Advertisement

ಬೆಳಗಾವಿ: ಹುಬ್ಬಳ್ಳಿ ಹಿಂದಿಕ್ಕಿದ ಬೆಳಗಾವಿ ಏರ್‌ಪೋರ್ಟ್‌

06:06 PM Apr 13, 2024 | Team Udayavani |

ಬೆಳಗಾವಿ: ಕುಂದಾನಗರಿ ಬೆಳಗಾವಿ ವಿಮಾನ ನಿಲ್ದಾಣ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತೊಮ್ಮೆ  ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಹಿಂದಿಕ್ಕಿದ್ದು, ಫೆಬ್ರವರಿ ತಿಂಗಳಲ್ಲಿ ವಿಮಾನ ಸಂಚಾರ ಮಾಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಬೆಳಗಾವಿ ಅಗ್ರಗಣ್ಯ
ಸ್ಥಾನಕ್ಕೇರಿದೆ.

Advertisement

ಬೆಳಗಾವಿ ಹಾಗೂ ಹುಬ್ಬಳ್ಳಿ ನಗರಗಳ ಮಧ್ಯೆ ಕೇವಲ 100 ಕಿ.ಮೀ. ಅಂತರ ಇದ್ದರೂ ವಿಮಾನಯಾನ ಪ್ರವಾಸದಲ್ಲಿ ಎರಡೂ ಶಹರಗಳ ನಡುವೆ ಪೈಪೋಟಿ ಜೋರಾಗಿಯೇ ನಡೆದಿದೆ. ಮತ್ತೊಮ್ಮೆ ಬೆಳಗಾವಿ ವಿಮಾನ ನಿಲ್ದಾಣ ಹುಬ್ಬಳ್ಳಿಯನ್ನು ಹಿಂದಿಕ್ಕುವ ಮೂಲಕ ರಾಜ್ಯದಲ್ಲಿಯೇ ಮೂರನೇ ಸ್ಥಾನಕ್ಕೇರಿದೆ. ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ ಬಳಿಕ ಬೆಳಗಾವಿ ಮೂರನೇ ಸ್ಥಾನದಲ್ಲಿದ್ದು, ಹುಬ್ಬಳ್ಳಿ ನಾಲ್ಕನೇ ಸ್ಥಾನಕ್ಕಿದೆ.

ಕಳೆದ ಫೆಬ್ರವರಿತಿಂಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ 29,530 ಪ್ರವಾಸಿಗರು ಸಂಚಾರ ಮಾಡಿದರೆ, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 27,890 ಪ್ರವಾಸಿಗರು ಸಂಚರಿಸಿದ್ದಾರೆ. ಅತಿ ಹೆಚ್ಚು ಪ್ರವಾಸಿಗರ ಸಂಖ್ಯೆಯಲ್ಲಿ ಪ್ರತಿ ಸಲದಂತೆ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಮಂಗಳೂರು ಎರಡನೇ ಸ್ಥಾನದಲ್ಲಿದೆ, ಬೆಳಗಾವಿ ಮೂರನೇ ಹಾಗೂ ಹುಬ್ಬಳ್ಳಿ ನಾಲ್ಕನೇ ಸ್ಥಾನದಲ್ಲಿದೆ.
ಮೈಸೂರು ಐದನೇ ಸ್ಥಾನದ್ದಲ್ಲಿದ್ದು, ಈ ವಿಮಾನ ನಿಲ್ದಾಣದಿಂದ ಕೇವಲ 8093 ಪ್ರವಾಸಿಗರು ಮಾತ್ರ ಸಂಚಾರ ಮಾಡಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ 2023 ಏಪ್ರೀಲ್‌ದಿಂದ 2024 ಫೆಬ್ರವರಿವರೆಗೆ 2,82,157, 2022 ಏಪ್ರೀಲ್‌ದಿಂದ 2023
ಫೆಬ್ರವರಿವರೆಗೆ 2,79,562 ಪ್ರವಾಸಿಗರು ಸಂಚರಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 2023 ಏಪ್ರೀಲ್‌ದಿಂದ 2024 ಫೆಬ್ರವರಿ ವರೆಗೆ 3,36,018 ಹಾಗೂ 2022 ಏಪ್ರೀಲ್‌ದಿಂದ 2023 ಫೆಬ್ರವರಿವರೆಗೆ 2,90,772 ಪ್ರವಾಸಿಗರು ಸಂಚರಿಸಿದ್ದಾರೆ.

