Advertisement

ಬೆಳಪು: ಅತ್ಯಾಧುನಿಕ ಸಂಶೋಧನ ಕೇಂದ್ರಕ್ಕೆ ಭೂಮಿಪೂಜೆ

12:30 AM Mar 09, 2019 | Team Udayavani |

ಕಾಪು: ಬೆಳಪುವಿನಲ್ಲಿ ನಿರ್ಮಾಣಗೊಳ್ಳಲಿರುವ ಅತ್ಯಾಧುನಿಕ ವಿಜ್ಞಾನ ಸಂಶೋಧನ ಕೇಂದ್ರದ ಪ್ರಥಮ ಹಂತದ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ, ಭೂಮಿ ಪೂಜೆ ನೆರವೇರಿಸಲಾಯಿತು.

Advertisement

400 ಕೋ.ರೂ. ವೆಚ್ಚದ ಬೃಹತ್‌ ಯೋಜನೆ
ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಬೆಳಪುವಿನ 26 ಎಕರೆ ಸರಕಾರಿ ಭೂಮಿಯಲ್ಲಿ ಸುಮಾರು 400 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನ ಕೇಂದ್ರ ನಿರ್ಮಾಣವಾಗಲಿದೆ. ಪ್ರಥಮ ಹಂತದ ಕಾಮಗಾರಿಗೆ 75 ಕೋರೂ. ಅನುದಾನವನ್ನು ಸಿದ್ದರಾಮಯ್ಯ ನೇತೃತ್ವದ ಹಿಂದಿನ ರಾಜ್ಯ ಸರಕಾರ ಬಿಡುಗಡೆಗೊಳಿಸಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗಿದ್ದು, ಎಲ್ಲ ಸಮಸ್ಯೆಗಳನ್ನೂ ನಿವಾರಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಥಮ ಹಂತದಲ್ಲಿ 13,717 ಚ.ಮೀ. ವಿಸ್ತೀರ್ಣದ ಕಟ್ಟಡ 
ಕರ್ನಾಟಕ ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತ ಅನಿಲ್‌ ಸಂಕೊಳ್ಳಿ ಅವರು ಮಾತನಾಡಿ, ಪ್ರಥಮ ಹಂತ ದಲ್ಲಿ 76 ಕೋ.ರೂ. ವೆಚ್ಚದಲ್ಲಿ 13,717 ಚ.ಮೀ. ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗಲಿದೆ. ಇದರಲ್ಲಿ ಆಡಳಿತಾತ್ಮಕ ವಿಭಾಗ, ಎಸಿ ಗೆಸ್ಟ್‌ ಹೌಸ್‌, ಅಧಿಕಾರಿಗಳ ವಸತಿಗೃಹ, ನಾನ್‌ ಟೀಚಿಂಗ್‌ ವಸತಿಗೃಹ, ಸೈನ್ಸ್‌ ಬ್ಲಾಕ್‌, ಸಂಶೋಧನ ಬ್ಲಾಕ್‌, ಡೈರೆಕ್ಟರ್ ಬಂಗ್ಲೆ ಮತ್ತು ಅಟೆಂಡರ್ ವಸತಿಗೃಹ ನಿರ್ಮಾಣಗೊಳ್ಳಲಿದೆ ಎಂದರು.

ತ್ರಿವಳಿ ಯೋಜನೆಗಳ ಅನುಷ್ಠಾನ
ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ಬೆಳಪು ಗ್ರಾಮದಲ್ಲಿ ವಿಜ್ಞಾನ ಸಂಶೋಧನ ಕೇಂದ್ರ, ಕೈಗಾರಿಕಾ ಪಾರ್ಕ್‌ ಮತ್ತು ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಹೀಗೆ ಮೂರು ಬೃಹತ್‌ ಯೋಜನೆಗಳನ್ನು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಅವರ ಶಿಫಾರನಂತೆ ಹಿಂದಿನ ರಾಜ್ಯ ಸರಕಾರ ಮಂಜೂರುಗೊಳಿಸಿತ್ತು. ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕೈಗಾರಿಕಾ ವಲಯಕ್ಕೆ ಉದ್ಯಮಿ – ಕಾರ್ಖಾನೆಗಳಿಗೆ ಭೂಮಿ ಹಸ್ತಾಂತರಕ್ಕೆ ಅರ್ಜಿ ಆಹ್ವಾನ ಪ್ರಕ್ರಿಯೆ ನಡೆಯುತ್ತಿದೆ. ಮೂರೂ ಯೋಜನೆಗಳು ಹಂತ ಹಂತವಾಗಿ ಉದ್ಘಾಟನೆಗೊಳ್ಳಲಿವೆ ಎಂದರು.

