ಬೆಳಗಾವಿ: ಕಳೆದ ವರ್ಷ ಹೊಳಿ ಬಂದು ಎಲ್ಲ ಹಾಳು ಮಾಡಿ ಹೋಯಿತು. ಈಗ ಸ್ವಲ್ಪ ಸುಧಾರಿಸಿಕೊಂಡು ಕಣ್ಣು ಬಿಡಬೇಕು ಎನ್ನುವಾಗಲೇ ನಮಗೆ ಗೊತ್ತೆ ಇರದ ಕೊರೊನಾ ಮಹಾಮಾರಿ ಮತ್ತೆ ನಮ್ಮನ್ನು ನೆಲಕಚ್ಚುವಂತೆ ಮಾಡಿದೆ. ಏನು ಮಾಡಬೇಕು. ಯಾರ ಬಳಿ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ.
ಲದಾಗ ಭರಪೂರ ಬೆಳೆ ಇದೆ ಎಂದು ನೋಡಿ ಸಂತೋಷ ಪಡುವಂತಿಲ್ಲ. ಟೊಮಾಟೊ ಹಣ್ಣಾಗಿ ಕಣ್ಣಿಗೆ ಕುಕ್ಕುತ್ತಿವೆ. ಮೆಣಸಿನಕಾಯಿ ಭರ್ಜರಿಯಾಗಿ ಬಂದಿದೆ. ಪಪ್ಪಾಯಿ ಗೊಂಚಲು ಗೊಂಚಲು ಇವೆ. ಕಲ್ಲಂಗಡಿ ಬಳ್ಳಿಯ ತುಂಬಾ ಹರಡಿದೆ. ಒಂದಲ್ಲಾ ಹತ್ತಾರು ತರಕಾರಿಗಳು ತುಂಬಿಕೊಂಡಿದೆ. ಆದರೆ ಯಾವುದೂ ಮಾರಾಟ ಆಗುತ್ತಿಲ್ಲ. ಇನ್ನು ಬೆಳೆದ ಬೆಳೆಗೆ ಬೆಲೆ ಸಿಗುವ ಮಾತು ದೂರವೇ ಉಳಿಯಿತು.
ಈಗೀಗ ಹೊಲದಾಗಿನ ಬೆಳೆ ಹೋದರೆ ಸಾಕು ಎಂಬ ಸ್ಥಿತಿ ಬಂದಿದೆ. ಪ್ರಕೃತಿ ವಿಕೋಪಗಳಿಂದ ಕಂಗೆಟ್ಟು ಹೋಗಿರುವ ರೈತ ಸಮುದಾಯಕ್ಕೆ ಈಗ ಯಾವ ನಿರ್ಧಾರ ಕೈಗೊಳ್ಳಲು ಧೈರ್ಯ ಸಾಲುತ್ತಿಲ್ಲ. ಮುಂಗಾರು ಸಮೀಪಿಸಿದರೂ ಮುಖದಲ್ಲಿ ಬಿತ್ತನೆ ಉತ್ಸಾಹ ಕಾಣುತ್ತಿಲ್ಲ. ಖಾನಾಪುರ, ಗೋಕಾಕ, ಬೈಲಹೊಂಗಲ, ರಾಮದುರ್ಗ, ಸವದತ್ತಿ ಸೇರಿದಂತೆ ಎಲ್ಲ ಕಡೆ ಹೊಲಗಳಲ್ಲಿ ರಾಶಿ-ರಾಶಿ ಮೆಣಸಿನಕಾಯಿ, ಟೊಮಾಟೊ, ಕಲ್ಲಂಗಡಿ, ಬಾಳೆ, ವಿವಿಧ ತರಕಾರಿ ಬಿದ್ದಿವೆ. ಅದನ್ನು ಖರೀದಿ ಮಾಡುವವರು ಕಾಣುತ್ತಿಲ್ಲ. ರೈತರೇ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಬೇಕು ಎಂದರೆ ಮುಂದೆ ಯಾರಿಗೆ ಅದನ್ನು ಕೊಡಬೇಕು ಎಂಬ ಚಿಂತೆ. ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆಗಳು ಮಾರಾಟವಿಲ್ಲದೆ ಹಾಳಾಗುತ್ತಿವೆ.
