Advertisement

ಬೆಳಗಾವಿ: ಪ್ರಶಸ್ತಿ ಬಂದೊಡನೆ ಪ್ರಚಾರದ ಗೀಳು ಬೇಡ: ಅಲ್ಲಾಗಿರಿರಾಜ್‌

05:40 PM Jun 19, 2023 | Team Udayavani |

ಬೆಳಗಾವಿ: ಪ್ರಶಸ್ತಿ ಬಂದಿದೆ ಎಂದೊಡನೆ ಹೆಚ್ಚಿನ ಕವಿಗಳು ಪ್ರಚಾರದ ಗೀಳಿಗೆ ಬೀಳುತ್ತಾರೆ. ಪ್ರಶಸ್ತಿ ಬರುವುದು ಕವಿತೆಗೆ ಹೊರತು ಕವಿಗಲ್ಲ ಎಂಬ ಸತ್ಯವನ್ನು ಅರಿಯಬೇಕು. ಕವಿ, ಸಾಹಿತಿಯಾದವರು ಮೊದಲು ತಮ್ಮ ಓದುಗ ಬಳಗವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಸಾಹಿತ್ಯವು ಓದುಗರ ಮನಸ್ಸನ್ನು ಮುಟ್ಟುವುದಿಲ್ಲವೋ, ಅಲ್ಲಿಯವರೆಗೆ ಅದು ಕೇವಲ ತೂಕದ ಸಾಹಿತ್ಯವಾಗುತ್ತದೆ ಎಂದು ಖ್ಯಾತ ಗಜಲ್‌ ಕವಿ ಅಲ್ಲಾಗಿರಿರಾಜ್‌ ಹೇಳಿದರು.

Advertisement

ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಹƒದಯ ಸಾಹಿತ್ಯ ಪ್ರತಿಷ್ಠಾನ ಸಹಯೋಗದೊಂದಿಗೆ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಗಜಲ್‌ ಇದು ನವಾಬರ ಅರಮನೆಯಲ್ಲಿ ಹಾಡುವಂತಹ ಸಾಹಿತ್ಯವಾಗಿತ್ತು. ಮುಂದಿನ ದಿನಗಳಲ್ಲಿ ಬೀದಿಗೆ ಬಂದು, ನಂತರ ಜಗತ್ತಿನ ಎಲ್ಲ ಭಾಷೆಗಳ ಕಾವ್ಯರಾಣಿ ಎಂಬ ಹೆಸರನ್ನು ಪಡೆಯಿತು.

ಸಹೃದಯ ವೇದಿಕೆ ಮೂಲಕ ಗಜಲ್‌ ಹಾಗೂ ಕಾವ್ಯ ಪ್ರಕಾರದಲ್ಲಿಯ ಅತ್ಯತ್ತಮ ಕೃತಿಗಳನ್ನು ಹುಡುಕಿ ಪ್ರಶಸ್ತಿಗಳನ್ನು ನೀಡುತ್ತಿರುವ ನಾಗೇಶ ನಾಯಕ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಕವಿಗಳಾದ ಡಾ| ರತ್ನಾಕರ ಕುನಗೋಡು ಮತ್ತು ಮಹಾದೇವ ಎಸ್‌. ಪಾಟೀಲ ಅವರ ಸಹೃದಯ  ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿಗಳ ಕುರಿತು ಮಾತನಾಡಿದ ಆರ್‌.ಪಿ.ಡಿ. ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್‌. ಬಿ. ಕೋಲಕಾರ, ಈ ಕವಿಗಳ ಕೃತಿಗಳಲ್ಲಿ ವಚನಗಳ ಛಾಯೆಯಿದೆ. ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳ ವಿಡಂಬನೆಯಿದೆ. ಈ ಕವಿದ್ವಯರು ಭವಿಷತ್ತಿನ ಭರವಸೆಯ ಕವಿಗಳು ಎಂದು ಹೇಳಿದರು.

