ಹುಬ್ಬಳ್ಳಿ: ಧರ್ಮ ಯುದ್ಧಕ್ಕಿಳಿದಿರುವುದಾಗಿ ಹೇಳಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಸಂಚಲನ ಮೂಡಿಸಿದ್ದ ಗದಗ ಜಿಲ್ಲೆ ಶಿರಹಟ್ಟಿಯ ಶ್ರೀಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ಯುದ್ಧದ ಮೊದಲೇ ಚುನಾವಣಾ ಶಸ್ತ್ರತ್ಯಾಗ ಮಾಡಿದ್ದು, ಹಲವು ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಡುವಂತಾಗಿದೆ.
Advertisement
ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠವೊಂದರ ಪೀಠಾಧಿಪತಿ ಸ್ಪರ್ಧೆ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಹಲವು ಮಠಾಧೀಶರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅನೇಕ ಅತೃಪ್ತ ಮುಖಂಡರುಆಂತರಿಕವಾಗಿ ಬೆಂಬಲ ನೀಡಿದ್ದರು. ದಿಂಗಾಲೇಶ್ವರರ ಸ್ಪರ್ಧೆಯಿಂದ ಯಾರಿಗೆ ಲಾಭ, ಯಾರಿಗೆ ಹಾನಿ ಎಂಬ ವಿಶ್ಲೇಷಣೆ ತನ್ನದೇ ನೆಲೆಗಟ್ಟಿನಲ್ಲಿ ಸುಳಿದಾಡತೊಡಗಿತ್ತು.
Related Articles
Advertisement
ಶಿರಹಟ್ಟಿಯ ಫಕ್ಕೀರೇಶ್ವರ ಮಠ ಜಾತ್ಯಾತೀತ ಮಠವಾಗಿದ್ದು, ವಿವಿಧ ಧರ್ಮಗಳ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಶ್ರೀಮಠದ ಹಿರಿಯ ಗುರುಗಳಾದ ಶ್ರೀ ಫಕ್ಕೀರ ಸಿದ್ಧರಾಮ ಸ್ವಾಮೀಜಿಯವರು ಎರಡು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರರಿಗೆ ನಾಮಪತ್ರ ಹಿಂಪಡೆಯಬೇಕು ಎಂದು ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಗುರುಗಳ ಹೇಳಿಕೆಗೆ ಸಮಜಾಯಿಷಿಗೆ ದಿಂಗಾಲೇಶ್ವರರು ಮುಂದಾಗಿದ್ದರಾದರೂ, ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಹೋರಾಟ ಮಾಡಿದ್ದೀರಿ, ಇನ್ನು ಅವಕಾಶಗಳು ಸಾಕಷ್ಟಿವೆ. ಸದ್ಯದ ಸ್ಥಿತಿಯಲ್ಲಿ ನಾಮಪತ್ರ ಹಿಂಪಡೆಯಿರಿ ಎಂದಷ್ಟೇ ಗುರುಗಳು ಹೇಳಿದ್ದರಿಂದ ಗುರುಗಳ ಮಾತಿಗೆ ಇಲ್ಲವೆನ್ನದೆ ನಾಮಪತ್ರ ಹಿಂಪಡೆಯಲು ಮುಂದಾದರು ಎನ್ನಲಾಗಿದೆ. ಸಮಾಜಕ್ಕೆ ಹಿನ್ನಡೆ ಆತಂಕ: ವೀರಶೈವ-ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಅನ್ಯಾಯವಾಗಿದೆ, ವಿ ವಿಧ ಸಮಾಜಗಳ ಜನರು ನೊಂದಿದ್ದಾರೆ.
ಈ ಅನ್ಯಾಯದ ವಿರುದ್ಧ ಧರ್ಮ ಯುದ್ಧ ಸಾರಿದ್ದೇನೆ ಎಂದು ಸ್ಪರ್ಧೆಗಿಳಿದಿದ್ದ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ವಿವಿಧ ಮುಖಂಡರಿಂದ ನಿರೀಕ್ಷಿತ ಬಹಿರಂಗ ಬೆಂಬಲ ದೊರೆಯಲಿಲ್ಲ. ಮಠಾಧೀಶರು ಬಹಿರಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದರೂ ಅವರು ಬರಲಿಲ್ಲ. ಇದೆಲ್ಲವುದಕ್ಕಿಂತಲೂ ಮುಖ್ಯವಾಗಿ ಇರುವ ಸಮಯದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಮನವೊಲಿಕೆ ಸಾಧ್ಯವಾಗದು ಎಂ ಬ ಅಭಿಪ್ರಾಯವೂ ಮೂಡಿಬಂದಿತ್ತು. ಲೋಕಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿದವರು ಯಶಸ್ಸು ಕಂಡಿದ್ದು