Advertisement

ಬೆಳಂದೂರು: ಶಾಶ್ವತ ಯೋಜನೆ ಅನುಷ್ಠಾನ ಅಗತ್ಯ

04:25 AM Feb 13, 2019 | |

ಸವಣೂರು: ಬೇಸಗೆಯ ಬಿಸಿ ಕಳೆದ ಬಾರಿಗಿಂತ ಈ ಬಾರಿ ತೀವ್ರತೆ ಪಡೆದುಕೊಂಡಿದೆ. ಹಳ್ಳ, ತೊರೆಯಲ್ಲಿ ನೀರಿನ ಹರಿವು ನಿಂತು ಎಲ್ಲವೂ ಬತ್ತಿಹೋಗಿವೆ. ನೀರಿನ ಬವಣೆ ಗ್ರಾಮೀಣ ಭಾಗಕ್ಕೂ ತಟ್ಟುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

Advertisement

ಬೆಳಂದೂರು ಜಿ.ಪಂ.ವ್ಯಾಪ್ತಿಯಲ್ಲಿ ಆಲಂಕಾರು, ಬೆಳಂದೂರು, ಕಾಣಿಯೂರು, ಪೆರಾಬೆ, ಸವಣೂರು ಹೀಗೆ 5 ಗ್ರಾಮ ಪಂಚಾಯತ್‌ಗಳು ಒಳಗೊಳ್ಳುತ್ತದೆ. ಗ್ರಾ.ಪಂ. ಸರಬರಾಜು ಮಾಡುವ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಲಾಗಿದೆ. ಈ ಭಾಗಕ್ಕೆ ಕುಮಾರಾಧಾರಾ ನದಿಯನ್ನು ಬಳಸಿಕೊಂಡು ಶಾಶ್ವತ ಯೋಜನೆಯನ್ನು ರೂಪಿಸಬೇಕಿದೆ.

ಆಲಂಕಾರು ಗ್ರಾ.ಪಂ. ವ್ಯಾಪ್ತಿಗೆ ಆಲಂಕಾರು, ಬೆಳಂದೂರು ಗ್ರಾ.ಪಂ.ನಲ್ಲಿ ಬೆಳಂದೂರು, ಕುದ್ಮಾರು, ಕಾಯ್ಮಣ, ಕಾಣಿಯೂರು ಗ್ರಾ.ಪಂ.ನಲ್ಲಿ ಕಾಣಿಯೂರು, ಚಾರ್ವಾಕ, ದೋಳ್ಪಾಡಿ, ಸವಣೂರು ಗ್ರಾ.ಪಂ.ನಲ್ಲಿ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳು ಇವೆ. ಪೆರಾಬೆ ಗ್ರಾ.ಪಂ.ನಲ್ಲಿ ಪೆರಾಬೆ, ಕುಂತೂರು ಗ್ರಾಮಗಳು ಸೇರಿವೆ. ಐದು ಗ್ರಾ.ಪಂ.ಗಳ 12 ಗ್ರಾಮಗಳು ಬೆಳಂದೂರು ಕ್ಷೇತ್ರಕ್ಕೆ ಒಳಪಡುತ್ತವೆ. ಜನತೆಯ ಮೂಲ ಆವಶ್ಯಕತೆ ಯಾದ ಶುದ್ಧ ಕುಡಿಯುವ ನೀರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ. ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿ ಬರುತ್ತಿದೆ.

ಅಣೆಕಟ್ಟು: ಪ್ರಗತಿ ಕಂಡಿಲ್ಲ
ಬೆಳಂದೂರು, ಸವಣೂರು, ಕಾಣಿಯೂರು, ಆಲಂಕಾರು, ಪೆರಾಬೆ ಗ್ರಾ.ಪಂ. ವ್ಯಾಪ್ತಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಅನುಷ್ಠಾನವಾಗಬೇಕು. ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ಶಾಸಕ ಎಸ್‌. ಅಂಗಾರ ಅವರು 2017ರ ಮಾರ್ಚ್‌ನಲ್ಲಿ ಶಿಲಾನ್ಯಾಸ ಮಾಡಿದ್ದರು. ಬಳಿಕ ಯಾವುದೇ ಪ್ರಗತಿ ಕಂಡಿಲ್ಲ.

ಅನುಷ್ಠಾನವಾಗಲಿ
ಪರಿಸರದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯ ನೀರನ್ನು ಬಳಸಿಕೊಂಡು ಸವಣೂರು, ಪಾಲ್ತಾಡಿ, ಪುಣ್ಚಪ್ಪಾಡಿ, ಬೆಳಂದೂರು, ಕುದ್ಮಾರು,ಕಾೖಮಣ, ಚಾರ್ವಾಕ, ಕಾಣಿಯೂರು, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಶಾಶ್ವತ ಯೋಜನೆ ಅನುಷ್ಠಾನವಾಗಬೇಕಿದೆ.

Advertisement

ಬಹುಗ್ರಾಮ ಶೀಘ್ರ ಅನುಷ್ಠಾನ
ಬೆಳಂದೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನ ಮಾಡಲು ಶಾಸಕ ಎಸ್‌. ಅಂಗಾರ ಅವರ ಪ್ರಯತ್ನದಿಂದ ಯೋಜನೆ ಮಂಜೂರಾತಿಗೆ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ತಾಂತ್ರಿಕ ಮಂಜೂರಾತಿ ಬಳಿಕ ಕಾಮಗಾರಿ ಆರಂಭವಾಗಲಿದೆ. ಈ ಯೋಜನೆ ಶೀಘ್ರ ಅನುಷ್ಠಾನವಾಗಲಿ ಎನ್ನುವ ಆಶಯ ನಮ್ಮದು.
-ಪ್ರಮೀಳಾ ಜನಾರ್ದನ,
ಜಿ.ಪಂ. ಸದಸ್ಯರು

ವಿದ್ಯುತ್‌ ಕಡಿತ ದೊಡ್ಡ ಹೊಡೆತ
ಹೆಚ್ಚಿನ ಭಾಗದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಲಾಗಿದ್ದು, ಅನಿಯಮಿತ ವಿದ್ಯುತ್‌ ಕಡಿತದಿಂದ ಕೃಷಿ ಹಾಗೂ ಕುಡಿಯುವ ನೀರಿನ ಪೂರೈಕೆಗೆ ದೊಡ್ಡ ಹೊಡೆತ ಬೀಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ 4 ಗಂಟೆ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಅಲ್ಲದೆ ತ್ರಿಫೇಸ್‌ ವಿದ್ಯುತ್‌ ನೀಡುವಲ್ಲಿಯೂ ವ್ಯತ್ಯಯವಾಗುತ್ತಿದೆ .ಇದು ಇನ್ನಷ್ಟು ಸಮಸ್ಯೆಯನ್ನು ಹೆಚ್ಚಿಸಿದೆ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next