Advertisement

ಪ್ರಾಸ್ತವಿಕ ಭಾಷಣ ಮಾಡಿದ ನಾಗೇಶ ಜೆ. ನಾಯಕ ಅವರು ಸಮಾಜದಿಂದ ನಾನು ಸಾಕಷ್ಟು ಪಡೆದಿದ್ದೇನೆ. ಪ್ರತಿಯಾಗಿ ಏನನ್ನಾದರೂ ಕೊಡಬೇಕೆಂಬುದೇ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಹುಟ್ಟಿಗೆ ಕಾರಣ. ಕಾವ್ಯ ನನ್ನ ಮೆಚ್ಚಿನ ಪ್ರಕಾರ. ಅಲ್ಲದೇ
ಮರೆಯಾಗಿ ಉಳಿದಿರುವ ಗಜಲ್‌ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಕಾವ್ಯ ಹಾಗೂ ಗಜಲ್‌ ಪ್ರಕಾರಕ್ಕೆ ಪ್ರಶಸ್ತಿಯನ್ನು ಕೊಡಲಾಗುತ್ತಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಕವಿಗಳಾದ ಡಾ, ರತ್ನಾಕರ ಕುನಗೋಡು ಮತ್ತು ಮಹಾದೇವ ಎಸ್‌. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಲೇಖಕರಾದ ಎಲ್‌. ಎಸ್‌. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ. ರಾಮಯ್ಯ, ಮುನವಳ್ಳಿ ಅರ್ಬನ್‌ ಬ್ಯಾಂಕ್‌ ಯರಗಟ್ಟಿ ಶಾಖೆ ವ್ಯವಸ್ಥಾಪಕರಾದ ಶಿವಾನಂದ ಬಿ. ಮದ್ದಾನಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಾಶೀಮ ಎ. ತಹಶೀಲದಾರ ಅವರನ್ನು ಸನ್ಮಾನಿಸಲಾಯಿತು.

ಕವಿಗಳಾದ ನದೀಮ್‌ ಸನದಿ, ನಿರಜಾ ಗಣಾಚಾರಿ, ಶಿವಾನಂದ ಉಳ್ಳಿಗೇರಿ, ಮಂಜುಳಾ ಶೆಟ್ಟರ, ಶೇಖರ ಹಾದಿಮನಿ, ರಾಜೇಶ್ವರಿ ಹಿರೇಮಠ, ಕಿರಣ ಗಣಾಚಾರಿ, ಸೌಮ್ಯ ಕೋಟಗಿ, ಸುಖದೇವಾನಂದ ಚವತ್ರಿಮಠ, ಬಸವರಾಜ ಹೊನಗೌಡರ್‌, ಮಮತಾ ಶಂಕರ, ಎಮ್‌, ಡಿ. ಬಾವಾಖಾನ, ಜ್ಯೋತಿ ಮಾಳಿ, ಶ್ರೀಶೈಲ್‌ ಹುಬ್ಬಳ್ಳಿ, ಅನಸೂಯಾ ಮೇಟ್ಯಾಲ, ರೇಣುಕಾ ಕಠಾರಿ, ಶಿವಾನಂದ ಬಾಗಾಯಿ, ಎಂ.ಬಿ. ಜ್ಞಾನೇಶ್ವರ, ಸಂತೋಷ ನಿಂಗರೆಡ್ಡ, ಆನಂದ ಪಾಟೀಲ, ನೀಲಾ ಕೆ. ಮಾಲಾ ಅಕ್ಕಿಶೆಟ್ಟಿ ಕವಿತಾ ವಾಚನ ಮಾಡಿದರು. ಸಿದ್ದಪ್ಪ ಗರಗದ, ಬಸವರಾಜ ಪಟ್ಟಣಶೆಟ್ಟಿ, ಉಪಸ್ಥಿತರಿದ್ದರು. ಪ್ರವೀಣ ಶೆಟ್ಟಪ್ಪನವರ ಸ್ವಾಗತಿಸಿದರು. ರಮೇಶ ತಳವಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next