ಅತ್ಯಲ್ಪ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂಪಡೆದು ದಿಂಗಾಲೇಶ್ವರರನ್ನೇ ಅಭ್ಯರ್ಥಿ ಮಾಡಲಿದೆ ಎಂಬ ಸುದ್ದಿ ಇತ್ತು. ಇದಕ್ಕೆ ಪೂರಕವಾಗಿ ಕೆಲ ಯತ್ನಗಳು ನಡೆದಿದ್ದವಾದರೂ, ಮುಖ್ಯಮಂತ್ರಿಯವರು ಒಪ್ಪದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಿ ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ, ಅತ್ಯಂತ ಕಡಿಮೆ ಮತಗಳನ್ನು ಪಡೆದುಕೊಂಡರೆ ವೀರಶೈವ-ಲಿಂಗಾಯತ ಸಮಾಜಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಕ್ಷೇತ್ರದಲ್ಲಿ ನಮ್ಮದೇ ಪ್ರಾಬಲ್ಯ ಎಂದು ಹೇಳಿಕೊಳ್ಳುವ ಸಮಾಜಕ್ಕೆ, ಸಮಾಜದ ಮಠಾಧೀಶರೊಬ್ಬರು ಕಣಕ್ಕಿಳಿದರೂ ಇಷ್ಟೊಂದು ಕಡಿಮೆ ಮತ ಬಂದಿದ್ದು, ಸಮಾಜದ ಶಕ್ತಿ ಇಷ್ಟೇನಾ ಎಂಬ ಸಂದೇಶ ರವಾನೆಯಾಗುತ್ತದೆ ಎಂಬ ಆತಂಕದ ವಿಷಯವನ್ನು ಕೆಲವರು ದಿಂಗಾಲೇಶ್ವರ ಸ್ವಾಮೀಜಿ ಗಮನಕ್ಕೂ ತಂದಿದ್ದರು ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ಬಿಜೆಪಿಯವರು ವ್ಯಕ್ತಪಡಿಸಿದಆತಂಕದಷ್ಟೇ ಕಾಂಗ್ರೆಸ್‌ನವರೂ ವ್ಯಕ್ತಪಡಿಸಿದ್ದರು. ಜಾತ್ಯತೀತ ಮಠ ಹಾಗೂ ಮಠದ ಭಕ್ತರು ಹೆಚ್ಚಿನವರು ಬಡವರಾಗಿದ್ದು, ಹಿಂದೂ-ಮುಸ್ಲಿಂ ಭಕ್ತರನ್ನು ಹೊಂದಿದ ಮಠದ ಪೀಠಾಧಿಪತಿ ದಿಂಗಾಲೇಶ್ವರರು ತಮ್ಮ ಮತಬ್ಯಾಂಕ್‌ಗೆ ಕೈ ಹಾಕಿದರೆ ಹೇಗೆ ಎಂಬ ಆತಂಕ ಕಾಂಗ್ರೆಸ್‌ನವರನ್ನು ಕಾಡಿತ್ತು ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಪಕ್ಷದ ವಿವಿಧ ನಾಯಕರು ಸಹ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದು, ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆಯೂ ಕೇಳಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಸಂಚಲನ ಮೂಡಿಸಿದ್ದ, ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದುಕೊಂಡಿದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇದೀಗ ದಿಂಗಾಲೇಶ್ವರ ಸ್ವಾಮೀಜಿ ಹಿಂದೆ ಸರಿದಿದ್ದರಿಂದ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇದು ಯಾವ ಆಯಾಮ ಪಡೆದುಕೊಳ್ಳಲಿದೆ ಕಾಯ್ದು ನೋಡಬೇಕು. ಮನಸ್ಥಿತಿ-ಪರಿಸ್ಥಿತಿ ಅರಿಯುವಂತಾಯಿತು..
ಶ್ರೀಮಠದ ದೊಡ್ಡ ಗುರುಗಳು ಚರ್ಚೆ ಬೇಡ. ಸದ್ಯದ ಸ್ಥಿತಿಯಲ್ಲಿ ನಾಮಪತ್ರ ಹಿಂಪಡೆಯಿರಿ ಎಂದು ಹೇಳಿದ್ದು, ಗುರುಗಳ ಅನಿಸಿಕೆ ಶಬ್ದದ ಭಾರ ಆಯಿತು. ಗುರುಗಳಿಗೆ ಎದುರು ಮಾತನಾಡದೆ ನಾಮಪತ್ರ ಹಿಂದಕ್ಕೆ ಪಡೆಯಲು ನಿರ್ಧರಿಸಿದೆನೇ ಹೊರತು ಯಾವುದೇ ಒತ್ತಡ ಇನ್ನಾವುದೋ ಕಾರಣಕ್ಕಂತೂ ಅಲ್ಲವೇ ಅಲ್ಲ. ನಾನು ಸ್ಪರ್ಧೆಗಿಳಿದ ನಂತರದಲ್ಲಿ ಜನರ ಮನಸ್ಥಿತಿ-ಪರಿಸ್ಥಿತಿ ಗೊತ್ತಾಗುವಂತಾಯಿತು. ನಾಮಪತ್ರ ಹಿಂಪಡೆದಿದ್ದೇನೆ ಎಂಬುದನ್ನು ಬಿಟ್ಟರೆ ನಾನು ಸಾರಿದ ಧರ್ಮಯುದ್ಧ ಹೋರಾಟದಲ್ಲಿ ಕಿಂಚಿತ್ತು ಬದಲಾವಣೆ, ಹೆಜ್ಜೆ ಹಿಂದೆ ಇರಿಸುವ ಮಾತು ಇಲ್ಲವೇ ಇಲ್ಲ.
ದಿಂಗಾಲೇಶ್ವರ ಸ್ವಾಮೀಜಿ *ಅಮರೇಗೌಡ ಗೋನವಾರ