ಬೆಳಗಾವಿ: ಭಾರತದಲ್ಲಿ ಕಲಿತು ವಿದೇಶದಲ್ಲಿರುವ ತಾಲೂಕಿನ ಯಳ್ಳೂರು ಗ್ರಾಮದ ಸುಪುತ್ರ ಕೋವಿಡ್ 19 ವಿರುದ್ಧ ಸಡ್ಡು ಹೊಡೆದಿದ್ದು, ವೈದ್ಯ ಲೋಕದಲ್ಲಿ ಛಾಪು ಮೂಡಿಸಿರುವ ಈ ವೈದ್ಯ ಆಸ್ಟ್ರೇಲಿಯಾ ದೇಶದಲ್ಲಿ ಕೋವಿಡ್ 19 ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ.
ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಜನಿಸಿದ ಡಾ| ಮಹಾದೇವ ಪಾಟೀಲ 12 ವರ್ಷಗಳಿಂದ ಆಸ್ಟ್ರೆಲಿಯಾ ದೇಶದ ಪ್ರಖ್ಯಾತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ| ಮಹಾದೇವ ಅವರು ಆಸ್ಪತ್ರೆಯ ಐಸಿಯು ವಿಭಾಗದ ಮುಖ್ಯಸ್ಥರಾಗಿದ್ದಾರೆ. ಸದ್ಯ ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿರುವ ಕೋವಿಡ್ 19 ಸೋಂಕಿತರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿರುವ ಕೋವಿಡ್ 19 ಸೋಂಕಿತರ ಆರೈಕೆಯಲ್ಲಿ ತೊಡಗಿಕೊಂಡಿದ್ದು ಬೆಳಗಾವಿಗೆ ಹೆಮ್ಮೆಯ ವಿಷಯ. ಮೊದಲಿಗೆ ಕೆಲ ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿದ್ದು ಮತ್ತೆ ಭಾರತಕ್ಕೆ ವಾಪಸ್ಸಾಗಿದ್ದರು. ನಂತರ ಕೆಲವು ವರ್ಷಗಳ ನಂತರ ಮತ್ತೆ ಆಸ್ಟ್ರೇಲಿಯಾದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಯಳ್ಳೂರಿನಲ್ಲಿ ಪೂರೈಸಿರುವ ಡಾ| ಮಹಾದೇವ ಪಾಟೀಲ ಅವರು ಪ್ರೌಢ ಶಿಕ್ಷಣ ಬೆಳಗಾವಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಹಾಗೂ ಜಿಎಸ್ ಎಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದ್ದಾರೆ.
ಮಹಾರಾಷ್ಟ್ರದ ಅಂಬಾಜೋಗಾಯಿಯಲ್ಲಿ ಎಂಬಿಬಿಎಸ್ ಹಾಗೂ ಮುಂಬೈನಲ್ಲಿ ಎಂ.ಡಿ. ಪದವಿ ಪೂರ್ಣಗೊಳಿಸಿದ್ದಾರೆ. ಭಾರತದಲ್ಲಿ ಕೇಂದ್ರ ಸರ್ಕಾರ ಕೋವಿಡ್ 19 ಸೋಂಕು ತಡೆಗೆ ತೆಗೆದುಕೊಂಡಿರುವ ನಿರ್ಧಾರಗಳು ಯೋಗ್ಯವಾಗಿವೆ. ಆಸ್ಟ್ರೇಲಿಯಾದಲ್ಲಿ ಅಷ್ಟೊಂದು ವ್ಯಾಪಕವಾಗಿ ಸೋಂಕು ಹರಡಿಲ್ಲ. ಸೋಂಕು ತಡೆಗೆ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಕೆಲವು ದಿನಗಳಿಂದ ಏರಿಕೆ ಆಗುತ್ತಿದೆ. ವೈದ್ಯರು ಹಾಗೂ ನರ್ಸ್ ಗಳು ಹಗಲಿರುಳು ಕೋವಿಡ್ 19 ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಡಾ| ಮಹಾದೇವ ಪಾಟೀಲ ತಮ್ಮ ಮನದಿಂಗಿತ ತೋಡಿಕೊಂಡರು.
ಆಸ್ಟ್ರೇಲಿಯಾದಲ್ಲೇ ಉಳಿದ ತಂದೆ-ತಾಯಿ : ಮಗ ಆಸ್ಟ್ರೇಲಿಯಾದಲ್ಲಿ ಇದ್ದಿದ್ದರಿಂದ ಭೇಟಿಯಾಗಲು ಹೋಗಿದ್ದ ತಂದೆ-ತಾಯಿ ಕೋವಿಡ್ 19 ದಿಂದಾಗಿ ಅಲ್ಲಿಯೇ ಬಂಧಿಯಾಗಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆಯೇ ಹೋಗಿರುವ ತಂದೆ-ತಾಯಿಗೆ ಭಾರತಕ್ಕೆ ವಾಪಸ್ ಬರಲು ಆಗುತ್ತಿಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ತಂದೆಗೆ ಅಭಿಮಾನವಿದೆ.
ವೈದ್ಯನ ತವರಿಗೂ ತಟ್ಟಿದ ಸೋಂಕು : ವೈದ್ಯ ಡಾ| ಮಹಾದೇವ ಫಾಟೀಲ ಅತ್ತ ಕೋವಿಡ್ 19 ವಿರುದ್ಧ ಆಸ್ಟ್ರೇಲಿಯಾದಲ್ಲಿ ಹೋರಾಡುತ್ತಿದ್ದರೆ ಇತ್ತ ಇವರ ತವರೂರು ಯಳ್ಳುರು ಗ್ರಾಮದಲ್ಲಿಯೂ ಕೋವಿಡ್ 19 ಅಪ್ಪಳಿಸಿದೆ. ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್‌ಗೆ ತೆರಳಿದ್ದ ಹಿರೇಬಾಗೇವಾಡಿಯ ವ್ಯಕ್ತಿಯ ಸಂಪರ್ಕದಿಂದಾಗಿ ಯಳ್ಳೂರನ ಮಹಿಳೆಗೆ ಈ ಸೋಂಕು ತಟ್ಟಿದೆ. 45 ವರ್ಷ ಮಹಿಳೆಯನ್ನು ಭೇಟಿಯಾಗಲು ಬಂದಿದ್ದ ಈಕೆಯ ಸಹೋದರಿಯಿಂದ ಈ ಸೋಂಕು ತಗುಲಿದೆ. ಸದ್ಯ ಇಡೀ ಊರು ಸೀಲ್‌ಡೌನ್ ಮಾಡಲಾಗಿದೆ.
-ಭೈರೋಬಾ ಕಾಂಬಳೆ