Advertisement

Belagavi: ಬಿಜೆಪಿಯಲ್ಲಿ ಭಿನ್ನಮತವಿಲ್ಲ, ವಿಜಯೇಂದ್ರ ನಮ್ಮ ಅಧ್ಯಕ್ಷರು: ಪ್ರತಾಪ್‌ ಸಿಂಹ

01:24 PM Dec 01, 2024 | Team Udayavani |

ಬೆಳಗಾವಿ: ವಿಜಯೇಂದ್ರ ನಮ್ಮ ರಾಜ್ಯಾಧ್ಯಕ್ಷರು. ನಮ್ಮ ಹೋರಾಟ ವಕ್ಫ್‌ ಬೋರ್ಡ್ ಭೂಕಬಳಿಕೆಯ ನೀತಿ ವಿರುದ್ಧ. ಯಾವುದೇ ವ್ಯಕ್ತಿ ವಿರುದ್ಧದ ಹೋರಾಟ ಅಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

Advertisement

ಬೆಳಗಾವಿಯಲ್ಲಿ ರವಿವಾರ (ಡಿ.01) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ನವೆಂಬರ್ 22ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ಕೊಟ್ಟಿದ್ದಾಗ ನಾನೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಎಲ್ಲಾ ಕಡೆಯೂ ಕಾರ್ಯಕ್ರಮ ಯಶಸ್ವಿಯಾಗಿದೆ. ವಿಜಯಪುರದಲ್ಲಿ ಯತ್ನಾಳ್ ಅಹೋರಾತ್ರಿ ಧರಣಿ ನಡೆಸಿದ್ದರು. ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರು ಭೇಟಿ ನೀಡಿದ್ದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಹೋರಾಟದಲ್ಲಿ ಭಾಗಿಯಾಗಿದ್ದರು. ನಮ್ಮ ಹೋರಾಟ ಬಿಜೆಪಿ ಹೋರಾಟ, ಯಾವುದೇ ವ್ಯಕ್ತಿ ವಿರುದ್ಧದ ಹೋರಾಟ ಅಲ್ಲ ಎಂದರು.

ವಿಜಯೇಂದ್ರ, ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ನಮ್ಮ ಕಾರ್ಯಕರ್ತರ ಗುರಿ ಒಂದೇ. ವಕ್ಫ್‌ ಭೂಕಬಳಿಕೆಗೆ ತಡೆ ಹಾಕಿ ನಮ್ಮ ರೈತರ ಭೂಮಿ ರಕ್ಷಿಸುವುದಾಗಿದೆ. ಇಲ್ಲಿ ಅಪಸ್ವರ, ಭಿನ್ನಾಭಿಪ್ರಾಯವಿಲ್ಲ. ಅದಕ್ಕೆ ಅವಕಾಶವೂ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಯತ್ನಾಳ್ ರನ್ನು ‌ಉಚ್ಛಾಟನೆ ಮಾಡಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅಪ್ರಸ್ತುತ, ಜನರಿಂದ ತಿರಸ್ಕಾರಗೊಂಡು ಮೂಲೆ ಗುಂಪಾಗಿರುವ ವ್ಯಕ್ತಿಗಳ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ನಾಯಕರ ಸಮ್ಮುಖದಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ಒಟ್ಟಾರೆ ಹೋರಾಟ ವಕ್ಫ್‌ ಬೋರ್ಡ್ ವಿರುದ್ಧ, ಸಿದ್ದರಾಮಯ್ಯನವರ ಹಿಂದೂ ವಿರೋಧಿ ಧೋರಣೆ ವಿರುದ್ಧ. ವೈಯಕ್ತಿಕ ಮೇಲಾಟ, ಈ ರೀತಿಯ ಅಪಸ್ವರದ ಮಾತುಗಳಿಗೆ ಎಲ್ಲಿ ಜಾಗವಿದೆ? ಯತ್ನಾಳ್ ‌ಅವರು ರಾಜ್ಯ ಬಿಜೆಪಿಯ ಅತಿದೊಡ್ಡ ನೇತಾರರು, 1994 ರಲ್ಲಿ ಯತ್ನಾಳ್ ಸಂಸದರಾಗಿ ‌ಚುನಾಯಿತ ಪ್ರತಿನಿಧಿಯಾದವರು. ವಾಜಪೇಯಿ ಸರ್ಕಾರದಲ್ಲಿ ಯತ್ನಾಳ್ ಕೇಂದ್ರ ‌ಸಚಿವರಾಗಿದ್ದರು. ಈ ಭಾಗದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಯತ್ನಾಳ್ ಹೊಂದಿದ್ದಾರೆ ಎಂದರು.

Advertisement

ನಮ್ಮ ಹೋರಾಟ ವಿಜಯೇಂದ್ರ ವಿರುದ್ಧ ಅಲ್ಲ, ವಕ್ಫ್‌ ಬೋರ್ಡ್ ಭೂಕಬಳಿಕೆ ವಿರುದ್ಧ.  ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಇದು ಹೈಕಮಾಂಡ್ ಗಮನಕ್ಕಿದೆ. ಬಿಜೆಪಿ ಮನೆ ಮೂರು ಬಾಗಿಲಾಗಿಲ್ಲ. ಬದಲಾಗಿ ಕಾಂಗ್ರೆಸ್‌ನಲ್ಲಿ ಎಲ್ಲರೂ ಒಂದೊಂದು ಬಾಗಿಲು, ಒಂದೊಂದು ಅಂಗಡಿ ತೆರೆದಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಸಿಎಂ ಚೇರ್ ಮೇಲೆ ಕುಳಿತುಕೊಳ್ಳಲು ಡಿಕೆಶಿ ಕಾಯುತ್ತಿದ್ದಾರೆ. ಈ ಮಧ್ಯೆ ನಾನು ಸಿಎಂ ಆಗಬೇಕು, ಅಧ್ಯಕ್ಷನಾಗಬೇಕೆಂದು ಸತೀಶ್ ಜಾರಕಿಹೊಳಿ ಬಯಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಪರಮೇಶ್ವರ ಕೂಡ ಸಿಎಂ ಖುರ್ಚಿಗೆ ಪ್ರಯತ್ನಿಸುತ್ತಿದ್ದಾರೆ. ಊರ ತುಂಬ ಬಾಗಿಲು ಇರುವುದು ಕಾಂಗ್ರೆಸ್‌ನಲ್ಲಿ ನಮ್ಮಲ್ಲಿ ಒಂದೇ ಬಾಗಿಲು, ಒಂದೇ ಹೋರಾಟ ಎಂದು ಪ್ರತಾಪ್‌ ಸಿಂಹ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next