Advertisement

Belagavi: ಬಿಮ್ಸ್‌ನಲ್ಲಿ ಅಮ್ಮನ ಎದೆ ಹಾಲುಣಿಸುವ ಬ್ಯಾಂಕ್‌

05:42 PM Dec 18, 2023 | Team Udayavani |

ಬೆಳಗಾವಿ: ತಾಯಿ ಎದೆಹಾಲಿನ ಕೊರತೆಯಿಂದ ಬಳಲುತ್ತಿರುವ ನವಜಾತ ಶಿಶುಗಳ ರಕ್ಷಣೆಗೆ ಬೆಳಗಾವಿಯಲ್ಲಿ “ಅಮೃತಧಾರೆ ಅಮ್ಮನ ಎದೆ ಹಾಲು ಬ್ಯಾಂಕ್‌’ ಆರಂಭಗೊಂಡಿದ್ದು, ಶೀಘ್ರದಲ್ಲಿಯೇ ಈ ವಿನೂತನ ಬ್ಯಾಂಕ್‌ ಕಾರ್ಯಾಚರಿಸಲಿದೆ.

Advertisement

ಅವಧಿ ಪೂರ್ವ ಜನಿಸಿದ ಮಕ್ಕಳು, ಎದೆ ಹಾಲು ಉತ್ಪಾದಿಸದ ತಾಯಂದಿರು, ಅನಾಥ ಮಕ್ಕಳು, ಕಾರಣಾಂತರದಿಂದ ತಾಯಿಯಿಂದ ದೂರ ಉಳಿದ ಮಕ್ಕಳ ರಕ್ಷಣೆಗೆ ತಾಯಿ ಹಾಲು ಅಗತ್ಯ ಇರುತ್ತದೆ. ಇಂಥ ಸಂದರ್ಭದಲ್ಲಿ ಶುದ್ಧ ಹಾಗೂ ಗುಣಮಟ್ಟದ ತಾಯಿ ಎದೆ ಹಾಲನ್ನೇ ಮಕ್ಕಳಿಗೆ ನೀಡುವ ಮೂಲಕ ರಕ್ಷಿಸುವ ಬ್ಯಾಂಕ್‌ ಇದಾಗಿದ್ದು, ಅಮೃತಧಾರೆ ಹೆಸರಿನಲ್ಲಿ
ಬೆಳಗಾವಿ ವಿಭಾಗದಲ್ಲಿಯೇ ಮೊದಲ ಸರ್ಕಾರಿ ಬ್ಯಾಂಕ್‌ ಕಾರ್ಯಾಚರಿಸಲಿದೆ.

ಮೈಸೂರು, ಬೆಳಗಾವಿ, ಕಲ್ಬುರ್ಗಿ ಹಾಗೂ ಬೆಂಗಳೂರು ವಿಭಾಗದಲ್ಲಿ ತಲಾ ಒಂದು ಎದೆ ಹಾಲು ಬ್ಯಾಂಕ್‌ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು,ಬೆಳಗಾವಿಯ ಬಿಮ್ಸ್‌ನ ಚಿಕ್ಕ ಮಕ್ಕಳ ವಿಭಾಗದಲ್ಲಿರುವ ಈ ಬ್ಯಾಂಕ್‌ ಅನ್ನು ಕೆಲ ದಿನಗಳ ಹಿಂದೆಯಷ್ಟೇ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಉದ್ಘಾಟಿಸಿದ್ದಾರೆ. 25 ಲಕ್ಷ ರೂ. ಅನುದಾನದಲ್ಲಿ ಈ ಬ್ಯಾಂಕ್‌ಗೆ ಅಗತ್ಯ ಇರುವ ಸಲಕರಣೆಗಳನ್ನು ತರಲಾಗಿದೆ. ಮುಂದಿನ ತಿಂಗಳಲ್ಲಿ ಈ ಬ್ಯಾಂಕ್‌ ಕಾರ್ಯಾರಂಭಗೊಳ್ಳಲಿದೆ.

ಉಚಿತ ತಾಯಿ ಹಾಲು ಸಿಗುತ್ತೆ: ಖಾಸಗಿ ಬ್ಯಾಂಕ್‌ ನಲ್ಲಿ ತಾಯಿ ಎದೆಹಾಲಿಗಾಗಿ ಹೆಚ್ಚಿನ ಮೊತ್ತ ನೀಡಬೇಕಾಗಿರುತ್ತದೆ. ಆದರೆ ಸರ್ಕಾರದ ಈ ಅಮೃತಧಾರೆ ಬ್ಯಾಂಕಿನಲ್ಲಿ ಮಕ್ಕಳಿಗೆ ಉಚಿತ ಹಾಲು ಸಿಗಲಿದೆ. ಉಚಿತವಾಗಿ ಹಾಲು ದಾನ ಮಾಡಿ ಮಕ್ಕಳಿಗೆ ಉಚಿತವಾಗಿಯೇ ಹಾಲು ಉಣಿಸಬಹುದಾಗಿದೆ.

