ಕಲಬುರಗಿ: ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರು ಕಾಂಗ್ರೆಸ್ ಪಕ್ಷ ಸೇರುವ ವಿಚಾರದ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಅವರು ಪಕ್ಷಕ್ಕೆ ಬರುವುದಾಗಿ ಹೇಳಿಲ್ಲ, ನಾವೂ ಕರೆದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಮಗಿ ಅವರು ತಾಂಡಾ ಅಭಿವೃದ್ದಿಗೆ ಸಂಬಂಧಿಸಿದಂತೆ ಪಟ್ಟಿ ಕೊಟ್ಟಿದ್ದರು. ಅದರ ಸಂಬಂಧ ಚರ್ಚಿಸಲು ಬೆಂಗಳೂರಿನ ಮನೆಗೆ ಬಂದಿದ್ದು ನಿಜ. ಆದರೆ ಬೆಳಮಗಿ ಜೆಡಿಎಸ್‌ನಲ್ಲಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಹೀಗಾಗಿ ಒಟ್ಟಾಗಿ ಚುನಾವಣೆ ಮಾಡುತ್ತೇವೆ. ಒಂದು ವೇಳೆ ಕಾಂಗ್ರೆಸ್‌ಗೆ ಬಂದರೆ ಸ್ವಾಗತ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ದ ಸ್ಪರ್ಧಿಸಿದ್ದರೂ ಬೆಳಮಗಿ ಈಗ ಜೆಡಿಎಸ್ ಪಕ್ಷದಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜತೆಯಾಗಿ ಕೆಲಸ ಮಾಡಬೇಕಾಗಿದೆ. ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಅವರು ಕಾಂಗ್ರೆಸ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ಆ ಹುದ್ದೆ ಖಾಲಿ ಇಲ್ಲ. ಬೆಳಮಗಿ ಅವರನ್ನು ಕರೆ ತಂದು ಜಾಧವ
ಸ್ಥಾನದಲ್ಲಿ ತುಂಬುತ್ತಾರೆ ಎನ್ನುವುದು ಸುಳ್ಳು. ಅಂತಹ ಮಾತುಕತೆ ನಡೆದಿಲ್ಲ ಎಂದರು.