Advertisement

ಹಸೆಮಣೆ ಏರಿ ಚಕ್ಕಡಿಯಲ್ಲಿ ಸಾಗಿ ಗ್ರಾಮಸ್ಥರ ಆಶೀರ್ವಾದ ಪಡೆದ ನವಜೋಡಿ

07:35 PM May 24, 2020 | sudhir |

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ಅದ್ಧೂರಿ ಮದುವೆಗೆ ಬ್ರೇಕ್ ಬಿದ್ದಿದ್ದರಿಂದ ನಗರದಿಂದ 10ಕಿ.ಮೀ. ದೂರದಲ್ಲಿರುವ ಮಂಡೋಳಿ ಗ್ರಾಮದಲ್ಲಿ ಸರ್ಕಾರದ ನಿಯಮದಂತೆ ಕಡಿಮೆ ಜನರ ಸಮ್ಮುಖದಲ್ಲಿ ರೈತನ ಮಕ್ಕಳು ರವಿವಾರ ಹಸೆಮಣೆ ಏರಿದ್ದು, ಹಳೆಯ ಕಾಲದ ಪದ್ಧತಿಯಂತೆ ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಗ್ರಾಮಸ್ಥರ ಆಶೀರ್ವಾದ ಪಡೆದರು.

Advertisement

ಮಂಡೋಳಿ ಗ್ರಾಮದ ಮಂಗೇಶ ದಳವಿ ಹಾಗೂ ವಾಘವೋಡೆ ಗ್ರಾಮದ ವಿದ್ಯಾ ಪಾಟೀಲ ರವಿವಾರ ಮಾಸ್ಕ್ ಧರಿಸಿಕೊಂಡು ಪದ್ಧತಿಯಂತೆ ಸರಳವಾಗಿ ಅದ್ಧೂರಿ ಇಲ್ಲದೇ ಸಪ್ತಪದಿ ತುಳಿದರು. 50ಕ್ಕಿಂತ ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾದ ವಧು-ವರರು ಮಾಸ್ಕ್ ಧರಿಸಿಕೊಂಡಿದ್ದು ವಿಶೇಷವಾಗಿತ್ತು.

ಲಾಕ್‌ಡೌನ್ ಇದ್ದರೂ ನಿಗದಿಯಂತೆ ಮದುವೆ ಮುಹೂರ್ತ ಫಿಕ್ಸ್ ಆಗಿದ್ದು, ರವಿವಾರ ಸಂಪೂರ್ಣ ಲಾಕ್‌ಡೌನ್‌ದಿಂದಾಗಿ ಮದುವೆ ಸಮಾರಂಭಕ್ಕೆ ಅಡಚಣೆ ಉಂಟಾಯಿತು. ಮನೆಯಲ್ಲಿಯೇ ಸರಳ ವಿವಾಹವಾದ ವಧು-ವರರನ್ನು ಆಶೀರ್ವದಿಸಲು ಬಹಳಷ್ಟು ಜನ ಬರಲಿಲ್ಲ ಎಂಬ ಕಾರಣಕ್ಕೆ ಚಕ್ಕಡಿ ಏರಿ ಗ್ರಾಮಸ್ಥರ ಆಶೀರ್ವಾದ ಪಡೆದರು.

ಹಳೆಯ ಕಾಲದಲ್ಲಿ ಚಕ್ಕಡಿಯಲ್ಲಿ ಕುಳಿತು ಮೆರವಣಿಗೆ ಮಾಡುತ್ತಿದ್ದ ಪದ್ಧತಿ ಈಗ ಮತ್ತೆ ಮರುಕಳಿಸಿದ್ದು, ರೈತನ ಮಕ್ಕಳಾದ ಮಂಗೇಶ ಹಾಗೂ ವಾಘವೋಡೆಯ ವಿದ್ಯಾ ಚಕ್ಕಡಿಯಲ್ಲಿ ಕುಳಿತು ಗ್ರಾಮಸ್ಥರಿಗೆ ಕೈ ಮುಗಿದು ಆಶೀರ್ವಾದ ಪಡೆದುಕೊಂಡು ಧನ್ಯರಾದರು.

Advertisement

Udayavani is now on Telegram. Click here to join our channel and stay updated with the latest news.

Next