Advertisement

ರಾಜಸ್ಥಾನ ಕಾರ್ಮಿಕರ ತೊಳಲಾಟ

05:19 PM Apr 11, 2020 | Naveen |

ಬೆಳಗಾವಿ: ಮಹಾ ನಗರಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಉತ್ತರ ಭಾರತದ ಕೂಲಿ ಕಾರ್ಮಿಕರು ಕೊರೊನಾ ರೋಗಕ್ಕೆ ಹೆದರಿಕೊಂಡು ಕಾಲ್ನಡಿಗೆ ಮೂಲಕ ಹೊರಟಾಗ ಲಾಕ್‌ಡೌನ್‌ ವೇಳೆ ಬೆಳಗಾವಿಯಲ್ಲಿಯೇ ಲಾಕ್‌ ಆಗಿದ್ದು, ಊರು ಸೇರಲು ಹಾತೊರೆಯುತ್ತಿದ್ದಾರೆ. ಕಾಲ್ನಡಿಗೆ ಮೂಲಕ ರಾಜಸ್ಥಾನ, ಹರಿಯಾಣ, ಮಧ್ಯ ಪ್ರದೇಶಕ್ಕೆ ಹೊರಟಿದ್ದ 260 ಜನರನ್ನು ಬೆಳಗಾವಿಯಲ್ಲಿ ತಡೆದು ಕ್ವಾರಂಟೈನ್‌ ಮಾಡಲಾಗಿದೆ. ನಿತ್ಯ ಈ ಎಲ್ಲ ಜನರಿಗೂ ಮಹಾನಗರ ಪಾಲಿಕೆ ಊಟ, ಉಪಾಹಾರ ಹಾಗೂ ವಸತಿ ವ್ಯವಸ್ಥೆ ಮಾಡಿದೆ. ಆದರೂ ತಮ್ಮೂರಿಗೆ ಹೋಗಬೇಕೆಂಬ ಕನಸು ಕಾಣುತ್ತಿರುವ ಈ ಜನರು ಅಧಿಕಾರಿಗಳ ಎದುರು ಅಲವತ್ತುಕೊಳ್ಳುತ್ತಿದ್ದಾರೆ.

Advertisement

ನಗರದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ 115 ಹಾಗೂ ಯಮಕನಮರಡಿ ಕ್ಷೇತ್ರದ ಹಾಲಬಾಂವಿ ಮೊರಾರ್ಜಿ ವಸತಿ ನಿಲಯದಲ್ಲಿ 143 ಜನರನ್ನು ಇಡಲಾಗಿದೆ. ರಾಜಸ್ಥಾನ ಮೂಲದ ಇವರು ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ವಿವಿಧ ನಗರಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. ಕೋವಿಡ್  ಭೀತಿಯಿಂದ ಇಡೀ ಭಾರತ ಲಾಕ್‌ ಡೌನ್‌ ಮಾಡಲಾಗಿತ್ತು. ಈ ವೇಳೆ ಎಲ್ಲ ವಾಹನ ಸಂಚಾರ ಬಂದ್‌ ಆಗಿದ್ದರಿಂದ ಅಲ್ಲಿಂದಲೇ ಕಾಲ್ನಡಿಗೆ ಆರಂಭಿಸಿದ್ದರು.

ಬೆಂಗಳೂರಿನಿಂದ ನಾಲ್ಕೈದು ದಿನಗಳ ಕಾಲ ನಡೆಯುತ್ತ ಬಂದಾಗ ಕಿತ್ತೂರು ಬಳಿ ಇವರೆಲ್ಲರನ್ನೂ ತಡೆ ಹಿಡಿಯಲಾಯಿತು. ಸರ್ಕಾರದ ಆದೇಶದಂತೆ ಬೆಳಗಾವಿಯಲ್ಲಿಯೇ ಇರಿಸಿಕೊಳ್ಳಲಾಯಿತು. ನಿತ್ಯ ಪಾಲಿಕೆ ವತಿಯಿಂದ ಈ ಕೂಲಿ ಕಾರ್ಮಿಕರ ಉಪಾಹಾರ, ಊಟಕ್ಕೆ ಸಾವಿರಾರು ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆರಂಭದಲ್ಲಿ ದಾನಿಗಳು ನೀಡುತ್ತಿದ್ದ ಆಹಾರ ಪೂರೈಸಲಾಗುತ್ತಿತ್ತು. ಕೆಲ ದಿನಗಳಿಂದ ದಾನಿಗಳು ಕಡಿಮೆ ಆಗಿದ್ದರಿಂದ ಪಾಲಿಕೆಯೇ ಇವರ ಖರ್ಚು ವೆಚ್ಚ ನೋಡಿಕೊಳ್ಳುತ್ತಿದೆ.

