ಬೆಳಗಾವಿ: ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಕೀಲರು ಹಾಗೂ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಆಟೋ ರಿಕ್ಷಾಗಳಿಲ್ಲದೇ ವಿದ್ಯಾರ್ಥಿಗಳು ನಿತ್ಯವೂ ಖಾಸಗಿ ವಾಹನ ಹಾಗೂ ಬಸ್‌ಗಳನ್ನು ಅವಲಂಬಿಸುವಂತಾಗಿದೆ. ಮಕ್ಕಳನ್ನು ಬಿಡಲು ಪಾಲಕರು ನಿತ್ಯವೂ ಶಾಲೆಗಳಿಗೆ ಮಕ್ಕಳನ್ನು ಬಿಟ್ಟು, ಕರೆದುಕೊಂಡು ಬರುವುದು ಸಾಹಸದ ಕೆಲಸವಾಗಿದೆ. ಶಾಲೆಗಳ ಸುತ್ತಲೂ ಹೆಚ್ಚಿನ ಸಂಚಾರ ದಟ್ಟಣೆ ಆಗುತ್ತಿರುವುದರಿಂದ ಮಕ್ಕಳು ಮನೆಗೆ ಬರುವುದು ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಎದುರು ಅಳಲು ತೋಡಿಕೊಂಡರು.
6ಕ್ಕಿಂತ ಹೆಚ್ಚು ಮಕ್ಕಳನ್ನು ಆಟೋಗಳಲ್ಲಿ ಹಾಕಬಾರದು ಎಂಬ ಕೋರ್ಟ್ ನಿಯಮವನ್ನು ಪೊಲೀಸ್ ಆಯುಕ್ತರು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದಾರೆ. ನಿಯಮ ಮೀರಿದವರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರಿಂದ ಆಟೋ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ 6 ಮಕ್ಕಳನ್ನು ಆಟೋಗಳಿಗೆ ಹಾಕಿ ಬಾಡಿಗೆ ನಡೆಸುವುದು ಕಷ್ಟಕರವಾಗಿದೆ. ಇದರಿಂದ ಉಪಜೀವನ ನಡೆಸುವುದು ಕಷ್ಟಕರವಾಗಿದೆ ಎಂಬುದು ಚಾಲಕರ ವಾದವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಆಟೋಗಳು ಇಲ್ಲವಾಗಿವೆ. ಪೊಲೀಸ್ ಕಮೀಷನರ್ ಹಾಗೂ ಆಟೋ ಚಾಲಕರ ನಡುವಿನ ಕಿತ್ತಾಟದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಪೊಲೀಸ್ ಆಯುಕ್ತರು ಹಾಗೂ ಆಟೋ ಚಾಲಕರ ನಡುವಿನ ಗೊಂದಲವನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕು. ಪೊಲೀಸರು ಹಾಗೂ ಆಟೋ ಚಾಲಕರ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ವಿದ್ಯಾರ್ಥಿಗಳಿಗೆ ಆಟೋ ಸೌಲಭ್ಯ ಒದಗಿಸಿ ಕೊಡಬೇಕು. ಪಾಲಕರು ನಿತ್ಯವೂ ಅನುಭವಿಸುತ್ತಿರುವ ತೊಂದರೆಗೆ ಇತಿಶ್ರೀ ಹೇಳಬೇಕು. ನಗರದಲ್ಲಿ ನಿತ್ಯ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪಿ.ಎಸ್. ರಂಗೋಯ, ಬಿ.ಪಿ. ಜೇವಣಿ, ಬಿ.ಬಿ. ತಳವಾರ, ಯು.ಜೆ. ತಳವಾರ, ಎಂ.ಎನ್. ಕುಲಕರ್ಣಿ, ಎಸ್.ಎಂ. ಕಾಮತ ಸೇರಿದಂತೆ ಇತರರು ಇದ್ದರು.