Advertisement

ಮಳೆಯಬ್ಬರಕ್ಕೆ ಜನ ತತ್ತರ

06:00 AM Jul 10, 2018 | |

ಬೆಂಗಳೂರು: ರಾಜ್ಯದ ಹಲವೆಡೆ ಪುನರ್ವಸು ಮಳೆಯ ಅಬ್ಬರ ಮುಂದುವರಿದಿದೆ. ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. 

Advertisement

ತೀರ್ಥಹಳ್ಳಿ ತಾಲೂಕಿನಲ್ಲಿ ತಾಯಿಯೊಂದಿಗೆ ಸಂಕ ದಾಟುತ್ತಿದ್ದ ಬಾಲಕಿ ಕಾಲುಜಾರಿ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆ ಕೊಲ್ಲೂರಿನ ಬೆಳ್ಳಾಲ ಗ್ರಾಮದ ಮೋರ್ಟು ಜೆಡ್ಡು ನಿವಾಸಿ ಗೋವಿಂದ ಪೂಜಾರಿ ಕೆಲಸಕ್ಕೆಂದು ಮನೆ ಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಮಳೆಯಿಂದಾಗಿ
ಅವರು ನೆರೆ ನೀರಿನಲ್ಲಿ ಕೊಚ್ಚಿ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ 4 ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಗಡಿ ಭಾಗದ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಇದರಿಂದ ಮೂರು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ ಹಾಗೂ ದೂಧಗಂಗಾ ಮತ್ತು ವೇದಗಂಗಾನದಿಗಳಿಂದ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತದೆ. ಹೀಗಾಗಿ ಮೂರೂನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತವೆ. 

ತಾಲೂಕಿನ ಎರಡು ಬ್ರಿಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ, ದೂದಗಂಗಾ ನದಿಗೆ ಕಟ್ಟಿರುವ ಮಲಿಕವಾಡ-ದತ್ತವಾಡ ಬ್ರಿಜ್‌ಗಳು ಮುಳುಗಡೆಯಾಗಿವೆ.

Advertisement

ಕಣ್ಣೆದುರೇ ಮಗಳು ನೀರುಪಾಲು: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಾದ್ಯಂತ ಮಳೆಆರ್ಭಟ ಮುಂದುವರಿದಿದೆ. ತಾಯಿಯೊಂದಿಗೆ  ಸಂಕ (ಕಾಲು ಸಂಕ) ದಾಟುತ್ತಿದ್ದ ಬಾಲಕಿ ಕಾಲುಜಾರಿ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಳೆ.ಬಾಲಕಿಯಶೋಧಕಾರ್ಯಮುಂದುವರಿದಿದ್ದು,ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ದುಡ್ಲಿ ಮನೆ ಎಂಬಲ್ಲಿ ಸೋಮವಾರ ಈ ದುರ್ಘ‌ಟನೆ ಸಂಭವಿಸಿದ್ದು, ಆಶಿಕಾ (15) ಹಳ್ಳದಲ್ಲಿ ಕೊಚ್ಚಿಹೋದ ಬಾಲಕಿ. ದುಡ್ಲಿ ಮನೆಯ ದಿ.ಯೋಗೇಂದ್ರಗೌಡ ಹಾಗೂ ಅನಿತಾ ದಂಪತಿ ಪುತ್ರಿಯಾದ ಈಕೆ ಗುಡ್ಡೇಕೇರಿಯ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಬೆಳಗ್ಗೆ ತಾಯಿ, ಮಗಳು ಹೊನ್ನೇತಾಳಿನ ರೇಷನ್‌ ಅಂಗಡಿಗೆ ತೆರಳಿ ದಿನಸಿ ತೆಗೆದುಕೊಂಡು ಮನೆಗೆ ವಾಪಸ್‌ ಬರುತ್ತಿದ್ದಾಗ ತಾಯಿಯ ಕಣ್ಣೆದುರೇ ಬಾಲಕಿ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಳೆ. ಆಗುಂಬೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಬಾಲಕಿಯ ಶೋಧ ಕಾರ್ಯ ಕೈಗೊಂಡಿದ್ದಾರೆ. ಮಂಗಳವಾರ ಕೂಡ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್‌ ಆನಂದಪ್ಪ ತಿಳಿಸಿದ್ದಾರೆ. 

