ಬೆಳಗಾವಿ: ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಕೆಲ ವರ್ಷಗಳಿಂದ ದೇವಸ್ಥಾನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ಶನಿವಾರ ರಾತ್ರಿ ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಗಲಾಟೆಯಾಗಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಗೌಂಡವಾಡ ಗ್ರಾಮದ ಮುಖಂಡ ಸತೀಶ ಪಾಟೀಲ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಕಾರು, ದ್ವಿಚಕ್ರ ವಾಹನಗಳು ಮತ್ತು ಮೂರು ಹುಲ್ಲಿನ ಬಣವಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ, ಪಿ.ವಿ. ಸ್ನೇಹಾ, ಗ್ರಾಮೀಣ ಎಸಿಪಿ ಗುಡಾಜಿ ಹಾಗೂ ಕಾಕತಿ ಇನ್ಸ್ಪೆಕ್ಟರ್ ಗುರುನಾಥ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ : ದ.ಕ.: ಏಳು ಮಂದಿಗೆ ಕೋವಿಡ್ ದೃಢ; ಉಡುಪಿ ಜಿಲ್ಲೆಯಲ್ಲಿ 6 ಪಾಸಿಟಿವ್
ಗ್ರಾಮದ ಬಿರ್ಜೆ ಕುಟುಂಬದವರು ಹಾಗೂ ಗ್ರಾಮಸ್ಥರ ಮಧ್ಯೆ ದೇವಸ್ಥಾನ ಜಾಗಕ್ಕೆ ಸಂಬಂಧಿಸಿದಂತೆ ಜಗಳವಿತ್ತು. ಈ ಬಗ್ಗೆ ಮೂರ್ನಾಲ್ಕು ಬಾರಿ ಗಲಾಟೆ ನಡೆದಿದೆ. ಸತೀಶ ಪಾಟೀಲ ಅವರು ಗ್ರಾಮಸ್ಥರ ಪರವಾಗಿ ನೇತೃತ್ವ ವಹಿಸಿದ್ದರು. ಇದು ಬಿರ್ಜೆ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಆಗಾಗ ಸತೀಶನ ಮೇಲೆ ಕೆಂಡಕಾರುತ್ತಿದ್ದರು. ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿ ಸತೀಶನನ್ನು ಹತ್ಯೆ ಮಾಡಲಾಗಿದೆ. ಇದರಿಂದ ಗ್ರಾಮದ ಅನೇಕರು ರೊಚ್ಚಿಗೆದ್ದು ಸಿಕ್ಕ ಸಿಕ್ಕ ವಾಹನಗಳಿಗೆ, ಹುಲ್ಲಿನ ಬಣವಿಗಳಿಗೆ ಬೆಂಕಿ ಹಚ್ಚಿದ್ದಾರೆ.