Advertisement

ಬೆಳಪು ಗ್ರಾಮ: ಶೀಘ್ರ ವಿಶ್ವದರ್ಜೆಯ ವಿಜ್ಞಾನ ಸಂಶೋಧನಾ ಕೇಂದ್ರ

10:39 AM Aug 05, 2017 | |

ಪಡುಬಿದ್ರಿ: ಸದ್ಯೋ ಭವಿಷ್ಯದಲ್ಲಿ ಬೆಳಪು ಗ್ರಾಮವು ವಿಶ್ವದರ್ಜೆಯ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಹೊಂದಲಿದೆ. ಡಾ| ಯು. ಆರ್‌. ರಾವ್‌ರಂತಹ ಮೇಧಾವಿಗಳನ್ನು ವಿಜ್ಞಾನ ಕ್ಷೇತ್ರದಲ್ಲಿ ನೀಡಿರುವ ಜಿಲ್ಲೆ ಮತ್ತಷ್ಟು ವಿಜ್ಞಾನಿಗಳ ಉಗಮ ಸ್ಥಾನವಾಗುವುದಕ್ಕೆ ಕಾಲ ಸನ್ನಿಹಿತವಾಗಿದೆ. 

Advertisement

ಭಾರತರತ್ನ ಪ್ರೊ| ಡಾ| ಸಿ.ಎನ್‌.ಆರ್‌. ರಾವ್‌ ಶಿಷ್ಯರಾಗಿ ನ್ಯಾನೋ ತಂತ್ರಜ್ಞಾನದಲ್ಲಿ ಸಂಶೋಧನೆಗೈಯ್ಯುತ್ತಿರುವ ಪ್ರೊ| ಎರ್ಮಾಳು ಗೋವಿಂದ ರಾವ್‌ರಂತಹ ವಿಜ್ಞಾನಿಗಳನ್ನು ನಮ್ಮಲ್ಲೇ ಹುಟ್ಟು ಹಾಕುವ ಕಾಲ ಉಡುಪಿ ಜಿಲ್ಲೆಗೂ ಬರಲಿದೆ. ಈಗಾಗಲೇ ಮೂಲ ಸೌಕರ್ಯಗಳನ್ನೊದಗಿಸುವ ಕೆಲಸ ಕಾರ್ಯಗಳು ಆರಂಭಗೊಂಡಿದ್ದು ಮುಂದಿನ ವರ್ಷ ಆಡಳಿತಾತ್ಮಕ ಕಚೇರಿ, ರಸ್ತೆ ಸೌಕರ್ಯ ಅಭಿವೃದ್ಧಿ ಮುಂತಾದವುಗಳನ್ನು ಪೂರೈಸಿಕೊಂಡು ಮುಂದೆ ಸಂಶೋಧನಾ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯಲು ಸರ್ವ ಸನ್ನದ್ಧವಾಗಲಿದೆ.

ಕೊಂಕಣ ರೈಲು ಸಂಪರ್ಕದೊಂದಿಗೆ ಪಡುಬಿದ್ರಿ ನಿಲ್ದಾಣವನ್ನೂ ಹೊಂದಿರುವ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಬೆಳಪುವಿಗೆ ವಿಜ್ಞಾನ ಸಂಶೋಧನಾ ಕೇಂದ್ರವು ಕರ್ನಾಟಕ ರಾಜ್ಯ ಸರಕಾರದಿಂದ ಮಂಜೂರಾಗಿದೆ. ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ರಾಜ್ಯವು ಮತ್ತಷ್ಟು ಮುನ್ನಡೆಯನ್ನು ಸಾಧಿಸುವುದಕ್ಕಾಗಿ ಈ ಆದ್ಯತೆಯನ್ನು ಸರಕಾರವು ನೀಡಿದೆ. ಜಾಗತಿಕ ಶ್ರೇಣಿಯಲ್ಲಿ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆಯು ಮೊದಲ ಶ್ರೇಷ್ಠ 200ರೊಳಗಿನ ಸ್ಥಾನ ಪಡೆಯದೇ ಇರುವುದು ವಾಸ್ತವವಾಗಿದೆ. ಗಣನೀಯ ಸಂಖ್ಯೆಯಲ್ಲಿ ವೈಜ್ಞಾನಿಕ ಪ್ರಕಟನೆಗಳನ್ನು ಪ್ರಕಟಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಮೈಸೂರು ವಿವಿ, ಬೆಂಗಳೂರು ವಿವಿ ಮತ್ತು ಮಂಗಳೂರು ವಿವಿಗಳು ಸಂಶೋಧನಾ ಕೃತಿಗಳನ್ನು ಹೆಚ್ಚು ಪ್ರಕಟಿಸುತ್ತಿರುವ ವಿ.ವಿ. ಗಳಾಗಿವೆ. ಒಂದು ಅತ್ಯಾಧುನಿಕ ಸಂಶೋಧನಾ ಸಂಸ್ಥೆಯನ್ನು ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ಸ್ಥಾಪಿಸುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯವನ್ನು ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಮತ್ತಷ್ಟು ಬೆಂಬಲಿಸಲು ಸರಕಾರ ನಿರ್ಧರಿಸಿದೆ. 