ಕಾರ್ಮಿಕರಿಗೆ ಅಗತ್ಯ ಇರುವ ಸೋಪ್‌, ಟೂಥ್‌ ಪೇಸ್ಟ್‌ ಸೇರಿದಂತೆ ಕುಡಿಯುವ ನೀರು, ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಮಿಕರ ಊಟೋಪಚಾರದ ವ್ಯವಸ್ಥೆ ಮಾಡಲು ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಕಾರ್ಮಿಕರ ಅರೋಗ್ಯ ತಪಾಸಣೆಗೆ ನಿತ್ಯ ಅರೋಗ್ಯ ಇಲಾಖೆ ಸಿಬ್ಬಂದಿ ಬರುತ್ತಿದ್ದು, ಸದ್ಯ ಕೋವಿಡ್‌-19 ಲಕ್ಷಣ ಯಾರಿಗೂ ಇಲ್ಲ.

ವಿಜಯಪುರದಂತೆ ನಮ್ಮನ್ನೂ ಕಳುಹಿಸಿ
ರಾಜಸ್ಥಾನ ಹಾಗೂ ಗುಜರಾತ್‌ಗೆ ಹೊರಟಿದ್ದ 2,437 ಜನರನ್ನು ವಿಜಯಪುರದಲ್ಲಿ ಕಳೆದ 10 ದಿನಗಳ ಹಿಂದೆ ತಡೆ ಹಿಡಿಯಲಾಗಿತ್ತು. ಆಗ ಅಲ್ಲಿಯ ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿ ಎಲ್ಲರನ್ನೂ ವಾಕರಸಾ ಸಂಸ್ಥೆಯ 60 ಬಸ್‌ಗಳಲ್ಲಿ ಕಳುಹಿಸಿದ್ದರು. ಇವರನ್ನು ಕಳುಹಿಸಲು ವಿಜಯಪುರದಿಂದ 7 ಜನ ಅಧಿಕಾರಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದೇ ರೀತಿಯಾಗಿ ಬೆಳಗಾವಿಯ ಕಾರ್ಮಿಕರನ್ನೂ ಜಿಲ್ಲಾಡಳಿತ ಕಳುಹಿಸುವಂತೆ ಕಾರ್ಮಿಕರು ಮನವಿ ಮಾಡಿದ್ದಾರೆ.

Advertisement

ಕಟ್ಟಡ ಕಾರ್ಮಿಕರೇ ಹೆಚ್ಚು ವಾಸ್ತವ್ಯ
ಸ್ಮಾರ್ಟ್‌ ಸಿಟಿ, ಬಿಮ್ಸ್‌ ಸೇರಿದಂತೆ ವಿವಿಧ ಕಟ್ಟಡ ಕೆಲಸಕ್ಕಾಗಿ ಆಂಧ್ರ ಪ್ರದೇಶ, ಬಿಹಾರ, ಕಾರ್ಮಿಕರಾಗಿ ಆಂಧ್ರ ಪ್ರದೇಶ,
ಜಾರ್ಖಂಡ, ಬಿಹಾರ, ಉತ್ತರ ಪ್ರದೇಶದ 1029 ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಆಯಾ ಕಟ್ಟಡಗಳಲ್ಲಿಯೇ ಇವರಿಗೆ ವ್ಯವಸ್ಥೆ ಮಾಡಲಾಗಿದೆ. ಗುತ್ತಿಗೆದಾರರು ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಊಟೋಪಚಾರ, ವಸತಿ, ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next