ಕಾಪು: ಸರಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿರುವ ಬೆಳಪು ಗ್ರಾ.ಪಂ. ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ಆಗಮಿಸಿರುವ ಛತ್ತೀಸ್‌ಗಢ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು ಮತ್ತು ಎಸ್.ಐ.ಆರ್.ಡಿ. ಅಧಿಕಾರಿಗಳ ಸಹಿತ 31 ಜನರ ತಂಡ ಬುಧವಾರ ಬೆಳಪು ಗ್ರಾ. ಪಂ.ಗೆ ಭೇಟಿ ನೀಡಿತು.
ಅಧ್ಯಯನ ತಂಡದ ಮಾರ್ಗದರ್ಶಕ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ದೇಶಕ ಪ್ರಾಣೇಶ್ ರಾವ್ ಡಿ. ಅಧ್ಯಯನ ತಂಡಕ್ಕೆ ಮಾಹಿತಿ ನೀಡಿ, ಬೆಳಪು ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿಯಿಂದ ಪಂಚಾಯತ್‌ರಾಜ್ ವ್ಯವಸ್ಥೆಗೆ ಉತ್ತಮ ಹೆಸರು ಬಂದಿದೆ. ಸರಕಾರ ಘೋಷಿಸುವ ಯಾವುದೇ ಕಾರ್ಯ ಕ್ರಮ ಮತ್ತು ಯೋಜನೆಗಳನ್ನು ಪ್ರಥಮವಾಗಿ ಅನುಷ್ಠಾನಿಸುವ ಮೂಲಕ ಬೆಳಪು ಗ್ರಾಮ ಮಾದರಿಯಾಗಿ ಮೂಡಿ ಬಂದಿದೆ. ಆದುದರಿಂದಾಗಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದರು.
ಸಹಕಾರ, ಪ್ರೋತ್ಸಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪು ಗ್ರಾಮಸ್ಥರ ಅಭಿಲಾಷೆಯಂತೆ ಮತ್ತು ವಿವಿಧ ಸ್ತರದ ಜನಪ್ರತಿನಿಧಿಗಳು, ಇಲಾಖಾಧಿಕಾರಿ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದಿಂದ ಪುಟ್ಟ ಗ್ರಾಮ ಬೆಳಪು ಗ್ರಾಮ ಈ ಮಟ್ಟದ ಬೆಳವಣಿಗೆ ಕಂಡಿದೆ. ವಿವಿಧ ರಾಜ್ಯಗಳು, ಜಿಲ್ಲೆಗಳ ನಿಯೋಗ ಭೇಟಿ ನೀಡುತ್ತಿರುವುದರಿಂದ ಇದೇ ರೀತಿಯ ಸಾಧನೆ ಮುಂದುವರಿಸಿಕೊಂಡು ಹೋಗಲು ಪ್ರೋತ್ಸಾಹ ದೊರಕಿದಂತಾಗಿದೆ ಎಂದರು.
ಮುಕ್ತ ಕಂಠದ ಶ್ಲಾಘನೆ
ಬೆಳಪು ಗ್ರಾ.ಪಂ. ಆಡಳಿತ ಕಚೇರಿ, ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಹಿಂದೂ ರುದ್ರಭೂಮಿ ಮೊದಲಾದೆಡೆ ಭೇಟಿ ನೀಡಿ ನಿರ್ವಹಣೆ, ಕಾರ್ಯವೈಖರಿ ಮತ್ತು ಶುಚಿತ್ವದ ಬಗ್ಗೆ ಅಧ್ಯಯನ ನಡೆಸಿದರು. ಬೆಳಪು ಗ್ರಾಮಸ್ಥರು, ಅಧ್ಯಕ್ಷರು, ಜನಪ್ರತಿನಿಧಿಗಳು ಗ್ರಾಮದ ಬಗ್ಗೆ ಹೊಂದಿರುವ ಜನ ಪರ ಕಾಳಜಿ, ಅಭಿವೃದ್ಧಿಯ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು.
ಛತ್ತೀಸ್‌ಗಢ ದಂತೇವಾಡ ಕ್ಷೇತ್ರದ ಮಾಜಿ ಶಾಸಕ ಕ್ಷೇತ್ರ ಮಟಾಮಿ, ವಿವಿಧ ಜಿ.ಪಂ. ಅಧ್ಯಕ್ಷರಾದ ಕಮಲನಾಗ್ ದಂತೇವಾಡ, ಶಾರದಾ ವರ್ಮ ರಾಯ್ ಪುರ, ಕಲಾವಳ್ಳಿ ಕೋಯ್ಕ, ಎಸ್.ಐ. ಆರ್.ಡಿ. ತರಬೇತಿ ಸಂಯೋಜಕ ಅಬೂಬಕ್ಕರ್ ಟಿ.ಎಂ., ಉಡುಪಿ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಮೇಶ್ ಎಚ್.ಆರ್., ಗ್ರಾ.ಪಂ. ಸದಸ್ಯರು, ಛತ್ತೀಸ್‌ಗಢದ ವಿವಿಧ ಜಿ.ಪಂ., ತಾ.ಪಂ. ಮತ್ತು ಮಂಡಲ ಸಮಿತಿ ಸದಸ್ಯರು, ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ಉಡುಪಿ ತಾ.ಪಂ. ಸಹಾಯಕ ನಿರ್ದೇಶಕ ಶಿವತ್ತಾಯ, ಎಸ್.ಐ.ಆರ್. ಡಿ. ಮಾಹಿತಿ ಸಂಯೋಜಕಿ ಎಸ್.ಎನ್. ಫಾತಿಮಾ, ನವೀನ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.