ಬೇಸಿಗೆಯಲ್ಲಿ ಹೆಚ್ಚಾಗುವ ಸಾಧ್ಯತೆ: ಬೇಸಿಗೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ 10 ಪ್ರಮುಖ ನಗರಗಳಿಗೆ ನೇರ
ವಿಮಾನ ಸೇವೆ ಲಭ್ಯ ಇರಲಿದೆ. ಹೀಗಾಗಿ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರು, ಹೆ„ದ್ರಾಬಾದ್‌, ದೆಹಲಿ, ಮುಂಬೈ, ಜೋಧಪುರ, ಅಹ್ಮದಾಬಾದ್‌, ಸೂರತ್‌, ತಿರುಪತಿ, ಜೈಪುರ  ಹಾಗೂ ನಾಗಪುರಕ್ಕೆ ನೇರ ವಿಮಾನ ಸೇವೆ ಲಭ್ಯ ಇರಲಿದೆ. ಇದರ ವೇಳಾ ಪತ್ರಿಕೆಯೂ ಪ್ರಕಟವಾಗಿದೆ. ಬೆಳಗಾವಿಯಿಂದ ಯಾವ ದಿನಾಂಕದಿಂದ, ಯಾವ ವೇಳೆಗೆ ವಿಮಾನ ಹೊರಡಲಿದೆ, ಆ ಸ್ಥಳಕ್ಕೆ ಯಾವಾಗ ತಲುಪಲಿದೆ, ಎಷ್ಟು ಗಂಟೆಯ ಪ್ರವಾಸ ಎಂಬುದರ ಸಂಪೂರ್ಣ ಮಾಹಿತಿ ಈ ವೇಳಾ ಪತ್ರಿಕೆಯಲ್ಲಿ ಸಿಗುತ್ತದೆ.

Advertisement

ಬೇಸಿಗೆ ರಜೆ ಆರಂಭವಾಗಿದ್ದನಿಂದ ಇನ್ನು ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಆಗಿರುವುದರಿಂದ ಬೇರೆ ಬೇರೆ ಕಡೆಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಜತೆಗೆ ಮಳೆಗಾಲಕ್ಕಿಂತ ಮುಂಚೆಯೇ ಪ್ರವಾಸ ಮಾಡಲು ಬಯಸುವ ಉತ್ತರ ಕರ್ನಾಟಕದವರು ತಿರುಪತಿ, ಸೂರತ್‌, ಬೆಂಗಳೂರು, ದೆಹಲಿ, ಮುಂಬೈಗೆ ಏಪ್ರಿಲ್‌, ಮೇ ತಿಂಗಳಲ್ಲಿ ಪ್ರವಾಸ ನಡೆಸಲು ಪ್ಲಾನ್‌ ಮಾಡಿಕೊಂಡಿರುತ್ತಾರೆ. ಹೀಗಾಗಿ ಈ ವೇಳೆಯೂ ಪ್ರವಾಸಿಗರ ಸಂಖ್ಯೆಯಲ್ಲಿ ದ್ವಿಗುಣ ಆಗುವ ಸಾಧ್ಯತೆ ಇದೆ.

ವಿಮಾನ ಏರುವವರ ಸಂಖ್ಯೆಯಲ್ಲಿ ಏರಿಕೆ
ಬೆಳಗಾವಿಯಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನ 2023 ಜನೇವರಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಪ್ರವಾಸಿಗರ ಸಂಖ್ಯೆಯಲ್ಲಿ ತುಸು ಇಳಿಕೆ ಆಗಿತ್ತು. 2023 ಅಕ್ಟೋಬರ್‌ನಲ್ಲಿ ಈ ವಿಮಾನ ಸೇವೆಯನ್ನು ಮತ್ತೆ ಆರಂಭಿಸಲಾಯಿತು. ಆಗ ನವೆಂಬರ್‌ದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಫೆಬ್ರವರಿಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಪ್ರಯಾಣ ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಮಾನ ಸೇವೆಗಳು ಲಭ್ಯವಾದರೆ ಮತ್ತೆ ಬೆಳಗಾವಿ ವಿಮಾನ ನಿಲ್ದಾಣದಿಂದ ಸಂಚರಿಸುವ ಪ್ರಯಾಣಿಕರಲ್ಲಿ ಏರಿಕೆ ಕಂಡು ಬರಲಿದೆ.