ಔಷಧಗಳ ಸಂಶೋಧನೆ
ನ್ಯಾನೋ ಕಣಗಳ ಪ್ರತಿ ಸೂಕ್ಷ್ಮಾಣು ಕ್ರಿಯಾಶೀಲತೆ, ನ್ಯಾನೋ ತಾಂತ್ರಿಕತೆಯನ್ನು ಉಪಯೋಗಿಸಿ ಔಷಧ ಪೂರಣೆ ಹಾಗೂ ಕೇಂದ್ರೀಕೃತ ಔಷಧ ಪೂರಣೆ, ಸ್ಪಿನೊನಿಕ್ಸ್‌ನ್ನು ಬಳಸಿ ನ್ಯಾನೋ ಉಪಕರಣಗಳ ತಯಾರಿಕೆ, ಪ್ರಮುಖ ಕಾಯಿಲೆಯಾದ ಮಲೇರಿಯಾಕ್ಕೆ ಪ್ರಭಾವಶಾಲಿ ಔಷಧಿಯ ಸಂಶೋಧನೆ ಮತ್ತು ನಿರ್ಲಕ್ಷಿತ ಕಾಯಿಲೆಗಳಾದ ಆಫ್ರಿಕನ್‌ ಟ್ರಿಪನೊಸೊಮಯಸಿಸ್‌, ಚಗಾಸ್‌, ಡೆಂಗ್ಯೂ, ಲೀಶ್‌ ಮಾನಿಯಸಿಸ್‌, ಕುಷ್ಠ, ಫೆ„ಲೇರಿಯಾ ಮುಂತಾದವುಗಳಿಗೆ ಪರಿಣಾಮಕಾರಿಯಾದ ಔಷಧಿಗಳ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲಾಗುವುದು.

ಘನತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವುದು ಕೂಡ ಇಲ್ಲಿ ಪ್ರಮುಖವಾಗಿದೆ. ಬಯೋಗ್ಯಾಸ್‌, ರಸಗೊಬ್ಬರವನ್ನು ಜೈವಿಕ ತ್ಯಾಜ್ಯದಿಂದಲೂ, ಆಧುನಿಕ ತಂತ್ರಜ್ಞಾನ ಡಿ – ಪೊಲಿಮರೈಸೇಶನ್‌ ಬಳಸಿ ರಾಸಾಯನಿಕಗಳನ್ನು ತಯಾರಿಸುವುದು ಮುಂತಾದ ಪರಿಸರ ಸ್ನೇಹಿ ಕಾರ್ಯಯೋಜನೆಗಳನ್ನೂ ಈ ಕೇಂದ್ರ ಒಳಗೊಂಡಿದೆ.

Advertisement

ಬೆಳಪು ಗ್ರಾಮದಲ್ಲಿನ ಸ. ನಂ. 56ರಲ್ಲಿ 19.5 ಎಕರೆ ಜಮೀನನ್ನು ಈ ಉದ್ದೇಶಕ್ಕಾಗಿ ಈಗಾಗಲೇ ಮಂಗಳೂರು ವಿ.ವಿ.ಗೆ ಹಸ್ತಾಂತರಿಸಲಾಗಿದೆ. ಇನ್ನೂ 20 ಎಕರೆ ಜಮೀನಿಗಾಗಿ ಜಿಲ್ಲಾಧಿಕಾರಿಯವರನ್ನು ಕೇಳಿಕೊಳ್ಳಲಾಗಿದೆ. 2016-17ನೇ ಸಾಲಿನ ಮಂಗಳೂರು ವಿ.ವಿ. ಬಜೆಟ್‌ನಲ್ಲಿ ಒಂದು ಕೋಟಿ ರೂ. ವನ್ನು ಈ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇದಲ್ಲದೆ 5 ಕೋಟಿ ರೂ.ವನ್ನು ಆಯವ್ಯಯ ಪಟ್ಟಿಯಲ್ಲಿ ಕಾಯ್ದಿರಿಸಲಾಗಿದೆ. 