ಈ ಬ್ಯಾಂಕ್‌ ಖಾತೆಗೆ ಬೇಕಾಗಿರುವುದೇ ತಾಯಿ ಎದೆಹಾಲು. ಇದನ್ನು ಸಂಗ್ರಹಿಸುವುದೇ ವೈದ್ಯರಿಗೆ ಕಠಿಣವಾದ ಕೆಲಸವಾಗಿದೆ. ಒಬ್ಬ ಮನುಷ್ಯ ರಕ್ತದಾನ ಹೇಗೆ ಮಾಡುತ್ತಾನೋ ಅದೇ ರೀತಿಯಾಗಿ ತಾಯಿ ತನ್ನ ಎದೆ ಹಾಲನ್ನು ದಾನ ಮಾಡಬಹುದಾಗಿದೆ. ಸ್ವಇಚ್ಛೆಯಿಂದ ಬಂದು ಹಾಲು ನೀಡಬಹುದಾಗಿದೆ. ಸುಮಾರು 300ರಿಂದ 400 ಎಂ.ಎಲ್‌.ವರೆಗೆ ಹಾಲನ್ನು ತೆಗೆದು
ಕೊಳ್ಳಲಾಗುತ್ತದೆ. ಹಾಲು ನೀಡುವುದರಿಂದ ಯಾವುದೇ ದುಷ್ಪರಿಣಾಮ ಇಲ್ಲ. ಹಾಲು ದಾನ ಮಾಡಿದ ತಾಯಿ ಹಾಗೂ ಹಾಲು ಕುಡಿಯುವ ಮಗುವಿನ ತಾಯಿಯಿಂದ ಅನುಮತಿ ಪತ್ರ ಪಡೆಯಲಾಗುತ್ತದೆ.

Advertisement

ಸ್ವಇಚ್ಛೆಯಿಂದ ತಾಯಿ ಹಾಲು ದಾನ ಮಾಡಲಿ: 
ಆಕಳು ತನ್ನ ಕರುವಿಗೆ ಹೇಗೆ ಹಾಲು ಕುಡಿಸಿ ನಮಗೆ ನೀಡುತ್ತದೆಯೋ ಅದೇ ರೀತಿ ತಾಯಿ ತನ್ನ ಮಗುವಿಗೆ ಹಾಲು ಕುಡಿಸಿ ಇನ್ನುಳಿದಿದ್ದನ್ನು ಇಲ್ಲಿ ದಾನ ಮಾಡಬಹುದಾಗಿದೆ. ಮಗುವಿಗೆ ಜನ್ಮ ನೀಡಿದ ಮೂರನೇ ದಿನದಿಂದ 2 ವರ್ಷದವರೆಗೂ ತಾಯಿ ತನ್ನ ಹಾಲನ್ನು ದಾನ ಮಾಡಬಹುದಾಗಿದೆ. ಹಾಲು ಪಡೆಯುವಾಗ ಎಲ್ಲ ತಪಾಸಣೆ ನಡೆಸಿ ನಂಜು, ಕ್ರಿಮಿ ಇಲ್ಲದ ಹಾಲನ್ನು ಶೇಖರಣೆ ಮಾಡಲಾಗುತ್ತದೆ. ಪಾಶ್ಚರೈಸೇಶನ್‌ ಮಾಡಿ ಡೀಪ್‌ಫ್ರೀಜರ್‌ನಲ್ಲಿ ಮೈನಸ್‌ 18ರಿಂದ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಸುಮಾರು 4ರಿಂದ 6 ತಿಂಗಳವರೆಗೂ ಇದನ್ನು ಶೇಖರಣೆ ಮಾಡಿ ಇಡಬಹುದಾಗಿದೆ.

ಆರೋಗ್ಯ ಇಲಾಖೆಯಿಂದ ಜಾಗೃತಿ: ಮಕ್ಕಳಿಗೆ ಅವಶ್ಯಕತೆ ಇರುವ ತಾಯಿ ಹಾಲು ನೀಡಲು ದಾನಿಗಳು ಮುಂದೆ ಬರಬೇಕಿದೆ. ಸ್ವಇಚ್ಛೆಯಿಂದಲೇ ತಾಯಿ ಹಾಲು ದಾನ ಮಾಡಿದರೆ ಇನ್ನೊಂದು ಮಗುವಿನ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ತಾಯಂದಿರಲ್ಲಿ ಈ ಬಗ್ಗೆ ಅರಿವು ಮೂಡಬೇಕಿದೆ. ರಕ್ತದಾನ ನೀಡಲು ಹೇಗೆ ಜನರು ಆಸಕ್ತಿ ತೋರುತ್ತಾರೆಯೋ ಅದೇ ರೀತಿ ತಾಯಿ ತನ್ನ ಎದೆಹಾಲನ್ನು ದಾನ ಮಾಡಲು ಆಸಕ್ತಿ ತೋರಿಸಬೇಕಿದೆ.