ಎಲ್ಲೂರು ಶ್ರೀ ವಿಶ್ವೇಶ್ವರ ದೇಗುಲದ ತಂತ್ರಿ ವೇ|ಮೂ| ವೆಂಕಟರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ, ವೇ|ಮೂ| ನಟರಾಜ ಭಟ್‌ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.

Advertisement

ಯು.ಸಿ. ಶೇಖಬ್ಬ, ಕೆ. ವಾಸುದೇವ ಶೆಟ್ಟಿ, ಯೋಗೀಶ್‌ಚಂದ್ರ, ಹರೀಶ್‌, ಶೋಭಾ ಭಟ್‌, ಕರುಣಾಕರ ಶೆಟ್ಟಿ, ಶತರ್‌ ಕುಮಾರ್‌, ದಿನೇಶ್‌ ಪೂಜಾರಿ, ಸುರೇಶ್‌ ದೇವಾಡಿಗ, ವಿಜಯಲಕ್ಷ್ಮೀ ದೇವಾಡಿಗ, ಪೈಗಂ ಬಾನು, ಅನಿತಾ ಆನಂದ್‌, ಎಚ್‌.ಆರ್‌. ರಮೇಶ್‌, ಯೋಗೀಶ್‌ ಪೂಜಾರಿ, ನಿರಂಜನ್‌ ಶೆಟ್ಟಿ, ದೇವರಾಜ್‌ ರಾವ್‌ ನಡಿಮನೆ, ಶ್ರೀವತ್ಸ ರಾವ್‌, ಲೋಕೇಶ್‌ ಶೆಟ್ಟಿ ಬೆಳಪುಗುತ್ತು, ದಿನೇಶ್‌ ಶೆಟ್ಟಿ, ಜೇಬಾ ಸೆಲ್ವನ್‌ ಉಪಸ್ಥಿತರಿದ್ದರು.

ಹಂತಹಂತವಾಗಿ ಪೂರ್ಣ
ತನ್ನ ಶಾಸಕತ್ವದ ಅವಧಿಯಲ್ಲಿ ಕಾಪು ಕ್ಷೇತ್ರಕ್ಕೆ ಮಂಜೂರಾದ ಹಲವು ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗದು ಎಂಬ ಪುಕಾರುಗಳನ್ನೆಬ್ಬಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ. ಆದರೆ ಎಲ್ಲ ಯೋಜನೆಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ. 

ರೈತರಿಗೆ ಸಮಸ್ಯೆಯಾಗದಂತೆ ಅಣೆಕಟ್ಟು ನಿರ್ಮಿಸಿ ಮಣಿಪುರದಿಂದ ಕಾಪು ಪುರಸಭೆಗೆ ನೀರು ಪೂರೈಸುವ ಯೋಜನೆ ಶೀಘ್ರ ಅನುಷ್ಠಾನಕ್ಕೆ ಬರಲಿದ್ದು, ಕುರ್ಕಾಲು ಮತ್ತು ಹೆಜಮಾಡಿಯಲ್ಲಿ ನದಿಗೆ ಅಣೆಕಟ್ಟು ನಿರ್ಮಿಸಿ ಹಲವು ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೂಡ ಟೆಂಡರ್‌ ಹಂತದಲ್ಲಿದೆ. ಕಾಪು ತಾಲೂಕಿಗೆ ಮಿನಿ ವಿಧಾನಸೌಧ ಯೋಜನೆ ಮಂಜೂರಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next