ಉದಯವಾಣಿ ಸಮಾಚಾರ
ಬೆಳಗಾವಿ: ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿ ಭಯದ ವಾತಾವರಣ ಸೃಷ್ಟಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀ ರಾಮಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶ್ರೀ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ ಮುತಾಲಿಕ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗೋ ರಕ್ಷಕರು, ಮತಾಂತರ ತಡೆಯುವವರು, ಲವ್ ಜಿಹಾದ್ ವಿರೋ ಧಿಸುವ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಹಳೆಯ ಕೇಸುಗಳನ್ನು ಮರು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂರ ಮೇಲಿನ ಕೇಸುಗಳನ್ನು ಒಪನ್ ಮಾಡುತ್ತಿಲ್ಲ. ಪಿಎಫ್‌ಐ, ಎಸ್‌ಎಫ್‌ಐ, ಎಸ್ ಡಿಪಿಐ ಕೇಸುಗಳನ್ನು ಮರು ತನಿಖೆ ಮಾಡುತ್ತಿಲ್ಲ. ಆದರೆ ಹಿಂದೂ ಕಾರ್ಯಕರ್ತರ ಮೇಲಿದ್ದ ಹಳೆಯ ಕೇಸುಗಳನ್ನು ತೆಗೆದು ನೋಟಿಸ್ ಕೊಟ್ಟು ಹೆದರಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಹಠಾವೋ ಕರ್ನಾಟಕ ಬಚಾವೋ ಆಂದೋಲನ ಮಾಡಬೇಕಾಗುತ್ತದೆ. ಬೆಳಗಾವಿಯಲ್ಲಿ ಅಕ್ಕ, ತಮ್ಮನ ಮೇಲೆ ಕೆಲ ಪುಂಡರು ದೌರ್ಜನ್ಯ ಮಾಡಿದ್ದು, ಹುಬ್ಬಳ್ಳಿಯಲ್ಲಿ ಶ್ರೀರಾಮ ಕರಸೇವಕನ ಮೇಲಿನ 31 ವರ್ಷಗಳ ಹಳೆಯ ಕೇಸು ಮರು ತನಿಖೆಗೆ ಬಂಧಿಸಿದ್ದು, ದೊಡ್ಡಬಳ್ಳಾಪುರದಲ್ಲಿ 35 ಕ್ವಿಂಟಲ್ ಗೋ ಮಾಂಸ ಹಿಡಿದ ಹಿಂದೂ ಕಾರ್ಯಕರ್ತನನ್ನೇ ಜೈಲಿಗೆ ಕಳುಹಿಸಿದ್ದು, ಬೆಳಗಾವಿಯಿಂದ ಗೋವಾಕ್ಕೆ ಸಾಗಾಟ ಮಾಡುತ್ತಿದ್ದ ಗೋ ರಕ್ಷಣೆ ಮಾಡಿದ್ದ ಕಾರ್ಯಕರ್ತರನ್ನು ಬಂಧಿಸಿದ್ದು, ದತ್ತ ಪೀಠದ ಏಳು ವರ್ಷಗಳ ಹಿಂದಿನ ಕೇಸು ಒಪನ್ ಮಾಡಿರುವುದು ಸೇರಿದಂತೆ ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಭಯದ ವಾತಾವರಣ ನಿರ್ಮಿಸಿದೆ ಎಂದು ವಾಗ್ಧಾಳಿ ನಡೆಸಿದರು.
ಈಗ ಭಾರತದಲ್ಲಿ ಎದ್ದಿರುವ ರಾಮನ ಅಲೆಯನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆಗಳಲ್ಲಿ ರಾಮನ ಭಕ್ತಿಯ ಅಲೆ ದೊಡ್ಡ ಪ್ರಮಾಣದಲ್ಲಿ ಎದ್ದಿದೆ. ರಾವಣನ ಮಾನಸಿಕತೆ ಹೊಂದಿರುವ ಕಾಂಗ್ರೆಸ್‌ನ ದುಷ್ಟ ಶಕ್ತಿಗಳಿಂದ ಇದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್‌ನವರಿಗೆ ಮುಸ್ಲಿಂ ಮತಗಳಿಂದ ಗೆದ್ದಿದ್ದೇವೆ ಎಂಬ ಅಹಂಕಾರ ಇದೆ. ಮುಸ್ಲಿಂ ಮತಗಳಿಂದ ಕಾಂಗ್ರೆಸ್ ಗೆದ್ದಿಲ್ಲ, ಹಿಂದುಗಳೂ ಮತ ಹಾಕಿದ್ದಾರೆ. ಒಂದೇ ಕಡೆಗೆ ಸರ್ಕಾರ ಆಡಳಿತ ನಡೆಸಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದೂ ಸಮಾಜ ಒಂದಾಗಲಿದೆ. ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಇರಬೇಕು ಎಂದು ಗುಡುಗಿದರು.