ಬೆಳಗಾವಿ: ನಾಡಿನ ಖ್ಯಾತ ಸಾಹಿತಿ ಡಾ. ಡಿ. ಎಸ್. ಕರ್ಕಿಯವರಿಗೆ ಇದುವರೆಗೆ ಯಾವ ಪ್ರಶಸ್ತಿಯನ್ನೂ ನೀಡಿಲ್ಲ, ಈಗ ಮರಣೋತ್ತರವಾದರೂ ಅವರಿಗೆ ಪಂಪ ಪ್ರಶಸ್ತಿ ನೀಡಬೇಕು ಎಂದು ಜಾನಪದ ವಿದ್ವಾಂಸರಾದ ಡಾ| ಬಸವರಾಜ ಜಗಜಂಪಿ ಆಗ್ರಹಿಸಿದರು.
ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗೃಹದಲ್ಲಿ ರವಿವಾರ ಡಾ. ಡಿ. ಎಸ್. ಕರ್ಕಿ ಪ್ರತಿ‚ಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಡಿ. ಎಸ್. ಕರ್ಕಿಯವರ 115ನೇ ಜನ್ಮ ದಿನೋತ್ಸವ ಹಾಗೂ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕರ್ಕಿ, ಇಂಚಲ, ತುರಮರಿ ಅವರು ತಮ್ಮ ಇಡೀ ಬದುಕನ್ನು ಕನ್ನಡಕ್ಕಾಗಿ ತೇಯ್ದ ನಿಜ ಕನ್ನಡಿಗರು. ಇವರನ್ನು ನಾವು ಸ್ಮರಿಸಬೇಕು ಎಂದರು.
ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದು, ಗಿಲಗಂಚಿ ಅರಟಾಳ ಶಾಲೆಯ ಶಿಕ್ಷಕರಾಗಿ ಸೇವೆ ಆರಂಭಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡೀನ್ ಆಗಿ ನಿವೃತ್ತಿಯಾಗಿದ್ದರು. ಡಾ. ಡಿ. ಎಸ್. ಕರ್ಕಿ ಅವರು ಭಾವಜೀವಿ, ಮೃದು ಸ್ವಭಾವದವರು. ಎಲ್ಲ ಪ್ರಚಾರದಿಂದ ದೂರ ಉಳಿದ ಶ್ರೇಷ್ಠ ಕವಿಗಳು ಮತ್ತು ಶಿಕ್ಷಕರಾಗಿದ್ದರು. ರಾಷ್ಟ್ರ, ನಾಡು, ನಿಸರ್ಗ ಪ್ರೇಮದ ಬಗ್ಗೆ ಅದ್ಭುತವಾದ ಕವನಗಳನ್ನು ರಚಿಸಿದ್ದರು. ಅಧಿಕೃತವಾಗಿ ರಾಷ್ಟ್ರಕವಿ ಕುವೆಂಪು ಅವರ ಕವಿತೆ ನಾಡಗೀತೆಯಾಗಿದ್ದರೂ, ಕನ್ನಡ ಕಾರ್ಯಕ್ರಮದ ಆರಂಭದಲ್ಲಿ ಕರ್ಕಿಯವರ ಹಚ್ಚೇವು ಕನ್ನಡ ಗೀತೆ ಕೇಳುವುದು ತುಂಬಾ ಹೆಮ್ಮೆ ಎನಿಸುತ್ತದೆ ಎಂದು
ಹೇಳಿದರು.
