ಬೆಳಗಾವಿ: ಕೆಲವು ಜಗದ್ಗುರುಗಳು ಲಿಂಗಾಯತರು ಬೇರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯತ ಮಹಾಸಭಾ ಯಾವುದೇ ಪಕ್ಷಕ್ಕೆ ಸೇರಿಲ್ಲ. ಇಲ್ಲಿ ಎಲ್ಲ ಪಕ್ಷದ ಮುಖಂಡರೂ ಇದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದ ಜೆಎನ್‌ಎಂಸಿ ಕೆಎಲ್‌ಇ ಕನ್ವೇನ್ಶನ್ ಸೆಂಟರ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ರವಿವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಒಡೆಯುವ ಕೆಲಸ ಆಗಬಾರದು. ಮಹಾಸಭಾ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ 110 ವರ್ಷಗಳ ಕಾಲ ಇಲ್ಲದಿರುವುದು ಈಗ ಕಳೆದ ವರ್ಷ ಆರಂಭವಾಯಿತು. ಅದು ಎಷ್ಟು ಜೋರಾಗಿ ಬಂತೋ ಅಷ್ಟೇ ವೇಗದಲ್ಲಿಯೇ ಹೋಗಿ ಬಿಟ್ಟಿತು. ವೀರಶೈವ ಲಿಂಗಾಯತ ಎರಡೂ ಒಂದೇ ಆಗಿವೆ. ಇಲ್ಲಿ ಒಳ ಪಂಗಡಗಳು ಕಡಿಮೆ ಆಗಲು ಹೆಣ್ಣು ಕೊಡುವುದು, ತೆಗೆದುಕೊಳ್ಳುವ ಪ್ರಕ್ರಿಯೆ ನಡೆದರೆ ಸಾಧ್ಯವಿದೆ ಎಂದರು. ಮಹಾಸಭೆ ಹಿರಿಯ ಉಪಾಧ್ಯಕ್ಷ ಎನ್. ತಿಪ್ಪಣ್ಣ ಮಾತನಾಡಿ, ವೀರಶೈವ ಲಿಂಗಾಯತ ಒಂದು ಜಾತಿಯಲ್ಲ, ಅದೊಂದು ಧರ್ಮ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡುವ ಹೋಗುವ ಧರ್ಮವಾಗಿದೆ. ವೀರಶೈವ, ಲಿಂಗಾಯತ ಬೇರೆ ಬೇರೆ ಎನ್ನುವ ಕಥೆ ಈಗ ಮುಗಿದ ಅಧ್ಯಾಯ. ಧರ್ಮದ ಉದ್ಧಾರಕ್ಕೆ ಎಲ್ಲರೂ ಸಹಕರಿಸಬೇಕು. ಇದನ್ನು ಅನುಸರಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಸಮಾಜದ ಋಣ ಪ್ರತಿಯೊಬ್ಬರ ಮೇಲೂ ಇದೆ. ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಾಗ ಸಮಾಜವನ್ನು ಎಂದಿಗೂ ಮರೆಯಬಾರದು. ಅಹಂಕಾರ ಬರಬಾರದು. ಹಳ್ಳಿ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಜೀವನದಲ್ಲಿ ಸಾಧನೆ ಮಾಡಬೇಕು. ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಟೆಲ್ ನಿರ್ಮಾಣಕ್ಕೆ ಸಮಾಜ ಬಾಂಧವರು ಆರ್ಥಿಕವಾಗಿ ನೆರವಾಗಬೇಕು ಎಂದರು.
