Advertisement
ಈ ಕುರಿತು ಉದಯವಾಣಿ ಸುದಿನ ಪ್ರಕಟಿಸಿದ ಸಚಿತ್ರ ವರದಿ ಗಮನಿಸಿದ ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ, ಪ್ಲಾಸ್ಟಿಕ್ ಸೌಧದ ಬಳಿ ಮರದ ಗೆಲ್ಲು ಹಾಕಿದವರಿಗೆ ನೋಟಿಸ್ ನೀಡಿ ಮರ ತೆರವುಗೊಳಿಸುವಂತೆ ಹಾಗೂ ಪ್ಲಾಸ್ಟಿಕ್ ಸೌಧಕ್ಕೆ ತೆರಳಲು ಅನುಕೂಲ ಮಾಡಿಕೊಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಅ. 6ರ ವರೆಗೂ ಮರ ತೆರವಾಗಲಿಲ್ಲ. ಈ ಕುರಿತು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ, ಸದಸ್ಯ ಜಯಂತ ಅಬೀರ ಅವರಿಗೆ ಮಾಹಿತಿ ನೀಡಲಾಗಿತ್ತು. ಶೀಘ್ರದಲ್ಲೇ ಸ್ಪಂದಿಸುವುದಾಗಿ ತಿಳಿಸಿದ ಅಧ್ಯಕ್ಷರು ಹಾಗೂ ಸದಸ್ಯರು, ಶನಿವಾರ ಸಂಜೆಯ ವೇಳೆಗೆ ಪ್ಲಾಸ್ಟಿಕ್ ಸೌಧಕ್ಕೆ ತೆರಳುವ ದಾರಿಯನ್ನು ಸ್ವಚ್ಛ ಮಾಡಿಸಿಕೊಟ್ಟಿದ್ದಾರೆ.
ಪ್ಲಾಸ್ಟಿಕ್ ಸೌಧ ಒಂದು ಅಚ್ಚುಕಟ್ಟಾದ ವ್ಯವಸ್ಥೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಸೌಧದೊಳಗೆ ತಂದು ಹಾಕಿ ಅದನ್ನು ಬೇರೆ ಕಡೆ ಸಾಗಾಟ ಮಾಡಲಾಗುವುದು. ನಾಲ್ಕು-ಐದು ವರ್ಷಗಳಿಂದ ಜನ ಈ ಸೇವೆ ಉಪಯೋಗಿಸುತ್ತಿದ್ದರು. ಬಳಿಕ ದಾರಿ ಇಲ್ಲದಂತಾಗಿ ಸೌಧದೊಳಗೆ ಕಸ ಹಾಕುವುದನ್ನು ನಿಲ್ಲಿಸಿದ್ದರು. ಪ್ಲಾಸ್ಟಿಕ್ ಚೀಲಗಳ ಮರು ಬಳಕೆ ಸಾಧ್ಯ ಎಂಬ ಪರಿಕಲ್ಪನೆ ಹಲವರಿಗೆ ಇಲ್ಲದೆ ಎಲ್ಲೆಂದರಲ್ಲಿ ಎಸೆಯುತ್ತಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಸ್ವಚ್ಛವಾಗಿಟ್ಟು ಒಣಗಿಸಿ ಸ್ಥಳೀಯ ಅಂಗನವಾಡಿಗೆ ನೀಡಿದರೆ ಅದನ್ನು ಮರುಬಳಕೆಗೆ ರವಾನಿಸುವ ವ್ಯವಸ್ಥೆಯಿದೆ. ಆದರೆ, ಯಾವ ಅಂಗನವಾಡಿಗೂ ಪ್ಲಾಸ್ಟಿಕ್ ಬರಲಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದೂ ಅಧ್ಯಕ್ಷರು ತಿಳಿಸಿದರು. ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಕಸ ಹಾಗೂ ಪ್ರಾಣಿಗಳ ತ್ಯಾಜ್ಯ ಎಸೆಯುವ ಜನರನ್ನು ಪತ್ತೆ ಹಚ್ಚಲು ಗ್ರಾಮಸ್ಥರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.