ಡಾ| ಲಲಿತಾ ಕೆ. ಹೊಸಪ್ಯಾಟಿ ಅವರ “ಅವಳ ಪಾದದ ಗುರುತು” ಕೃತಿಗೆ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ. ಕೆ. ರಾಮೇಗೌಡ ಅವರು, ಗದುಗಿನ ಲಿಂ. ಸಿದ್ಧಲಿಂಗ ಸ್ವಾಮೀಜಿ ಕನ್ನಡ ಸ್ವಾಮೀಜಿ ಆಗಿದ್ದರು. ಗೋಕಾಕ ವರದಿಗೆ ಮೊದಲು ಕರೆ ಕೊಟ್ಟಿದ್ದು ಕೂಡ ಇವರೇ ಎಂದು ಸ್ಮರಿಸಿಕೊಂಡರು. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ದೊಡ್ಡ ಶಕ್ತಿಯಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದು ನಾಗನೂರು ರುದ್ರಾಕ್ಷಿ ಮಠ. ಹೀಗಾಗಿ ನಾಗನೂರು ರುದ್ರಾಕ್ಷಿ ಮಠವನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
Related Articles
ಕನ್ನಡಿಗರ ಸಾಮರ್ಥ್ಯ ಎಂತಹುದು ಎಂಬುದನ್ನು ತೋರಿಸಲು ಕರ್ಕಿಯವರ ಹಚ್ಚೇವು ಕನ್ನಡದ ದೀಪ ಒಂದೇ ಒಂದು ಕವನ ಸಾಕು. ನರ ನರಗಳನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ ಪ್ರಪಂಚದ ಯಾವುದೇ ಮೂಲೆಯಲ್ಲಿ ಕನ್ನಡದ ಕಾರ್ಯಕ್ರಮ ನಡೆದರೆ ಅಲ್ಲಿ ಇದು ಮೊಳಗಲೇಬೇಕು. ಅಷ್ಟೊಂದು ಶಕ್ತಿ ಅದಕ್ಕಿದೆ. ಈ ಕವನದ ಮೂಲಕ ಕರ್ಕಿಯವರು, ವಿಶ್ವದ ಕನ್ನಡಿಗರ ಮನದಲ್ಲಿ ವಾಸವಾಗಿದ್ದಾರೆ ಎಂದು ಸಿ. ಕೆ. ರಾಮೇಗೌಡ ಶ್ಲಾಘಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಲಲಿತಾ ಕೆ. ಹೊಸಪ್ಯಾಟಿ, ನಮ್ಮ ಎದೆಯ ಮಂದಿರದಲ್ಲಿ ಕರ್ಕಿಯವರು ಕನ್ನಡದ ದೀಪ ಹಚ್ಚಿ ಹೋಗಿದ್ದಾರೆ. ಇದು ಎಂದೂ ಆರದ ದೀಪ. ಅವರ ಹೆಸರಿನಲ್ಲಿ ನನಗೆ ಸಿಕ್ಕಿರುವ ಈ ಪ್ರಶಸ್ತಿ ನನ್ನ ಜೀವ ಹೋದರೂ ಶಾಶ್ವತವಾಗಿಇರುವಂತಹ ಶ್ರೇಷ್ಠ ಪ್ರಶಸ್ತಿ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಲ್. ಎಸ್. ಶಾಸ್ತ್ರೀ, ಪ್ರೊ. ಎಂ. ಎಸ್. ಇಂಚಲ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ಬಿ. ಎಸ್. ಗವಿಮಠ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿಗಳಾದ ಸಿದ್ರಾಮಪ್ಪ ಹೊನ್ನಳ್ಳಿ, ಸುನೀಲ ಸಾಣಿಕೊಪ್ಪ, ಮಲ್ಲೇಶ ಕೋಮಾರಶೆಟ್ಟಿ, ಶೆ„ಲಾ ಭಟ್ಟ, ಉಮಾ ಅಂಗಡಿ, ಡಾ. ಅಡಿವೆಪ್ಪ ಇಟಗಿ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು. ಟ್ರಸ್ಟ್ ಅಧ್ಯಕ್ಷ ಶಿವಪುತ್ರ ಕರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಉಪಾಧ್ಯಕ್ಷ ರವೀಂದ್ರ ಕರ್ಕಿ, ಟ್ರಸ್ಟಿಗಳಾದ ವಿಜಯಾದೇವಿ ಕರ್ಕಿ, ರಾಜಶೇಖರ ಕರ್ಕಿ, ರಾಜಶೇಖರ ಕರ್ಕಿ, ಶಿವಲೀಲಾ ಹೂಲಿ, ಮನೋಹರ ಕರ್ಕಿ, ಮಲ್ಲಿಕಾರ್ಜುನ ಬೆಲ್ಲದ, ಶೋಭಾ ಉಳ್ಳಾಗಡ್ಡಿ, ಜ್ಯೋತಿಲಕ್ಷಿ¾ ಗೊಂದಿ, ರಾಜೇಶ್ವರಿ ಕರ್ಕಿ,ಹಿರಿಯ ಸಾಹಿತಿ ಯ. ರು. ಪಾಟೀಲ ಉಪಸ್ಥಿತರಿದ್ದರು. ಗೌರಮ್ಮ ಕರ್ಕಿ ನಿರೂಪಿಸಿದರು. ಟ್ರಸ್ಟ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಸ್ವಾಗತಿಸಿದರು. ಖಜಾಂಚಿ ಆನಂದ ಕರ್ಕಿ ವಂದಿಸಿದರು. ನಯನಾ ಗಿರಿಗೌಡರ ಹಾಗೂ ಸಂಗೀತ ಬಳಗ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.