Advertisement

Belagavi; ಸುಳ್ಳು ಅತ್ಯಾಚಾರ ಕೇಸ್ ಹಾಕಿದ್ದ 13 ಮಂದಿಗೆ ಮೂರುವರೆ ವರ್ಷ ಕಾರಾಗೃಹ ಶಿಕ್ಷೆ

03:13 PM Jun 27, 2024 | Team Udayavani |

ಬೆಳಗಾವಿ: ಹೆಸ್ಕಾಂ ಅಧೀಕ್ಷಕ ಅಭಿಯಂತರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಹೆಸ್ಕಾಂ ಸಹಾಯಕ ಅಭಿಯಂತೆ ಸೇರಿ ಒಟ್ಟು ಜನ ಹೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೂರುವರೆ ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ ತಲಾ 86 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮೀ ದೇವಿ ಅವರು ಗುರುವಾರ ಮಹತ್ವದ ತೀರ್ಪು ಪ್ರಕಟಿಸಿದರು.

Advertisement

ಮೈಸೂರಿನ ಬೆಸ್ಕಾಂ ಸಹಾಯಕ ಅಭಿಯಂತೆ ಬಿ.ವಿ. ಸಿಂಧು, ಹೆಸ್ಕಾಂ ಸಹಾಯಕ ಲೈನ್‌ಮ್ಯಾನ್ ನಾಥಾಜಿ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅಜಿತ ಪೂಜಾರಿ, ಹೆಸ್ಕಾಂ ಸಹಾಯಕ ಲೈನ್‌ಮ್ಯಾನ್ ಮಲಸರ್ಜ ಶಹಾಪುರಕರ, ಕಿರಿಯ ಇಂಜಿನಿಯರ್ ಸುಭಾಸ ಹಲ್ಲೋಳ್ಳಿ, ಲೈನ್‌ಮ್ಯಾನ್ ಈರಪ್ಪ ಎಂ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ಎಸ್ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಎಲ್ ಗೋಡಲಕುಂದರಗಿ, ಹೆಸ್ಕಾಂ ಸ್ಟೇಷನ್ ಅಟೆಂಡರ್ ಗ್ರೇಡ್-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮ್ಯಾನ್ ಈರಯ್ಯ ಗುರಯ್ಯ ಹಿರೇಮಠ, ಲೈನ್‌ಮ್ಯಾನ್ ಮಾರುತಿ ಭರಮಾ ಪಾಟೀಲ, ಹೆಸ್ಕಾಂ ನಿವೃತ್ತ ಸಹಾಯಕಿ ದಾಕ್ಷಾಯಣಿ ಮಹಾದೇವ ನೇಸರಗಿ ಎಂಬವರಿಗೆ ಮೂರುವರೆ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯ ಹೆಸ್ಕಾಂ ಅಧೀಕ್ಷಕ ಅಭಿಯಂತರಾಗಿದ್ದ ತುಕಾರಾಮ ಮಜ್ಜಗಿ ಅವರ ವಿರುದ್ಧ 19 ನವೆಂಬರ್ 2014ರಲ್ಲಿ ಮೊದಲನೇ ಆರೋಪಿ ಬಿ.ವಿ. ಸಿಂಧು ಒಳಸಂಚು ರೂಪಿಸಿ ಮಾಳಮಾರುತಿ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ತನಿಖಾಧಿಕಾರಿಗಳು ತನಿಖೆ ಕೈಗೊಂಡು ಬಿ ಅಂತಿಮ ವರದಿ ಸಲ್ಲಿಸಿದ್ದು, ನಂತರ ಮಜ್ಜಿಗಿ ಅವರು ದೂರು ಹಿಂಪಡೆಯಲು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಂಧು ಮತ್ತೊಂದು ದೂರು ನೀಡಿದ್ದರು. ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಲು ಮಜ್ಜಗಿಯವರೇ ಕಾರಣ ಎಂಬುದಾಗಿ ಮೂರನೇ ದೂರು ನೀಡಿದ್ದರು. ಈ ಕೇಸಿನಲ್ಲಿ 9 ದಿನಗಳ ಕಾಲ ಮಜ್ಜಗಿ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು.

ಪೊಲೀಸರು ತನಿಖೆ ಕೈಗೊಂಡು ಇಂಥ ಯಾವುದೇ ಘಟನೆ ನಡೆದಿಲ್ಲವೆಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆರೋಪಿಗಳು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಇಲಾಖೆಯಿಂದ ಮಜ್ಜಗಿ ಅವರನ್ನು ಅಮಾನತುಗೊಳಿಸುವಂತೆ ಮಾಡಿದ್ದರು.

ಈ ಪ್ರಕರಣವನ್ನು ಹಿಂದಿನ ಇನ್ಸಪೆಕ್ಟರ್ ಚನ್ನಕೇಶವ ಟಿಂಗರೀಕರ ಜಗದೀಶ ಹಂಚಿನಾಳ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಮುರಳೀಧರ ಕುಲಕರ್ಣಿ ವಾದ ಮಂಡಿಸಿದ್ದರು. ಎಲ್ಲ ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು.‌ ಈಗ ಶಿಕ್ಷೆ ಪ್ರಕಟಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next