ಬೆಳಗಾವಿ: ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಡಿಸೆಂಬರ್ 9 ರಿಂದ ಡಿಸೆಂಬರ್ 20ರ ವರೆಗೆ ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನವು ಈ ಬಾರಿಯೂ ಮಾದರಿಯಾಗುವ ರೀತಿಯಲ್ಲಿ ನಡೆಯಲು ಎಲ್ಲರ ಸಹಕಾರ ಕೋರುವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಮನವಿ ಮಾಡಿದರು.
ಸುವರ್ಣಸೌಧದಲ್ಲಿ ರವಿವಾರ (ಡಿ.08) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ. 9ರಂದು ಮೊದಲ ದಿನ ಬೆಳಗ್ಗೆ 11ರಿಂದ ಅಧಿವೇಶನವು ವಿದ್ಯುಕ್ತವಾಗಿ ಆರಂಭವಾಗಲಿದೆ. ಇದಕ್ಕೂ ಮೊದಲು 10:30ಕ್ಕೆ ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್ ತೈಲ ವರ್ಣದ ಚಿತ್ರದ ಅನಾವರಣವನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡುವರು. ವಿಧಾನಸಭೆಯ ಸಭಾಧ್ಯಕ್ಷರು, ವಿಧಾನ ಪರಿಷತನ ಸಭಾಪತಿಗಳು, ಉಪ ಸಭಾಪತಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನಸಭೆ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ನಡೆಯಲಿದೆ. ಮಧ್ಯಾಹ್ನ ಬಿಎಸ್ ಸಿ (ಕಲಾಪ ಸಲಹಾ ಸಮಿತಿ) ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮುಂದಿನ ಅಧಿವೇಶನದ ರೂಪುರೇಷಗಳ ಬಗ್ಗೆ ಸಮಗ್ರ ಚರ್ಚಿಸಿ ಅಂತಿಮಗೊಳಿಸಲಾಗುವುದು. ಈ ಬಾರಿ ಅಧಿವೇಶನದಲ್ಲಿ 5 ವಿಧೇಯಕಗಳ ಮೇಲೆ ಸುದೀರ್ಘ ಚರ್ಚೆ ನಡೆಯಲಿದೆ. ಎರಡು ಆದ್ಯಾಧೇಶದ ಬದಲಿ ವಿಧೇಯಕಗಳನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳಲಾಗುವುದು ಎಂದರು.
ಅಧಿವೇಶನದಲ್ಲಿ 10 ದಿನಗಳ ಕಾಲ ಪ್ರಶ್ನೋತ್ತರ ಅವಧಿ ನಿಗದಿಪಡಿಸಲಾಗಿದೆ. ಗಮನ ಸೆಳೆಯುವ ಸೂಚನೆಗಳು, ಶೂನ್ಯ ವೇಳೆ, ನಿಲುವಳಿ ಸೂಚನೆ ನಡೆಸಲಾಗುವುದು. ಈವರೆಗೆ 3004 ಪ್ರಶ್ನೆಗಳು, 205 ಗಮನ ಸೆಳೆಯುವ ಸೂಚನೆಗಳು, 96 ನಿಯಮ 351ರ ಸೂಚನೆಗಳನ್ನು ಸ್ವೀಕರಿಸಲಾಗಿದೆ. ಜತೆಗೆ 3 ಖಾಸಗಿ ವಿಧೇಯಕಗಳನ್ನು ಸಹ ಸ್ವೀಕರಿಸಲಾಗಿದೆ. ಕಲಾಪದಲ್ಲಿ ಲಿಖಿತ ಪ್ರಶ್ನೆಗಳಿಗೆ ಉತ್ತರ ಪಡೆಯುವ ಪ್ರಕ್ರಿಯೆ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದರು.
ಹೊಸ ಸಭಾಧ್ಯಕ್ಷರ ಪೀಠ
ಬೆಂಗಳೂರಿನ ವಿಧಾನಸೌಧದ ವಿಧಾನಸಭೆಯ ಮೊಗಸಾಲೆಯಲ್ಲಿ ಇರುವ ಮಾದರಿಯಲ್ಲಿಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಹೊಸದಾಗಿ ಸಭಾಧ್ಯಕ್ಷರ ಪೀಠವನ್ನು ಸಿದ್ದಪಡಿಸಲಾಗಿದೆ. ಅಧಿವೇಶನದ ಕಾರ್ಯವ್ಯವಸ್ಥೆಗಾಗಿ 2500 ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತಗಾಗಿ ಅಂದಾಜು 6000 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 8500 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಖಾದರ್ ಹೇಳಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 10 ಸಮಿತಿಗಳನ್ನು ರಚಿಸಿ ವಸತಿ, ಸಾರಿಗೆ ಸೇರಿದಂತೆ ನಾನಾ ವ್ಯವಸ್ಥೆ ಮಾಡಲಾಗಿದೆ. ಸುವರ್ಣಸೌಧಕ್ಕೆ ಬರುವವರಿಗೆ ಅನುಕೂಲವಾಗಲು ಮುಖ್ಯದ್ವಾರದಿಂದ ಸೌಧದ ಕಟ್ಟಡದವರೆಗೆ ಕೆಲ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಕಲಾಪ ವೀಕ್ಷಣೆಗೆ ಆಗಮಿಸುವ ವಿದ್ಯಾರ್ಥಿ, ಶಿಕ್ಷಕರಿಗೆ ಮಾಹಿತಿಗಾಗಿ ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ದಶಮಾನೋತ್ಸವ ನೆನಪಿನ ಛಾಯಾಚಿತ್ರಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ ಇದಕ್ಕಾಗಿ ಮಹಾತ್ಮ ಗಾಂಧೀಜಿಯವರ ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಸುವರ್ಣಸೌಧದ ಆಯಾ ಕಡೆಗಳಲ್ಲಿ ಹಾಕಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.