ಕೊರೊನಾ ಲಾಕ್‌ಡೌನ್ ಪರಿಣಾಮ ಬೆಳೆದ ಬೆಳೆಗಳ ಮಾರಾಟ ಆಗುತ್ತಿಲ್ಲ. ಹೊಲದಲ್ಲೇ ಕೊಳೆಯುತ್ತಿದೆ. ನಷ್ಟದ ಮೇಲೆ ನಷ್ಟ ಆಗುತ್ತಿದೆ. ಇನ್ನೊಂದು ತಿಂಗಳು ಹೋದರೆ ಮುಂಗಾರು ಆರಂಭ. ಆದರೆ ಬಿತ್ತನೆ ಮಾಡಬೇಕೋ ಬೇಡವೋ ಎಂಬ ಚಿಂತೆ ಆಗಿದೆ ಎನ್ನುತ್ತಾರೆ ಅಥಣಿ ತಾಲೂಕಿನ ಶ್ರೀಶೈಲ ಚೌಗಲಾ. ಸಣ್ಣ ರೈತರು ನೆಲ ಕಚ್ಚಿದ್ದಾರೆ. ಬಹುತೇಕ ತರಕಾರಿ ಬೆಳೆಗಳು ಮಾರುಕಟ್ಟೆಗೆ ಬರದೇ ಹೊಲದಲ್ಲೇ ಕೊಳೆತಿವೆ. ಕೆಲವು ರೈತರು ಕಟಾವು ಮಾಡದೇ ಹೊಲದಲ್ಲೇ ಹಾಗೇ ಬಿಟ್ಟರು. ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಸಣ್ಣ ರೈತರನ್ನು ಉಳಿಸಬೇಕು. ನಿಜವಾಗಿ ಉಳಿಮೆ ಮಾಡುವವರ ಸಮೀಕ್ಷೆ ಮಾಡಿ ಅವರಿಗೆ ನೇರವಾಗಿ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ ಎನ್ನುತ್ತಾರೆ ಬೆಳಗಾವಿ ತಾಲೂಕು ರೈತ ಸಂಘದ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ.
ನಷ್ಟದಲ್ಲೂ ಮಾನವೀಯತೆ!
ಸತತ ಆರ್ಥಿಕ ಸಂಕಷ್ಟ ಹಾಗೂ ಬೆಳೆ ಹಾನಿಯಿಂದ ಅಪಾರ ನಷ್ಟ ಅನುಭವಿಸುತ್ತಿರುವ ರೈತ ಸಮುದಾಯ ಈಗ ದೊಡ್ಡ ಹಾಗೂ ಉದಾರ ದಾನಿಗಳಾಗಿ ಕಾಣುತ್ತಿದ್ದಾರೆ. ತಮ್ಮ ಬೆಳೆಗಳನ್ನು ಜನರಿಗೆ ಉಚಿತವಾಗಿ ಹಂಚಿ ಮಾನವೀಯತೆ ಮೆರೆಯುತ್ತಿದ್ದಾರೆ. ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ತಮ್ಮ ಬೆಳೆಗಳು ಮಾರಾಟವಾಗದೆ ಹೊಲದಲ್ಲಿ ಕೊಳೆಯುತ್ತ ಬಿದ್ದಿವೆ. ಹೀಗಾಗಿ ಕೆಲ ರೈತರು ಕಲ್ಲಂಗಡಿ, ಟೊಮಾಟೊ, ಪಪ್ಪಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ತಮ್ಮದೇ ವಾಹನದಲ್ಲಿ ತುಂಬಿಕೊಂಡು ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಅತ್ಯಂತ ಕಷ್ಟದ ಸಮಯದಲ್ಲಿರುವ ರೈತರ ನೆರವಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಹಾಪ್‌ಕಾಮ್ಸ್‌ಗಳು ಬರುತ್ತಿಲ್ಲ. ರೈತರ ತರಕಾರಿಗಳಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಲೆಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೊಗೆ ಪ್ರತಿ ಕೆಜಿಗೆ ಕೇವಲ 2 ರೂ. ಸಿಗುತ್ತಿದ್ದರೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ 20 ರೂ.ದಂತೆ ಮಾರಾಟವಾಗುತ್ತಿದೆ. ರೈತರು ಹಾಗೂ ಗ್ರಾಹಕರಿಬ್ಬರೂ ಶೋಷಣೆಗೆ ಒಳಗಾಗುತ್ತಿದ್ದಾರೆ.
ಸಿದಗೌಡ ಮೋದಗಿ,
ಭಾರತೀಯ ಕೃಷಿಕ ಸಮಾಜ ಅಧ್ಯಕ್ಷ
ಕೇಶವ ಆದಿ