ಬೆಳಗಾವಿ: ತಮ್ಮ ಕುರಿತು ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರವನ್ನು ಜಾತಿ ಅಸ್ತ್ರವಾಗಿ ತಿರುಗಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾರ್ಯಾದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತೇನೆ. ನಾಲಿಗೆ ಮೇಲೆ ಹಿಡಿತ ಇರಬೇಕು, ವೇದಿಕೆ ಮೇಲೆ ಇದ್ದವರು ಯಾಕೆ ತಡೆಯಲ್ಲ. ಸಂಜಯ್ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ? ಇದು ನನಗೆ ಅಲ್ಲ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ. ನಾನು ಲಿಂಗಾಯತ ಸಮಾಜದ ಹೆಣ್ಣು ಮಗಳು. ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾರ್ಯಾದೆ ಎಂದಿದ್ದಾರೆ.
ಇದನ್ನು ಧಿಕ್ಕರಿಸಲು ಇಡೀ ರಾಜ್ಯದ ಮಹಿಳೆಯರಿಗೆ ಕರೆ ಕೊಡುತ್ತೇನೆ. ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಮಹಿಳೆಯರ ಸಬಲೀಕರಣ ವಿರೋಧಿಗಳು ಬಿಜೆಪಿಯವರು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡುತ್ತಾರೆ ಎಂದರು.
ಮಕ್ಕಳು ಹುಟ್ಟಿದರೂ ಅದಕ್ಕೆ ಎರಡು ಸಾವಿರ ಕಾರಣ ಎನ್ನುತ್ತಾರೆಂಬ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಿರಿಯರು. ನಿಮ್ಮ ತರ ಟಾಂಟ್ ಹೊಡೆಯಲ್ಲ. ಎಸಿ ರೂಂ ನಲ್ಲಿ ಕುಳಿತಿರೋ ನಿಮಗೆ ಅದರ ಅರಿವಿಲ್ಲ ಎಂದರು.
ಎರಡು ಸಾವಿರ ಹಣ ಪಡೆದು ಗ್ರಾಮೀಣ ಹೆಣ್ಣು ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಹಿರಿಯರು ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಹೇಳ್ತೀನಿ. ಹಳ್ಳಿಯ ಹೆಣ್ಣು ಮಗಳ ಬಗ್ಗೆ ಯಾಕೆ ಇಷ್ಟು ಹಗರುವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ. ಬರೀ ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾವಾಗಿದೆ ಎಂದರು.