ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಉಜ್ಜಯಿನಿ ಶ್ರೀ ಆದಿಶಕ್ತಿ ಬನ್ನಿ ಮಹಾಂಕಾಳಿ ಅಮ್ಮನವರ ಮತ್ತು ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ವಿವಿಧ ಧಾರ್ಮಿಕ ಸಂಪ್ರದಾಯಗಳೊಂದಿಗೆ ಶ್ರೀಬನ್ನಿಮಹಾಂಕಾಳಿ ಅಮ್ಮನವರ ಕೆಂಡಾರ್ಚನೆ ನಡೆಯಿತು.
ಈ ಸಂದರ್ಭದಲ್ಲಿ ಛತ್ರಿ, ಚಾಮರ ಮತ್ತು ಮಂಗಳ ವಾದ್ಯಗಳೊಂದಿಗೆ ಕೆಂಡದ ರಾಶಿಗೆ ಭಕ್ತರು ಧಾರ್ಮಿಕ ಸಂಪ್ರದಾಯದಂತೆ ಆರತಿ ಬೆಳಗಿದರು. ನಂತರ ಶ್ರೀ ಆದಿಶಕ್ತಿ ಬನ್ನಿ ಮಹಾಂಕಾಳಿ ಅಮ್ಮನವರ ಉತ್ಸವ ಮೂರ್ತಿಯನ್ನು ಹೊತ್ತು ಕೆಂಡದ ರಾಶಿಯ ಸುತ್ತ ಪ್ರದಕ್ಷಿಣೆ ಹಾಕಿ, ಕೆಂಡ ಹಾಯ್ದ ಬಳಿಕ ನೂರಾರು ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು.
ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ದೇವಸ್ಥಾನದ ಸುತ್ತಲೂ ಉತ್ಸವ ಮೆರವಣಿಗೆ ಸಾಗುವಾಗ ಭಕ್ತಾದಿಗಳು ತಾವು ಬೆಳೆದ ಭತ್ತ, ಕಾಪಿ, ಕಾಳುಮೆಣಸು, ಅಡಕೆ ಇತ್ಯಾದಿ ಫಸಲುಗಳನ್ನು ಅಮ್ಮನವರಿಗೆ ಸಮರ್ಪಿಸಿ ಧನ್ಯರಾದರು. ಮಧ್ಯಾನ ಶ್ರೀ ಕ್ಷೇತ್ರ ಉಜ್ಜಯಿನಿಯಿಂದ ಶ್ರೀ ಆದಿಶಕ್ತಿ ಬನ್ನಿಮಹಾಂಕಾಳಿ ಅಮ್ಮನವರ ಉತ್ಸವ ಭದ್ರಾನದಿಗೆ ತೆರಳಿ ತೀರ್ಥಸ್ನಾನ, ಗೌರಿಪೂಜೆ ನಡೆಯಿತು.
ನಂತರ ಮಕ್ಕಳ ಫಲ ಬೇಡುವ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಕೆಂಡಾರ್ಚನೆಯ ನಂತರ ಶ್ರೀ ಆದಿಶಕ್ತಿ ಬನ್ನಿ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಧರ್ಮಾಧಿಕಾರಿ ಯು.ಸಿ.ಗೋಪಾಲಗೌಡ ಮಾತನಾಡಿ, ಮನುಷ್ಯನ ಜೀವನ ಅತ್ಯಮೂಲ್ಯವಾದದ್ದು.ಇದು ಭಗವಂತ ಕೊಟ್ಟ ಕೊಡುಗೆ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಜೀವನ ಬಂಧನಕಾರಿ. ಮನುಷ್ಯ ಜೀವನದಲ್ಲಿ ದೇವರು ಹಾಗೂ ಧರ್ಮಾಚರಣೆಗಳನ್ನು ಮರೆಯಬಾರದು. ಮನದ ಶಾಂತಿಗಾಗಿ ನೆಮ್ಮದಿಯ ಬದುಕಿಗಾಗಿ ಧರ್ಮಾಚರಣೆಗಳು ಬಹಳ ಮುಖ್ಯವಾಗಿದೆ. ದೃಢ ಸಂಕಲ್ಪ ಇಲ್ಲದೇ ಮಾಡುವ ಕೆಲಸಗಳು ಸಿದ್ಧಿಸುವುದಿಲ್ಲ. ಶಾಶ್ವತ ಸುಖಕ್ಕೆ ಮತ್ತು ಮನದ ಶಾಂತಿಗೆ ಧರ್ಮಾಚರಣೆ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರುಪರದೇಶಪ್ಪನವರ ಮಠದ ವೇದಮೂರ್ತಿ ಮಧುಕುಮಾರ್, ಬಾಸಾಪುರದ ಬಿ.ಎಂ.ಭೋಜೇಗೌಡರು, ಕೂಸುಗಲ್ಲು ಚಂದ್ರಶೇಖರಗೌಡ, ಅಂಡವಾನೆ ಗ್ರಾಮದ ಪಟ್ನ ಪಿ.ಎ.ಪುಟ್ಟಸ್ವಾಮೇಗೌಡರು, ತೋರುವಾನೆ ಸುರೇಶ್ ಸೇರಿದಂತೆ ಖಾಂಡ್ಯ, ಬಾಸಾಪುರ, ಕಡುವಂತಿ, ಬಿದರೆ, ಗಂಗೇಗಿರಿ, ಚಂದ್ರವಳ್ಳಿ, ಕರಡಿಖಾನ್, ಚಿಕ್ಕಮಗಳೂರು, ಸಕ್ಕರೆಪಟ್ಟಣ, ಬಾಳೆಹೊನ್ನೂರು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಜಿಲ್ಲಾದ್ಯಂತ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಮಾಹಿತಿ ಇಲ್ಲವೆಂದು ಗ್ರಾಮಸ್ಥರು ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಗ್ರಾಮಸ್ಥರು, ಕಳೆದ 20 ದಿನಗಳಿಂದ ಖಾಂಡ್ಯ ಹೋಬಳಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಸ್ಥಗಿತಗೊಂಡಿದೆ. ಕುಗ್ರಾಮಗಳಲ್ಲಿ ಮೊಬೈಲ್ ಚಾರ್ಜ್ ಮಾಡಲು ಆಗುತ್ತಿಲ್ಲ. ಸಹಕಾರ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ದಿನಪತ್ರಿಕೆ ಸರಬರಾಜು ಆಗುತ್ತಿಲ್ಲ. ಕೊರೊನಾ ವೈರಸ್ ಬಗ್ಗೆ ಕುಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.