ಕಾಮಗಾರಿ ಪ್ರಗತಿಯಲ್ಲಿ
ಸಂಶೋಧನಾ ಕೇಂದ್ರದ ಆವರಣ ಗೋಡೆಯ ಟೆಂಡರ್‌ ಕರೆಯಲಾಗಿದ್ದು, ರೂ.14 ಲಕ್ಷ ಕಾಮಗಾರಿ ಮುಗಿದಿರುತ್ತದೆ. 35 ಲಕ್ಷ ರೂ. ಕಾಮಗಾರಿ ಪ್ರಗತಿಯಲ್ಲಿದೆ.ಈ ಯೋಜನೆಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯಿಂದ ಹಾಗೂ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದ್ದು, 126.50 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. 50 ಕೋಟಿ ರೂ. ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಬಿಡುಗಡೆಗೆ ಸರಕಾರವು ಒಪ್ಪಿದ್ದು, ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ. 2017-18ನೇ ಸಾಲಿನಲ್ಲಿ 16.75 ಕೋಟಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಮಂಗಳೂರು ವಿವಿಯ ಉಪ ಕುಲಪತಿ, ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಸಿ. ವಿ. ರಾಮನ್‌ ಪ್ರಶಸ್ತಿ ವಿಜೇತರಾದ ಪ್ರೊ| ಕೆ. ಭೆ„ರಪ್ಪ, ಸೆನೆಟ್‌ ಸದಸ್ಯರಾಗಿದ್ದ ಪ್ರೊ| ಶ್ರೀಪತಿ ತಂತ್ರಿ ಹಾಗೂ ಕುಲ ಸಚಿವ ಪ್ರೊ| ಲೋಕೇಶ್‌ ಹಾಗೂ ಪ್ರಾಕ್ತನ ಕುಲ ಸಚಿವ ಪ್ರೊ | ಪಿ. ಎಸ್‌. ಎಡಪಾಡಿತ್ತಾಯ, ಮಾಜಿ ಶಾಸಕ ಲಾಲಾಜಿ ಮೆಂಡನ್‌ ಹಾಗೂ ಹಾಲಿ ಶಾಸಕ ವಿನಯಕುಮಾರ್‌ ಸೊರಕೆ ಅವರ ಮುತುವರ್ಜಿ  ಇದರಲ್ಲಿದೆ. 

ಬೆಳಪುವಿಗೆ ವಿಶ್ವ ಮಟ್ಟದಲ್ಲಿ ಛಾಪು
ಬೆಳಪು ಗ್ರಾಮವು ಕಳೆದ 20ವರ್ಷಗಳ ಹಿಂದೆ ಕುಗ್ರಾಮವಾಗಿದ್ದು ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರ್ಶ ಗ್ರಾಮವಾಗಿ ರೂಪುಗೊಂಡಿದೆ. ಈಗ ಇಲ್ಲೊಂದು ವಿಶ್ವ ದರ್ಜೆಯ ವಿಜ್ಞಾನ ಸಂಶೋಧನಾ ಕೇಂದ್ರದ ಸ್ಥಾಪನೆಯು ಊಹೆಗೂ ನಿಲುಕದ್ದು. ಇದರಿಂದಾಗಿ ಬೆಳಪು ಗ್ರಾಮವು ಶೈಕ್ಷಣಿಕವಾಗಿ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಡುವಂತಾಗಿದೆ ಎಂದು ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.

ಸಂಶೋಧನೆಯ ಮುಖ್ಯ ಕಾರ್ಯ ಕ್ಷೇತ್ರಗಳು
ಪಶ್ಚಿಮ ಘಟ್ಟದ ಪರಿಸರದಲ್ಲಿ ಅಳಿವಿನಂಚಿನಲ್ಲಿರುವ ಸಸ್ಯಗಳ ವಿಶ್ಲೇಷಣೆ ಮತ್ತು ಸಂರಕ್ಷಣೆ, ವಿವಿಧ ರೋಗ ರುಜಿನಗಳಿಗೆ ಸಸ್ಯಜನ್ಯ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿ., ದೀರ್ಘ‌ಕಾಲಿಕ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ಔಷಧ ಪೂರಣ ಮತ್ತು ಪರಿಹಾರ ಚಿಕಿತ್ಸೆಯ ತಾಂತ್ರಿಕತೆಯ ಬಗ್ಗೆ ಸಂಶೋಧನೆ ಕೈಗೊಳ್ಳುವುದು, ಆಧುನಿಕ ವಸ್ತು ಅಥವಾ ಉಪಕರಣಗಳನ್ನು ನ್ಯಾನೋ ತಾಂತ್ರಿಕತೆಯ ಮುಖಾಂತರ ಅನ್ವೇಷಣೆ ಮಾಡುವುದು ಇತ್ಯಾದಿ ಸಂಶೋಧನೆಯ ಮುಖ್ಯ ವಿಷಯಗಳಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next