Advertisement

ರಾಜ್ಯದಲ್ಲಿ 1236 ದೌರ್ಜನ್ಯ ಪ್ರಕರಣ ವಿಚಾರಣೆ ಪೂರ್ಣ

04:30 PM Oct 06, 2018 | |

ಬೆಳಗಾವಿ: ಮಹಿಳೆಯರು ಮತ್ತು ಮಕ್ಕಳಿಗೆ ಬೆಂಗಳೂರಿನ ಸಾರ್ವಜನಿಕ ಸ್ಥಳಗಳು ಸುರಕ್ಷಿತವಲ್ಲ ಎಂಬ ಭಾವನೆ ಹೆಚ್ಚಾಗಿರುವುದು ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಗೊತ್ತಾಗಿದ್ದು, ಇದೇ ಪರಿಸ್ಥಿತಿ ದೇಶದ ಇತರ ನಗರಗಳಲ್ಲಿಯೂ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕಕುಮಾರ ದತ್ತ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ನವದೆಹಲಿಯ ಹನ್ಸ್‌ ಸೆಡಲ್‌ ಪ್ರತಿಷ್ಠಾನ, ಗ್ಲೋಬಲ್‌ ಕನ್‌ ಸರ್ನ್ಸ್ ಇಂಡಿಯಾ, ಸಾಧನಾ ಮಾನವ ಹಕ್ಕುಗಳ ಕೇಂದ್ರ, ಹಾಗೂ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷಿತ ನಗರಗಳ ನಿರ್ಮಾಣ ವಿಷಯವಾಗಿ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಶೇ.90ರಷ್ಟು ಮಹಿಳೆಯರು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿ ಅತಂಕ ಹಾಗೂ ಭಯದ ವಾತಾವರಣ ಇರುವದೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿರೀಕ್ಷಿತ ಪ್ರಮಾಣದಲ್ಲಿ ಇತ್ಯರ್ಥಗೊಳ್ಳುತ್ತಿಲ್ಲ. 2016ರಿಂದ ಇಲ್ಲಿಯವರೆಗೆ ದೇಶದಲ್ಲಿ 22 ಲಕ್ಷ ಪ್ರಕರಣಗಳು ವಿಚಾರಣೆಗೆ ಬಂದಿದ್ದು, ಅದರಲ್ಲಿ 23 ಸಾವಿರ ಪ್ರಕರಣಗಳು ಇತ್ಯರ್ಥಗೊಂಡಿವೆ. ರಾಜ್ಯದಲ್ಲಿ 1236 ದೌರ್ಜನ್ಯ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 60 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಮಾತನಾಡಿ, ನಮ್ಮ ನಗರ ಹಾಗೂ ಜಿಲ್ಲೆಗಳಲ್ಲಿ ಸುರಕ್ಷತೆ ಒಡಗಿಸಲಾಗುತ್ತಿದೆ ಎಂದು ಹೇಳಿದರೂ ವಾಸ್ತವದಲ್ಲಿ ಹಾಗಿಲ್ಲ. ಪರಿಸ್ಥಿತಿ ಹಾಗೂ ನಮ್ಮ ಕಾರ್ಯವೈಖರಿ ನ್ಯೂನ್ಯತೆಗಳನ್ನು ಹುಟ್ಟು ಹಾಕುತ್ತಿದೆ ಎಂದರು. ಗ್ಲೋಬಲ್‌ ಕನ್‌ಸರ್ನ್ಸ್ ಇಂಡಿಯಾ ಸಂಸ್ಥೆ ಸಂಯೋಜಕಿ ಬೃಂದಾ ಅಡಿಗೆ ಮಾತನಾಡಿ, ಪೊಲೀಸ್‌ ಹಾಗೂ ನ್ಯಾಯಾಂಗ ಇಲಾಖೆಯಿಂದ ನ್ಯಾಯ ಸಿಗುತ್ತದೆ ಎನ್ನುವ ಭಾವನೆ ಜನರಲ್ಲಿ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ. ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿ ಹಕ್ಕುಗಳನ್ನು ರಕ್ಷಿಸಲು ಸಹ ಆಯೋಗ ಚಿಂತನೆ ಮಾಡಬೇಕು ಎಂದರು. 

Advertisement

ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ಸಾಧನಾ ಮಾನವ ಹಕ್ಕುಗಳ ಕೇಂದ್ರದ ಸಂಯೋಜಕಿ ಇಸಬೆಲ್ಲಾ ಕ್ಸೇವಿಯರ್‌, ಮಹಿಳಾ ಕಲ್ಯಾಣ ಸಂಸ್ಥೆ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌.ಕೆ. ದತ್ತಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳ ಸುಕ್ಷರಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಜತೆಗೆ ದೌರ್ಜನ್ಯಕ್ಕೆ ಒಳಗಾಗಿರುವವರಿಗೆ ಎಲ್ಲ ರೀತಿಯ ಸಹಾಯ ಸೌಲಭ್ಯ, ಕಾನೂನು ರಕ್ಷಣೆ ಸೇರಿದಂತೆ ಇನ್ನಿತರ ರಕ್ಷಣಾ ಸೌಲಭ್ಯ ಕಲ್ಪಿಸುತ್ತಿದೆ. ಆದರೆ, ಪೊಲೀಸರು ಮತ್ತು ಇನ್ನಿತರ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ತನಿಖೆಗಳು ಪೂರ್ಣಗೊಳ್ಳುತ್ತಿಲ್ಲ ಎಂದರು. ಎಸ್ಪಿ ಸುಧೀರಕುಮಾರ ರೆಡ್ಡಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 6590 ದೌರ್ಜನ್ಯ ಪ್ರಕರಣಗಳು ಬಾಕಿ ಉಳಿದಿದ್ದವು. ಇದೀಗ ಅವುಗಳ ಸಂಖ್ಯೆ 2300ಕ್ಕೆ ಇಳಿಕೆಯಾಗಿದೆ. ಶೇ.30 ಪ್ರಕರಣಗಳ ತನಿಖೆ ಪೂರ್ಣಗೊಂಡಿದೆ. ಶೇ.95 ಪ್ರಕರಣಗಳು ಅಂತಿಮ ಹಂತದಲ್ಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next