Advertisement

Belagavi: ನಾಡು-ನುಡಿ ರಕ್ಷಣೆಯಲ್ಲಿ ಸಾಹಿತಿಗಳ ಮೌನ ಸಲ್ಲ-ಚಂದರಗಿ

05:48 PM Nov 20, 2023 | Team Udayavani |

ಬೆಳಗಾವಿ: ನಾಡು ಮತ್ತು ನುಡಿ ರಕ್ಷಣೆ ವಿಚಾರ ಬಂದಾಗ ನಮ್ಮ ಸಾಹಿತಿಗಳು ಮೌನ ವಹಿಸುವುದು ಸರಿಯಲ್ಲ. ಈ ವಿಷಯದಲ್ಲಿ ಸಾಹಿತಿಗಳ ಪಾತ್ರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಗಡಿತಿಲಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ನಾಡು-ನುಡಿ ರಕ್ಷಣೆ ವಿಷಯದಲ್ಲಿ ಆಡಳಿತ ಪಕ್ಷವನ್ನು ವಿರೋಧಿಸುವುದು ಕನ್ನಡ ಹೋರಾಟಗಾರರು ಮತ್ತು ಪತ್ರಕರ್ತರ ಕೆಲಸ ಮಾತ್ರವಲ್ಲ, ಇದರಲ್ಲಿ ಸಾಹಿತಿಗಳ ಪಾತ್ರವೂ ಮುಖ್ಯವಾಗಿದೆ. ಆದರೆ ಕೆಲವೇ ಸಾಹಿತಿಗಳು ಈ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ವಿಷಾದಿಸಿದರು. ಬೆಳಗಾವಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಸುವರ್ಣ ವಿಧಾನಸೌಧಕ್ಕೆ ಗಡಿ ಭಾಗಕ್ಕೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು.

ಮಹಾರಾಷ್ಟ್ರದಲ್ಲಿರುವ ಅಚ್ಚ ಕನ್ನಡ ಪ್ರದೇಶಗಳಾದ ಜತ್ತ, ಅಕ್ಕಲಕೋಟೆ, ಸೊಲ್ಲಾಪುರವನ್ನು ಮರಾಠೀಕರಣಗೊಳಿಸಲು ಅಲ್ಲಿನ ಸರ್ಕಾರ ಕ್ರಮ ವಹಿಸಿದೆ. ಅಂತೆಯೇ ಬೆಳಗಾವಿಯನ್ನೂ ಕನ್ನಡೀಕರಣಗೊಳಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಾಗನೂರು ರುದ್ರಾಕ್ಷಿಮಠದ ಡಾ| ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ದೇಶದ ಜನರ ನಿತ್ಯದ ಬದುಕಿಗೆ ಮಿಡಿಯುತ್ತ ಸಾಮಾಜಿಕ ಸಾಮರಸ್ಯ ತರಬಲ್ಲ ಶಕ್ತಿ ಸಾಹಿತ್ಯಕ್ಕಿದೆ. ಹೀಗಾಗಿ ಮುಂದಿನ ಪೀಳಿಗೆಯನ್ನು ಸಾಹಿತ್ಯದತ್ತ ಸೆಳೆಯುವ ಕಾರ್ಯ ಸಾಂಸ್ಕೃತಿಕ ಸಂಘಗಳು ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ
ಪರಿಸರದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

Advertisement

ಡಾ| ದಯಾನಂದ ನೂಲಿ ಮಾತನಾಡಿ, ಬಿ.ಎ. ಸನದಿ ತಮ್ಮ ಕಾವ್ಯದುದ್ದಕ್ಕೂ ಮಾನವೀಯ ಪ್ರೀತಿ, ಜೀವನಮೌಲ್ಯ ಪ್ರತಿಷ್ಠಾಪಿಸಿದ್ದಾರೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಅರ್ಥಪೂರ್ಣವಾಗಿ ಕಾರ್ಯಕ್ರಮ ಸಂಘಟಿಸುತ್ತಿದೆ ಎಂದು ಶ್ಲಾಘಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ| ರಾಮಕೃಷ್ಣ ಮರಾಠೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿಯಲ್ಲಿ ಕನ್ನಡ ಭಾಷೆ ಸಮೃದ್ಧವಾಗಲು ಸಾಹಿತಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳ ಕೊಡುಗೆ ಅಪಾರವಾಗಿದೆ. ಇಂಥ ಸಂಘಟನೆ ಚಟುವಟಿಕೆಯನ್ನು ಯುವಪೀಳಿಗೆ
ಪ್ರೇರಣೆಯಾಗಿಸಿಕೊಂಡು ಮುನ್ನಡೆಯಬೇಕು ಎಂದರು. ಪ್ರೊ| ಪಿ.ಜಿ. ಕೆಂಪಣ್ಣವರ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಣ ತಜ್ಞ ಪ್ರೊ| ಶಿವಶಂಕರ ಹಿರೇಮಠ ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ಸಾಹಿತಿಗಳಾದ ಬಿ.ಎಸ್‌. ಗವಿಮಠ, ಡಾ| ಎಚ್‌.ಬಿ. ರಾಜಶೇಖರ, ಆರ್‌.ಬಿ. ಕಟ್ಟಿ, ಪ್ರೊ| ಎಂ.ಎಸ್‌. ಇಂಚಲ, ಪ್ರೇಮಾ ತಹಶೀಲ್ದಾರ್‌, ಸುನಂದಾ ಎಮ್ಮಿ, ಶಂಕರ ಬಾಗೇವಾಡಿ ಸೇರಿದಂತೆ ಇತರರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಎ.ಎ. ಸನದಿ ಸ್ವಾಗತಿಸಿದರು. ಸಿ.ಎಂ. ಬೂದಿಹಾಳ ನಿರೂಪಿಸಿದರು. ಅಕºರ್‌ ಸನದಿ ವಂದಿಸಿದರು.

ನಾಡು-ನುಡಿ ರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೆ. ಇದರಿಂದ
ಗಡಿ ಮತ್ತು ಭಾಷಾ ವಿವಾದ ಗಂಭೀರ ಸ್ವರೂಪ ತಾಳುತ್ತಿವೆ.
*ಡಾ| ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ

Advertisement

Udayavani is now on Telegram. Click here to join our channel and stay updated with the latest news.

Next