ಬೆಳಗಾವಿ: ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದಾಗಿ ರಾಜ್ಯದಲ್ಲಿ ಮೇಲಿನಿಂದ ಮೇಲೆ ಗಲಭೆಗಳು ಉಂಟಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ (Jagadish Shettar) ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಲೊಮ್ಮೆ ಕೋಮು ಗಲಭೆಗಳು ಸಂಭವಿಸುತ್ತಿವೆ. ಈ ಸರಕಾರದಲ್ಲಿ ತಪ್ಪು ಮಾಡಿದವರಿಗೆ ರಕ್ಷಣೆ ಮತ್ತು ನಿರಪರಾಧಿಗಳಿಗೆ ಶಿಕ್ಷೆ ಸಿಗುತ್ತಿದೆ ಎಂದು ಟೀಕೆ ಮಾಡಿದರು.
ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ರಾಜೀನಾಮೆ ಕೊಡುತ್ತೇನೆ ಎಂದು ಯಾರೂ ಹೇಳುವದಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ನಿಶ್ಚಿತ ಎಂದರು.
ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡುವ ಎಲ್ಲಾ ಪ್ರಯತ್ನ ನಡೆದಿದೆ. ಈ ಸಂಬಂಧ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದರು.
ಬೆಂಗಳೂರಿನಿಂದ ಬೆಳಗಾವಿಯವರೆಗೆ ವಂದೇಭಾರತ್ ರೈಲು ಸಂಚಾರ ಆರಂಭಕ್ಕೆ ನಾನು ಬದ್ಧನಾಗಿದ್ದೇನೆ. ಧಾರವಾಡದಿಂದ ಬೆಳಗಾವಿಯವರೆಗೆ ಇದ್ದ ತಾಂತ್ರಿಕ ತೊಡಕುಗಳು ನಿವಾರಣೆಯಾಗಿವೆ. ಆದಷ್ಟು ಬೇಗ ಬೆಂಗಳೂರು-ಬೆಳಗಾವಿ ವಂದೇಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.