ದ.ಕ.ದಲ್ಲಿ ತಗ್ಗಿದ ಮಳೆಯಬ್ಬರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು ಹೆಚ್ಚಿನ ಕಡೆಗಳಲ್ಲಿ ನೆರೆ ಇಳಿದಿದೆ. ಕೊಡಂಕೂರು,ನಿಟ್ಟೂರು, ಬೈಲಕೆರೆ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದ್ದ ಕುಟುಂಬಗಳು ಮತ್ತೆ ತಮ್ಮ ಮನೆಗೆ ತೆರಳಿವೆ. ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಮುಂಬಯಿಯಿಂದ 15 ಮಂದಿಯನ್ನೊಳಗೊಂಡ ನೌಕದಳ ಹಾಗೂ ಬೆಂಗಳೂರಿನಿಂದ 30 ಮಂದಿ
ಸಿಬ್ಬಂದಿಯನ್ನೊಳಗೊಂಡ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಉಡುಪಿಗೆ ಆಗಮಿಸಿತು. ಬನ್ನಂಜೆ ನಾರಾಯಣ ಗುರು ಸಭಾಭವನ ಮತ್ತು ಪ್ರವಾಸಿ ಬಂಗಲೆಯಲ್ಲಿ ಇವರಿಗೆ ತಂಗಲು ವ್ಯವಸ್ಥೆ ಮಾಡಿಕೊಡಲಾಗಿದೆ.

ಭಾರೀ ಮಳೆ ಸಾಧ್ಯತೆ 
ರಾಜ್ಯದಲ್ಲಿ ಮುಂದಿನ 3-4 ದಿನಗಳು ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಕರಾವಳಿ ಭಾಗದಲ್ಲಿ ಅತಿ ಭಾರೀ ಮಳೆ ಆಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಜುಲೈ 14ರವರೆಗೂ
ಅತಿ ಭಾರೀ ಮಳೆಯಾಗುವ ಸಂಭವ ಇದ್ದು,ಈಗಾಗಲೇ ಆ ಭಾಗದ ಮೀನುಗಾರರಿಗೆ ಎಚ್ಚರಿಕೆ ಮುನ್ಸೂಚನೆ ನೀಡಲಾಗಿದೆ.

ಒಳನಾಡಿನ ಆಯ್ದ ಭಾಗಗಳಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ಅದರಲ್ಲೂ ಉತ್ತರದ ಬೆಳಗಾವಿ, ಬೀದರ್‌, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ ಮತ್ತು ದಕ್ಷಿಣದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜುಲೈ 12ರಿಂದ 14ರವರೆಗೆ ಚದುರಿದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಜಲಬಂಧನ
ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ಐದು ಕುಟುಂಬಗಳು ವಾರದಿಂದ ಮನೆಯಿಂದ ಹೊರ ಬರಲು ಆಗದೆ ನರಕಯಾತನೆ ಅನುಭವಿಸುತ್ತಿವೆ. ಹೊಳೆಕುಡಿಗೆ ಗ್ರಾಮದಲ್ಲಿ ವಾಸವಾಗಿರುವ ಐದು ಕುಟುಂಬಗಳು ಬೇರೆಡೆ ತೆರಳಬೇಕಾದರೆ ಭದ್ರಾ ನದಿ ದಾಟಬೇಕಾಗಿದೆ. ತೆಪ್ಪದ ಸಹಾಯದಿಂದ ನದಿ ದಾಟಿ ಬೇರೆಡೆ ತೆರಳುತ್ತಿದ್ದರು. ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ತೆಪ್ಪವನ್ನೂ ಬಳಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಶೃಂಗೇರಿ ತಾಲೂಕಿನಲ್ಲೂ ಮಳೆ ಸುರಿಯುತ್ತಲೇ ಇದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ.ಮೆಣಸೆ ಗ್ರಾಪಂ ವ್ಯಾಪ್ತಿಯ ಕಿಕ್ರೆ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next