Advertisement

ಬೆಳಂದೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮುಹೂರ್ತ

12:29 PM Apr 01, 2018 | Team Udayavani |

ಸವಣೂರು: ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ತರ ಉದ್ದೇಶದಿಂದ ಆರಂಭಗೊಂಡ ಬೆಳಂದೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಹಲವು ವರ್ಷಗಳ ಬಳಿಕ ಈಗ ಸಮಯ ಕೂಡಿಬಂದಿದೆ.

Advertisement

ಯೋಜನೆಗೆ ಒಳಪಡುವ ಗ್ರಾಮಗಳಲ್ಲಿ ಮತ್ತು ನದಿ ತಟದಲ್ಲಿ 2013ರ ಫೆಬ್ರವರಿ 26ರಂದು ಸರ್ವೆ ಕಾರ್ಯ ನಡೆಸಲಾಗಿತು. ಬಳಿಕ ಮೂರು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡು ಜನತೆಗೆ ನೀರು ಪೂರೈಕೆ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಲಾಗಿತ್ತು. ಆದರೆ ಮೂರು ತಿಂಗಳು ಬಿಡಿ, ಐದು ವರ್ಷಗಳೇ ಸರಿದರೂ ಯೋಜನೆಯ ಅನುಷ್ಠಾನದ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ಈ ಯೋಜನೆಯ ರೂಪುರೇಷೆಯೇನೋ ಚೆನ್ನಾಗಿತ್ತು. ಇದರ ಬಗ್ಗೆ ಈ ಭಾಗದ ಜನರೂ ತುಂಬ ನಿರೀಕ್ಷೆ ಹೊತ್ತು, ಕನಸು ಕಂಡಿದ್ದರು. ಆದರೆ, ಯೋಜನೆ ಕಡತಗಳಲ್ಲೇ ಉಳಿದು, ಕಾರ್ಯಗತ ಆಗಿರಲೇ ಇಲ್ಲ.

ಅಧಿಕೃತ ಚಾಲನೆ
ಈಗ ಈ ಯೋಜನೆಗಾಗಿ 16.50 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಮಾ. 24ರಂದು ಶಾಸಕ ಎಸ್‌. ಅಂಗಾರ ಶಂಕುಸ್ಥಾಪನೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆಯೂ ದೊರೆತಿದೆ. ಈ ಯೋಜನೆಯ ಕಡತಗಳು ಮೈಸೂರಿನ ಅಧೀಕ್ಷಕ ಎಂಜಿನಿಯರ್‌ ಕಚೇರಿಯಲ್ಲಿದ್ದು, ಅಲ್ಲಿಂದ ಮಂಜೂರುಗೊಂಡು ಬೆಂಗಳೂರಿನ ಮುಖ್ಯ ಎಂಜಿನಿಯರ್‌ ಕಚೇರಿಗೆ ವರ್ಗಾವಣೆ ಆಗಬೇಕಿದೆ. ಇದರ ಕ್ರಿಯಾ ಯೋಜನೆ 2017-18ನೇ ಸಾಲಿನಲ್ಲಿ ಅಂತಿಮಗೊಂಡಿದ್ದರಿಂದ ಶೀಘ್ರವಾಗಿ ಅನುಷ್ಠಾನವಾಗಲಿದೆ.

ಸವಣೂರು, ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಪರಿಸರದಲ್ಲಿ ಹರಿಯುತ್ತಿರುವ ಜೀವನದಿ ಕುಮಾರಧಾರಾ ನೀರನ್ನು ಬಳಸಿಕೊಂಡು ಸವಣೂರು, ಪಾಲ್ತಾಡಿ, ಪುಣcಪ್ಪಾಡಿ, ಬೆಳಂದೂರು, ಕುದ್ಮಾರು, ಕಾಯಿಮಣ, ದೋಳ್ಪಾಡಿ, ಚಾರ್ವಾಕ, ಕಾಣಿಯೂರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಇದರಿಂದ ಬೇಸಗೆಯಲ್ಲಿ ತಲೆದೋರಬಹುದಾದ ನೀರಿನ ಬವಣೆ ತಪ್ಪಿಸುವ ಉದ್ದೇಶವಿದೆ.

Advertisement

ಏನಿದು ಯೋಜನೆ?
ಸವಣೂರು-ಕುದ್ಮಾರು ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಜಾಕ್‌ ವೆಲ್‌ ನಿರ್ಮಿಸಿ, ಪಕ್ಕದಲ್ಲೇ ಪಂಪ್‌ ಹೌಸ್‌ ನಿರ್ಮಾಣ ಮಾಡಿ, ಕಬ್ಬಿಣದ ಕೊಳವೆಯ ಮೂಲಕ ಬೃಹತ್‌ ಟ್ಯಾಂಕ್‌ಗೆ ಹಾಯಿಸಿ, ಅದನ್ನು ಈ ಗ್ರಾಮಗಳಿಗೆ ಪೂರೈಸುವ ಉದ್ದೇಶ ಈ ಯೋಜನೆಯಲ್ಲಿತ್ತು. ಯೋಜನೆ ಶೀಘ್ರ ಅನುಷ್ಠಾನಕ್ಕೆ ಹಲವು ವರ್ಷಗಳ ಹಿಂದೆಯೇ ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ.ಗಳಲ್ಲಿ ನಿರ್ಣಯ ಕೈಗೊಂಡು ಜಿ.ಪಂ. ಹಾಗೂ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಮನವಿಗಳಿಗೆ ಮನ್ನಣೆ ನೀಡಿ, 8 ಗ್ರಾಮಗಳಿಗೆ ನೀರು ಒದಗಿಸುವ ಬೆಳಂದೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗಿದೆ. 

8 ಗ್ರಾಮಗಳಿಗೆ ನೀರು
ಪ್ರಸ್ತುತ ರೂಪಿಸಲಾಗಿರುವ ಯೋಜನೆಗೆ ಕುಮಾರಧಾರಾ ನದಿಯನ್ನೇ ಮೂಲವಾಗಿ ಗುರುತಿಸಲಾಗಿದೆ. ಬೆಳಂದೂರು ಯೋಜನೆ 8 ಗ್ರಾಮಗಳಿಗೆ ನೀರು ಒದಗಿಸಲಿದ್ದು, ಎಪ್ರಿಲ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಬಹುದು. ನಂತರ ಕಾಮಗಾರಿ ಆರಂಭವಾಗಲಿದೆ.
– ರೋಹಿದಾಸ್‌,
ಎಂಜಿನಿಯರ್‌, ಜಿ.ಪಂ. ಎಂಜಿನಿಯರಿಂಗ್‌
ಪುತ್ತೂರು ವಿಭಾಗ

 ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next