Advertisement
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ ತಂಡ ಬೆಳಗಾವಿ ಪ್ಯಾಂಥರ್ ಬಿಗಿ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 8 ವಿಕೆಟಿಗೆ 136 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ ಆರ್. ಸಮರ್ಥ್ (ಅಜೇಯ 50) ಹಾಗೂ ಮನೋಹರ್ (ಅಜೇಯ 42) ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ 17.4 ಓವರ್‌ಗಳಲ್ಲಿ 3 ವಿಕೆಟಿಗೆ 137 ರನ್ ಗಳಿಸಿ 7 ವಿಕೆಟ್ ಸುಲಭ ಜಯ ಸಾಧಿಸಿತು.
137 ರನ್ ಗೆಲುವಿನ ಗುರಿ ಬೆನ್ನಟ್ಟಿದ ಬೆಳಗಾವಿ 15 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆರ್. ಸಮರ್ಥ್ ಹಾಗೂ ದೀಕ್ಷಾಂಶು ನೇಗಿ (32 ರನ್) ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಮೊತ್ತವನ್ನು 65ರ ತನಕ ವಿಸ್ತರಿಸಿದರು. ಈ ಹಂತದಲ್ಲಿ ನೇಗಿ ಇಲ್ಲದ ರನ್ ಕದಿಯಲು ಹೋಗಿ ರನೌಟಾದರು. ಬಳಿಕ ಅಭಿನವ್ ಮನೋಹರ್ ಜತೆಗೂಡಿದ ಸಮರ್ಥ್ ಬುಲ್ಸ್ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. ಅಜೇಯರಾಗಿ ತಂಡವನ್ನು ದಡ ಸೇರಿಸಿದರು. ಸಮರ್ಥ್ 45 ಎಸೆತದಿಂದ 4 ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ಅಭಿನವ್ ಮನೋಹರ್ 30 ಎಸೆತ ಎದುರಿಸಿ 5 ಬೌಂಡರಿ, ಒಂದು ಸಿಕ್ಸರ್ ಹೊಡೆದರು. ಬಿಜಾಪುರ ಬುಲ್ಸ್ ಪರ ಎಂ.ಜಿ. ನವೀನ್ (28ಕ್ಕೆ 2) ಬಿಟ್ಟರೆ ಉಳಿದವರೆಲ್ಲರೂ ಬೆಳಗಾವಿ ಬ್ಯಾಟ್ಸ್ ಮನ್‌ಗಳನ್ನು ನಿಯಂತ್ರಿಸಲು ವಿಫಲರಾದರು. ಮೊದಲು ಬ್ಯಾಟಿಂಗ್ ಮಾಡಿದ್ದ ಬಿಜಾಪುರ ಬುಲ್ಸ್ ಪರ ಭರತ್ ಚಿಪ್ಲಿ 33 ರನ್ ಹಾಗೂ ಎನ್.ಪಿ. ಭರತ್ ಅಜೇಯ 35 ರನ್ ಹೊಡೆದರು.