ವರದಿ: ಕೇಶವ ಆದಿ
ಬೆಳಗಾವಿ: ಮೊದಲು ಗಡಿ ಮತ್ತು ಭಾಷಾ ವಿವಾದ ಬಗೆಹರಿಯಲಿ. ನಂತರವಷ್ಟೇ ಅಭಿವೃದ್ಧಿ ಮಾತು. ನಮಗೆ ವಿವಾದ ಮುಖ್ಯ. ಪ್ರಗತಿ ಅಲ್ಲ. ಇದು ಬೆಳಗಾವಿ ಮಹಾನಗರ ಪಾಲಿಕೆಯ ಇದುವರೆಗಿನ ಸದಸ್ಯರ ಸರ್ವಾನುಮತದ ಸ್ಪಷ್ಟ ಅಭಿಪ್ರಾಯ.
80ರ ದಶಕದಲ್ಲಿ ಅಂದರೆ 1984ರಲ್ಲಿ ನಗರಸಭೆಯಿಂದ ನಗರಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದ ಬೆಳಗಾವಿ ಮಹಾನಗರ ಪಾಲಿಕೆ ತನ್ನ ಉನ್ನತೀಕರಣಕ್ಕೆ ಅನುಗುಣವಾಗಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಿದ ಉದಾಹರಣೆಗಳೇ ಇಲ್ಲ. ಸದಾ ವಿವಾದದ ಕೇಂದ್ರವಾಗಿರುವ ಈ ಪಾಲಿಕೆ ಅಭಿವೃದ್ಧಿ ವಿಷಯದಲ್ಲಿ ಉಳಿದವರಿಗೆ ಮಾದರಿಯಾಗಲಿಲ್ಲ. ಹೊಸ ಹೊಸ ಸದಸ್ಯರು ಗೆದ್ದುಬಂದರೂ ಅವರೂ ಸಹ ಹಳೆಯ ವಿವಾದದ ಪರಂಪರೆಗೆ ಅಂಟಿಕೊಂಡರು.
ರಾಜ್ಯದಲ್ಲೇ ಸೂಪರ್‌ಸೀಡ್ ಶಿಕ್ಷೆಯಲ್ಲಿ ದಾಖಲೆ: ಬೆಳಗಾವಿ ಮಹಾನಗರಪಾಲಿಕೆ ತನ್ನ ಇತಿಹಾಸದಲ್ಲಿ ಎರಡು ಬಾರಿ ಸೂಪರ್ ಸೀಡ್ ಶಿಕ್ಷೆಗೆ ಗುರಿಯಾಗಿದೆ. 2005 ರಲ್ಲಿ ಧರ್ಮಸಿಂಗ್ ಸರಕಾರವಿದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸರಿಯಾಗಿ ಸಭೆಗಳನ್ನು ನಡೆಸಿಲ್ಲ ಎಂಬ ಕಾರಣಕ್ಕೆ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲಾಗಿತ್ತು. ಆಗ ವಿಜಯ ಮೋರೆ ಮಹಾಪೌರರಾಗಿದ್ದರು. ಇದಾದ ಬಳಿಕ 2011 ರಲ್ಲಿ ಪಾಲಿಕೆಯ ಹಣಕಾಸು ಸ್ಥಿತಿ ಅಧೋಗತಿಗೆ ಹೋಗಿದ್ದರಿಂದ ಆಗಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದ್ದರು. ಇದಕ್ಕೆ ಸ್ವತಃ ಪಾಲಿಕೆಯ ಸದಸ್ಯರು ಮತ್ತು ಅವರ ಸ್ವಾರ್ಥ ರಾಜಕಾರಣವೇ ಮುಖ್ಯ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಎರಡೂ ಬಾರಿ ಎಂಇಎಸ್ ಮಹಾಪೌರರಾಗಿದ್ದಾಗಲೇ ಪಾಲಿಕೆ ಸೂಪರ್‌ಸೀಡ್ ಆಗಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಳಗಾವಿ ನಗರದ ಅಭಿವೃದ್ಧಿಯ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕಿಲ್ಲ. 2005ರಲ್ಲಿ ಆಗಿನ ಮಹಾಪೌರ ವಿಜಯ ಮೋರೆ ಅವಧಿಯಲ್ಲಿ ಪಾಲಿಕೆಯು ಇಕ್ಕಟ್ಟಿಗೆ ಸಿಲುಕಿ ಸರಕಾರದಿಂದ ಸೂಪರ್ ಸೀಡ್ ಶಿಕ್ಷೆಗೆ ಗುರಿಯಾಗಿತ್ತು. ಆಗ ವಿಜಯ ಮೋರೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಡಿ ವಿವಾದ ಕುರಿತು ನಿರ್ಣಯ ಅಂಗೀಕರಿಸಿ ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಆಗ ಸರಕಾರ ಅಭಿವೃದ್ಧಿ ಯಲ್ಲಿ ನಿರ್ಲಕ್ಷ ಮತ್ತು ಸರಕಾರದ ಅನುದಾನದ ಬಳಕೆಯಲ್ಲಿ ವಿಫಲ ಎಂಬ ಕಾರಣಗಳನ್ನು ಮುಂದೆ ಮಾಡಿ ಪಾಲಿಕೆಯನ್ನೇ ವಿಸರ್ಜಿಸುವ ಮೂಲಕ ಸದಸ್ಯರಿಗೆ ಸರಿಯಾದ ಮಂಗಳಾರತಿ ಮಾಡಿತ್ತು. ನಂತರ 2011ರಲ್ಲಿ ಮತ್ತೆ ಆದೇ ರೀತಿಯ ಶಿಕ್ಷೆಗೆ ಪಾಲಿಕೆಯ ಸದಸ್ಯರು ಗುರಿಯಾಗಿದ್ದರು. ಆಗ ಮಂದಾ ಬಾಳೇಕುಂದ್ರಿ ಮಹಾಪೌರರಾಗಿದ್ದರು. ಇದಾದ ನಂತರ 2015ರಲ್ಲಿ ಮತ್ತೆ ಮೂರನೇ ಬಾರಿ ಸುಪರ್‌ಸೀಡ್ ಆಗುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಎಂಇಎಸ್ ನ ಸರಿತಾ ಪಾಟೀಲ ಮಹಾಪೌರರಾಗಿದ್ದರು. ಆಗ ಕೆಲ ಕನ್ನಡ ಹೋರಾಟಗಾರರು ಪಾಲಿಕೆಯನ್ನು ಸುಪರ್ ಸೀಡ್ ಮಾಡಿದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಗಡಿ ವಿಷಯ ಹೋರಾಟದಲ್ಲಿ ನಮ್ಮ ವಾದಕ್ಕೆ ಹಿನ್ನಡೆಯಾಗುತ್ತದೆ.
ಎಂಇಎಸ್ ದವರು ಇದನ್ನೇ ಅಸ್ತÅವನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ಇದರಿಂದ ಪಾಲಿಕೆ ಮೂರನೇ ಬಾರಿಗೆ ಸುಪರ್ ಸೀಡ್ ಆಗುವುದರಿಂದ ಪಾರಾಯಿತು. ಪಾಲಿಕೆಯ ಇದುವರೆಗಿನ ಇತಿಹಾಸದಲ್ಲಿ ಬಹುತೇಕ ಅವಧಿ ಕೆಟ್ಟ ರಾಜಕಾರಣ ಮತ್ತು ಆಡಳಿತವನ್ನೇ ಕಂಡಿದೆ. ಅಭಿವೃದ್ಧಿಯನ್ನೇ ಮರೆತು ಕೀಳುಮಟ್ಟದ ರಾಜಕಾರಣ ಮತ್ತು ಸ್ವಾರ್ಥಕ್ಕಾಗಿ ಆರೋಪ-ಪ್ರತ್ಯಾರೋಪ ಮಾಡಲು ಮುಂದಾದ ಸದಸ್ಯರು ಪ್ರತಿ ಬಾರಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಎಳೆದುಕೊಂಡಿದ್ದಾರೆ. ಇಷ್ಟಾದರೂ ಸದಸ್ಯರಿಗೆ ತಪ್ಪಿನ ಅರಿವಾಗಿಲ್ಲ. ವಿವಾದ ಸೃಷ್ಟಿಸುವದೇ ತಮ್ಮ ಮುಖ್ಯ ಧ್ಯೇಯ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.