ಚುನಾವಣೆ ಕಾವು ಹೆಚ್ಚಾದಂತೆ ಪ್ರಯಾಣವೂ ಹೆಚ್ಚು
ಸದ್ಯ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ತಿಂಗಳು ಮೊದಲ ಹಂತದ ಮತದಾನ ದಕ್ಷಿಣ ಕರ್ನಾಟಕ ಭಾಗದಲ್ಲಿ
ಇರುವುದರಿಂದ ಉತ್ತರ ಕರ್ನಾಟಕಕ್ಕೆ ರಾಜಕಾರಣಿಗಳು ಪ್ರವಾಸ ಮಾಡುವುದು ಕಡಿಮೆ ಆಗಿದೆ. ಇನ್ನು ಮುಂದಿನ ವಾರದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಎರಡನೇ ಹಂತದ ಮತದಾನ ಶುರುವಾದಾಗ ದಕ್ಷಿಣದಿಂದ ಉತ್ತರ ಕರ್ನಾಟಕಕ್ಕೆ ಬರುವ ರಾಜಕಾರಣಿಗಳ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಆಗ ಬೆಳಗಾವಿ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಚರಿಸುವವರ ಸಂಖ್ಯೆಯಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಹೊಸ ಟರ್ಮಿನಲ್‌ ಬಳಿಕ ಮತ್ತಷ್ಟು ಸೌಲಭ್ಯ 
ಬೆಳಗಾವಿ ವಿಮಾನ ನಿಲ್ದಾಣದಲ್ಲಿ 24 ಸಾವಿರ ಚದರ ಮೀ. ವಿಸ್ತೀರ್ಣದ ಹೊಸ ಟರ್ಮಿನಲ್‌ ನಿರ್ಮಾಣಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾ ಧಿಕಾರ(ಎಎಐ) ಟೆಂಡರ್‌ ಕರೆದಿತ್ತು. ಕೆಎಂವಿ ಪ್ರಾಜೆಕ್ಟ್ ಕಂಪನಿ 220.08 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದೆ. ಹೊಸ ಟರ್ಮಿನಲ್‌ ನಲ್ಲಿ ಬೆಳಗಾವಿಯಿಂದ ತೆರಳುವ 1200 ಹಾಗೂ ಬೆಳಗಾವಿಗೆ ಬರುವ 1200 ಪ್ರಯಾಣಿಕರು ಸೇರಿ ಏಕಕಾಲಕ್ಕೆ ಒಟ್ಟು 2400 ಪ್ರಯಾಣಿಕರಿಗೆ ಸ್ಥಳಾವಕಾಶ ಲಭಿಸಲಿದೆ. 4 ಏರೋಬ್ರಿಡ್ಜ್ಗಳನ್ನು
ನಿರ್ಮಿಸಲಾಗುತ್ತಿದೆ. ಈ ಟರ್ಮಿನಲ್‌ ನಿರ್ಮಾಣಗೊಂಡರೆ ಮತ್ತಷ್ಟು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಾಗಲಿವೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ಸದ್ಯ ದೇಶದ ಪ್ರಮುಖ ವಿವಿಧ ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಪ್ರವಾಸಿಗರಿಗೆ ಯಾವುದೇ ಅನಾನುಕೂಲ ಆಗದಂತೆ ಕ್ರಮ ವಹಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಬೆಳಗಾವಿಯಿಂದ ಹೆಚ್ಚಿನ ಪ್ರವಾಸಿಗರು ಸಂಚಾರ ನಡೆಸಿದ್ದಾರೆ.
ತ್ಯಾಗರಾಜನ್‌, ನಿರ್ದೇಶಕರು, ಬೆಳಗಾವಿ ವಿಮಾನ ನಿಲ್ದಾಣ

■ ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next