ರಾಜ್ಯಭಾ ಸದಸ್ಯ, ಮಹಾಸಭಾ ಉಪಾಧ್ಯಕ್ಷ ಡಾ| ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಶೇ.51ರಷ್ಟು ಜನ ಶಿಕ್ಷಣದಿಂದ ದೂರ ಉಳಿದಿರುವ ಬಗ್ಗೆ ಇತ್ತೀಚೆಗೆ ನಡೆದ ಸಮೀಕ್ಷೆಯಿಂದ ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಹೈ.ಕ ಭಾಗದಲ್ಲಿ ಶಿಕ್ಷಣದಿಂದ ವಂಚಿತರಾದವರ ಸಂಖ್ಯೆಯೂ ಜಾಸ್ತಿ ಇದೆ. ಈ ನಿಟ್ಟಿನಲ್ಲಿ ನಾವು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಮಹಾಸಭಾ ಕೂಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ವೈ.ಎಸ್. ಪಾಟೀಲ ಮಾತನಾಡಿ, ಮಹಾಸಭಾ 60ರಿಂದ 70 ಲಕ್ಷ ರೂ. ಪ್ರತಿಭಾ ಪುರಸ್ಕಾರಕ್ಕಾಗಿಯೇ ಖರ್ಚು ಮಾಡುತ್ತಿದೆ. ಈ ಬಾರಿ 270 ಮಂದಿಗೆ ಪುರಸ್ಕಾರ ನೀಡಲಾಗಿದೆ. ಜಾಧವ ನಗರದಲ್ಲಿ ಒಂದು ಎಕರೆ ಜಮೀನಿದ್ದು, ಅಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಭೂಮಿಪೂಜೆ ಮಾಡಲಾಗಿದೆ ಎಂದರು. ಮೀಸಲಾತಿ ಬಗ್ಗೆ ಯುವಕರು ಹತಾಶೆ ಭಾವನೆ ಹೊಂದಿದ್ದಾರೆ. ಹಿರಿಯರು ಹೆಚ್ಚಿನ ಮುತುವರ್ಜಿ ವಹಿಸಿ ಹೋರಾಟ ಮಾಡಬೇಕಾಗಿದೆ. ಸಮಾಜದ ಸಂಸದರು ಕನಿಷ್ಠ 3ಬಿಗೆಯಾದರೂ ಸೇರಿಸಬೇಕು. ಸಮಾಜ ಹಾಗೂ ಧರ್ಮ ಉಳಿಯಲು ರಾಜಾಶ್ರಯ ಬೇಕಾಗುತ್ತದೆ. ವೀರಶೈವ ಬೇರೆ, ಲಿಂಗಾಯತ ಬೇರೆ ಇಲ್ಲ, ಎಲ್ಲವೂ ಒಂದೇ ಎಂದೂ ಒಗ್ಗಟ್ಟಿನಿಂದ ಇರಬೇಕು ಎಂದರು.
ಸಂಸದ ಸುರೇಶ ಅಂಗಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮುಖಂಡರಾದ ಅಣಬೇರು ರಾಜಣ್ಣ, ರೇಣುಕ ಪ್ರಸನ್ನ, ಕಲ್ಯಾಣರಾವ್ ಮುಚಳಂಬಿ, ಎಫ್.ಬಿ. ಮಾಮನಿ, ರತ್ನಪ್ರಭಾ ಬೆಲ್ಲದ, ಸೋಮನಿಂಗ ಮಾವಿನಕಟ್ಟಿ, ಚನ್ನಬಸಪ್ಪ ವಾಲಿ, ರಮೇಶ ಕಳಸಣ್ಣವರ, ಶಿವಕುಮಾರ ಸಂಬರಗಿಮಠ ಇತರರು ಇದ್ದರು. ಗುರುದೇವಿ ಹುಲೆಪ್ಪನವರಮಠ ಹಾಗೂ ಮಹೇಶ ಗುರನಗೌಡರ ನಿರೂಪಿಸಿದರು.
ಯಾರೋ ಕೆಲವರು ಸಮಾಜ ಒಡೆಯಲು ಚಿಂತನೆ ನಡೆಸಿದಾಗ ಅದನ್ನು ವಿರೋಧಿಸಿದವರು ಶಾಮನೂರು ಶಿವಶಂಕರಪ್ಪ ಹಾಗೂ ತಿಪ್ಪಣ್ಣ. ಸಮಾಜದ ಒಗ್ಗಟ್ಟಿಗಾಗಿ ಇವರ ಹೋರಾಟದ ಪ್ರತಿಫಲವೇ ಅದಕ್ಕೆ ಕಡಿವಾಣ ಬಿತ್ತು. ಚುನಾವಣೆ ಮುಂದಿಟ್ಟುಕೊಂಡು ಸಮಾಜ ಒಡೆಯಲು ಯತ್ನಿಸಿದೇವಿ ಎಂದು ಈಗಲೇ ಕೆಲವು ಪ್ರಮುಖ ನಾಯಕರು ತಪ್ಪು ಒಪ್ಪಿಕೊಂಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ.
. ಡಾ| ಪ್ರಭಾಕರ ಕೋರೆ,
ವೀರಶೈವ ಮಹಾಸಭಾ ಉಪಾಧ್ಯಕ್ಷ