ಶೌಚಾಲಯ ಮತ್ತು ಅಡುಗೆ ಕೋಣೆ) ಹೀಗೆ ಶಾಲಾ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮಹಿಳೆಯರ ಸಂಖ್ಯೆ ಹೆಚ್ಚು
ರಾಜ್ಯದಲ್ಲಿ ಎರಡು ವರ್ಷಗಳ ಅಂಕಿ-ಸಂಖ್ಯೆಯನ್ನು ಗಮನಿಸಿದಾಗ ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾರ್ಷಿಕ 12 ಕೋಟಿ ಮಾನವ ದಿನಗಳ ಸೃಜನೆಯಲ್ಲಿ 6.30 ಕೋಟಿ ಮಹಿಳೆಯರೇ ಇರುವುದು ವಿಶೇಷ.
ವಲಸೆ ಹೋಗುವವರ ಪ್ರಮಾಣ ಗಣನೀಯವಾಗಿ ತಗ್ಗಿದೆ. ಜಿಲ್ಲೆಗೆ 2022-23ನೇ ಸಾಲಿನಲ್ಲಿ 1.10 ಕೋಟಿ ಮಾನವ ದಿನ ಸೃಜನೆ ಗುರಿ ನೀಡಿದ್ದು, ಡಿಸೆಂಬರ್ ಅಂತ್ಯದವರೆಗೆ 1 ಕೋಟಿ ಗುರಿ ಯನ್ನು ದಾಟಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ.
– ದರ್ಶನ್ ಎಚ್.ವಿ.
ಬೆಳಗಾವಿ ಜಿಪಂ ಸಿಇಒ
– ಕೇಶವ ಆದಿ