ತಾಯಿ ಹಾಲು ಸಂಗ್ರಹಣೆ ಮಾಡುವುದು, ಮಕ್ಕಳಿಗೆ ನೀಡುವುದು, ಎಷ್ಟು ದಿನಗಳ ಕಾಲ ಶೇಖರಣೆ ಮಾಡಿ ಇಡುವುದು ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಬೆಂಗಳೂರಿನಲ್ಲಿ ವೈದ್ಯರು ತರಬೇತಿ ಪಡೆದಿದ್ದಾರೆ. 25 ಲಕ್ಷ ರೂ. ಅನುದಾನದಲ್ಲಿ ಹಾಲಿನ ಬ್ಯಾಂಕಿಗೆ ಬೇಕಿರುವ ಡೀಪ್‌ ಫ್ರೀಜ್‌, ಹಾಲು ಶೇಖರಣೆ ಪಂಪ್‌ ಸೇರಿದಂತೆ ಇತರೆ ಉಪಕರಣಗಳನ್ನು ಖರೀದಿಸಲಾಗಿದೆ. ಒಬ್ಬರು ವೈದ್ಯರು, ಇಬ್ಬರು ನರ್ಸ್‌, ಒಬ್ಬರು ಮೈಕ್ರೋಬಯಾಲಾಜಿಸ್ಟ್‌ ಇದ್ದಾರೆ.

ಯಾರು ಹಾಲು ದಾನ ಮಾಡಬೇಕು? 
ಮಗುವಿಗೆ ಜನ್ಮ ನೀಡಿದ 3 ದಿನಗಳ ಬಳಿಕ ತಾಯಿ ಎದೆ ಹಾಲನ್ನು ಎರಡು ವರ್ಷದವರೆಗೂ ದಾನ ಮಾಡಬಹುದಾಗಿದೆ. ಆರೋಗ್ಯ ತಪಾಸಣೆ ನಡೆಸಿ ಹಾಲಿನಲ್ಲಿ ಯಾವುದೇ ಕ್ರಿಮಿ ಹಾಗೂ ಜಂತು ಇಲ್ಲದ್ದನ್ನು ಶೇಖರಣೆ ಮಾಡಲಾಗುತ್ತದೆ. ಹಾಲು
ದಾನ ಮಾಡುವುದರಿಂದ ತಾಯಿ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ. ಶುದ್ಧ ಹಾಗೂ ಗುಣಮಟ್ಟದ ಹಾಲನ್ನು ಮಾತ್ರ ಪಡೆಯಲಾಗುತ್ತದೆ. ತನ್ನ ಮಗುವಿಗೆ ಹಾಲುಣಿಸಿ ನಿತ್ಯವೂ ದಾನ ಮಾಡಬಹುದಾಗಿದೆ

ಹಾಲು ಶೇಖರಣೆ ಪ್ರಕ್ರಿಯೆ ಹೇಗೆ?
ದಾನ ಮಾಡುವ ತಾಯಿಯ ಹಾಲನ್ನು ಎಲೆಕ್ಟ್ರಿಕ್‌ ಬ್ರಿಸ್ಟ್‌ ಪಂಪ್‌ ಮಷಿನ್‌ದಿಂದ ಹಾಲು ಪಡೆಯಲಾಗುತ್ತದೆ. ಆ ಹಾಲನ್ನು ಪಾಶ್ಚರೈಸೇಶನ್‌ ಮಾಡಿ ಅದನ್ನು ಲ್ಯಾಬ್‌ನಲ್ಲಿ ಮೈಕ್ರೋ ಬಯಾಲಾಜಿಕಲ್‌ ತಪಾಸಣೆ ಮಾಡಲಾಗುತ್ತದೆ. ಪ್ರತ್ಯೇಕ ತಾಯಿಯ ಹಾಲನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ಡೀಪ್‌ ಫ್ರೀ ಜ್‌ನಲ್ಲಿ ಇಡಲಾಗುತ್ತದೆ. ಸುಮಾರು 4ರಿಂದ 6 ತಿಂಗಳ ಕಾಲ ಈ ಹಾಲು ಸಂಗ್ರಹಿಸಿ ಇಡಲು ಸಾಧ್ಯವಿದೆ.

ಬೆಳಗಾವಿ ವಿಭಾಗದಲ್ಲಿಯ ಅಮೃತಧಾರೆ ತಾಯಿ ಎದೆ ಹಾಲು ಬ್ಯಾಂಕ್‌ ಉದ್ಘಾಟನೆ ಆಗಿದ್ದು, ಆಸಕ್ತ ತಾಯಂದಿರು ಮುಂದೆ ಬಂದು ಸ್ವಇಚ್ಛೆಯಿಂದ ಹಾಲು ದಾನ ಮಾಡಬಹುದಾಗಿದೆ. ಮುಂದಿನ ತಿಂಗಳಿಂದ ಈ ಬ್ಯಾಂಕ್‌ ಕಾರ್ಯಾಚರಿಸಲಿದೆ. ಅವಶ್ಯಕತೆ ಇರುವ ಮಕ್ಕಳಿಗೆ ತಾಯಿ ಹಾಲನ್ನು ಉಚಿತವಾಗಿ ನೀಡಲಾಗುವುದು.
ಡಾ| ವಿಠಲ ಶಿಂಧೆ, ಜಿಲ್ಲಾ ಸರ್ಜನ್‌, ಬಿಮ್ಸ್‌

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next