ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರದ ಬಹು ಬೇಡಿಕೆಯ ಕರಾಡ-ಧಾರವಾಡ ಹೊಸ ರೈಲು ಮಾರ್ಗದ ಈಗಾಗಲೇ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಉಳಿದ ಬೆಳಗಾವಿ-ಕರಾಡ ಹೊಸ ರೈಲು ಮಾರ್ಗ ವಿಸ್ತರಣೆ ಮಾಡಬೇಕು ಎಂದು ಗಡಿ ಜನರ ಒತ್ತಾಯವಾಗಿದೆ.
ಗಡಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕರಾಡ-ಧಾರವಾಡ(ಕೊಲ್ಲಾಪುರ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಕಿತ್ತೂರು ಮಾರ್ಗವಾಗಿ) ಹೊಸ ರೈಲು ಮಾರ್ಗ ರಚನೆಯಾಗಬೇಕೆಂದು ಕಳೆದ 2012ರಲ್ಲಿ ರೈಲ್ವೆ ಇಲಾಖೆ ಸರ್ವೇ ಕಾರ್ಯ ಕೈಗೊಂಡಿತ್ತು. ಇದೀಗ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಸರಕಾರ ಮಂಜೂರಾತಿ ನೀಡಿದೆ. ಉಳಿದ ಬೆಳಗಾವಿಯಿಂದ ಕರಾಡ ಹೊಸ ರೈಲು ಮಾರ್ಗದ ಮಂಜೂರಾತಿ ನನೆಗುದಿಗೆ ಬಿದ್ದಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ವಿಶೇಷ ಪ್ರಯತ್ನ ಮಾಡಿ ಗಡಿ ಜನರ ಬೇಡಿಕೆ ಈಡೇರಿಸುತ್ತಾರೆ ಎಂಬ ಆಶಾಭಾವ ಗಡಿ ಜನರಲ್ಲಿದೆ.
ನೆರೆಯ ಮಹಾರಾಷ್ಟ್ರದ ಕರಾಡ-ಧಾರವಾಡ ಹೊಸ ರೈಲು ಮಾರ್ಗ ರಚನೆಯಾಗಬೇಕೆಂದು ಹಿಂದಿನ ನಿಪ್ಪಾಣಿ ಶಾಸಕರಾಗಿದ್ದ ಕಾಕಾಸಾಹೇಬ ಪಾಟೀಲ ಸತತ ಪ್ರಯತ್ನ ಪಟ್ಟಿದ್ದರು. ಯುಪಿಎ ಸರಕಾರದ ಎರಡರಲ್ಲಿ ಪ್ರಭಾವಿ ಸಚಿವರಾಗಿದ್ದ ಶರದ ಪವಾರ ಮೂಲಕ ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ನೇತೃತ್ವದ ತಂಡ ಪ್ರಸ್ತಾವನೆ ಸಲ್ಲಿಸಿ ಸರ್ವೇ ಕಾರ್ಯಕ್ಕೆ ಮನವಿ ಮಾಡಿದ್ದರು.
ಸಲ್ಲಿಕೆಯಾದ ಪ್ರಸ್ತಾವನೆಗೆ ರೈಲ್ವೆ ಇಲಾಖೆಯು ಕಳೆದ 2012ರಲ್ಲಿ ಸರ್ವೇ ಕಾರ್ಯ ಕೈಗೊಂಡು ಪೂರ್ಣಗೊಳಿಸಿತ್ತು. ಹೊಸ ರೈಲ್ವೆ ಮಾರ್ಗಕ್ಕೆ ಈಗ ಅರ್ಧದಷ್ಟು ಮಂಜೂರಾತಿ ದೊರೆತಿದ್ದು, ಇದರಿಂದ ಬೆಳಗಾವಿಯಿಂದ ಕರಾಡ ವರೆಗೆ ಹೊಸ ರೈಲು ಮಾರ್ಗ ರಚನೆಯಾಗುತ್ತದೆ ಎಂಬ ಗಡಿ ಭಾಗದ ಚಿಕ್ಕೋಡಿ, ಸಂಕೇಶ್ವರ, ನಿಪ್ಪಾಣಿ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಜನರು ತೀವ್ರ ಕುತೂಹಲದಲ್ಲಿ ಇದ್ದಾರೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೊಸ ರೈಲು ಮಾರ್ಗ: ಕರ್ನಾಟಕ-ಮಹಾರಾಷ್ಟ್ರದ ಕೊಲ್ಲಾಪುರ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಈ ರೈಲ್ವೆ ಯೋಜನೆಯು ಬೆಳಗಾವಿಯಿಂದ ಕರಾಡವರಿಗೆ ಸುಮಾರು 191 ಕಿಮೀ ಅಂತರ ಇದೆ. ಇದರಲ್ಲಿ ಮಹಾರಾಷ್ಟ್ರದ ವ್ಯಾಪ್ತಿಯ 97 ಕಿಮೀ ಹಾಗೂ ಕರ್ನಾಟಕ ವ್ಯಾಪ್ತಿಯ 94 ಕಿಮೀ ಅಂತರ ಹೊಂದಿದೆ. ಜಿಲ್ಲೆಯ ಪರಕನಟ್ಟಿ-ಸಂಕೇಶ್ವರ-ನಿಪ್ಪಾಣಿ- ಗುಡಮುಡಸಿಂಗಿ ಮಾರ್ಗದಿಂದ ಕೊಲ್ಲಾಪುರವರೆಗಿನ 85 ಕಿಮೀ ಮತ್ತು ಬೆಳಗಾವಿ-ಹಂದಿಗನೂರ -ದಡ್ಡಿ- ಹಲಕರ್ಣಿ- ಸಂಕೇಶ್ವರ-ನಿಪ್ಪಾಣಿ-ಕರಾಡವರೆಗೆ 21 ನಿಲ್ದಾಣ ಹೊಂದಿ ಹೊಸ ರೈಲ್ವೆ ಮಾರ್ಗ ರಚನೆಯಾಗಿದೆ.
– ಮಹಾದೇವ ಪೂಜೇರಿ