Advertisement

ಬೆಳಗಾವಿ: ವಿಶ್ವವಿದ್ಯಾಲಯಗಳಿಗೆ ಇರಲಿ ಜ್ಞಾನದಾಹ

05:10 PM Jun 30, 2023 | Team Udayavani |

ಬೆಳಗಾವಿ: ಸಮಕಾಲೀನ ಸಂದರ್ಭದಲ್ಲಿ ಬಹುತೇಕ ವಿಶ್ವ ವಿದ್ಯಾಲಯಗಳ ಪ್ರಸಾರಾಂಗಗಳು ಜ್ಞಾನ ಪ್ರಸರಣ ಕಾರ್ಯವನ್ನು ಮರೆತು ನಿಷ್ಕ್ರಿಯವಾಗಿವೆ. ಇಂತಹ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗವು ಜ್ಞಾನವನ್ನು ಬಿತ್ತರಿಸುವ ಮಹತ್ತರ ಕಾರ್ಯದಲ್ಲಿ ಕ್ರಿಯಾಶೀಲವಾಗುವುದರೊಂದಿಗೆ ಮತ್ತೆ ಗತ ವೈಭವಕ್ಕೆ ಕರೆದೊಯ್ಯುತ್ತಿದೆ ಎಂದು ಸಂಸದ
ಎಲ್‌. ಹನುಮಂತಯ್ಯ ಅಭಿಪ್ರಾಯಪಟ್ಟರು.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಹಯೋಗದಲ್ಲಿ ವಿಶ್ವ ವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹದಿನೆಂಟು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಿಗೆ ಜ್ಞಾನದಾಹವಿರಬೇಕು. ಇಲ್ಲಿ ಸದಾ ಜ್ಞಾನವನ್ನು ಬಿತ್ತರಿಸುವ ಕಾರ್ಯ ನಡೆಯಬೇಕು. ಇಲ್ಲಿನ ಜ್ಞಾನ ಕೇವಲ ಪಂಡಿತರಿಗಷ್ಟೇ ಸೀಮಿತವಾಗದೆ
ಸಾಮಾನ್ಯರ ಬದುಕಿಗೆ ಹತ್ತಿರವಿರಬೇಕು ಎಂದರು.

ಇಂದು ಸರ್ಕಾರಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇವು ಎಲ್ಲರ ಸೊತ್ತು. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಬಹುತೇಕ ವಿಶ್ವವಿದ್ಯಾಲಯಗಳು ಹೆಸರಿಗಷ್ಟೇ ವಿಶ್ವವಿದ್ಯಾಲಯವಾಗಿದ್ದು ಗುಣಾತ್ಮಕ ಶಿಕ್ಷಣದಿಂದ ದೂರಾಗಿವೆ. ಖಾಸಗಿ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳು ಉತ್ತಮ ಶೆ„ಕ್ಷಣಿಕ ವಾತಾವರಣ ಹೊಂದಿದ್ದರೂ ಅವು ಉಳ್ಳವರ, ಶ್ರೀಮಂತರ ಸೊತ್ತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸರ್ಕಾರಿ ಶಿಕ್ಷಣ ಸಂಸ್ಥೆಗಳು ಆಮೂಲಾಗ್ರವಾಗಿ ಬದಲಾಗಬೇಕು. ಆಗ ಮಾತ್ರ ಸರ್ವರಿಗೂ ಉತ್ತಮ ಶಿಕ್ಷಣ ಸಿಗಲು ಸಾಧ್ಯ ಎಂದರು.

ಪುಸ್ತಕಗಳ ಕುರಿತು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪ್ರೊ. ಬಸವರಾಜ ಕಲ್ಗುಡಿ ಅವರು, ತಾತ್ವಿಕ ಚಿಂತನೆ ಮತ್ತು ಸಾಮಾಜಿಕ ಅರಿವು ಮೂಡಿಸುವ ಕೃತಿಗಳು ಪ್ರಕಟವಾಗಬೇಕು. ಇಲ್ಲಿ ಬಿಡುಗಡೆಗೊಂಡ ಎಲ್ಲಾ ಕೃತಿಗಳು ಮೌಲಿಕವಾಗಿವೆ. ಒಂದು ವಿಶ್ವವಿದ್ಯಾನಿಲಯದಲ್ಲಿ ಬೋಧನಾಂಗ, ಸಂಶೋಧನಾಂಗ, ಆಡಳಿತಾತ್ಮಕಾಂಗ, ಪ್ರಸಾರಾಂಗ ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ವಿಶ್ವವಿದ್ಯಾಲಯವು ಬೌದ್ಧಿಕವಾಗಿ ಬಹಳ ಎತ್ತರಕ್ಕೆ ಬೆಳೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ಚರಿತ್ರೆಯಲ್ಲಿ ಇದೊಂದು ದಾಖಲಾಗಬಹುದಾದ ಕಾರ್ಯ. ಇಷ್ಟೊಂದು ಪುಸ್ತಕ ಒಂದೇ ಬಾರಿ ಲೋಕಾರ್ಪಣೆಗೊಳ್ಳುವುದು ವಿಶ್ವವಿದ್ಯಾಲಯದ ಘನತೆ, ಗೌರವವನ್ನು ಹೆಚ್ಚಿಸಿದೆ ಎಂದರು. ಪ್ರಸಾರಾಂಗದ ಪ್ರಚಾರೋಪನ್ಯಾಸದಲ್ಲಿ ಮೂಡಿ ಬಂದ 13 ಪುಸ್ತಕಗಳು ಲೋಕಾರ್ಪಣೆಗೊಳ್ಳುವುದು ಅತ್ಯಂತ ಸಂತೋಷದ ಸಂಗತಿ. ಮುಂದೆ ಇನ್ನಷ್ಟು ಕಾರ್ಯ ಪ್ರಸಾರಾಂಗದಿಂದ ಆಗಲಿ. ಇಲ್ಲಿ ಬಿಡುಗಡೆ ಆದ ಪುಸ್ತಕಗಳು ನಾಡಿನ ಶ್ರೇಷ್ಠ ವಿದ್ವಾಂಸರ ಕೃತಿಗಳಾಗಿವೆ.

Advertisement

ಇವುಗಳ ಜೊತೆಗೆ ರಾಣಿ ಚನ್ನಮ್ಮ ಅಧ್ಯಯನ ಪೀಠದ ವತಿಯಿಂದಲೂ ಐದು ಸಂಶೋಧನಾಧಾರಿತವಾದ ಪುಸ್ತಕಗಳು ಲೋಕಾರ್ಪಣೆಗೊಂಡಿರುವುದು ಅಧ್ಯಯನ ಪೀಠದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವರಾದ ರಾಜಶ್ರೀ ಜೈನಾಪುರ, ಪ್ರೊ. ಶಿವಾನಂದ ಗೊರನಾಳೆ, ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ. ಎಸ್‌. ಎಂ. ಗಂಗಾಧರಯ್ಯ ಉಪಸ್ಥಿತರಿದ್ದರು. ಪ್ರಸಾರಾಂಗದ ನಿರ್ದೇಶಕರಾದ ಪ್ರೊ| ಎಸ್‌. ಬಿ. ಆಕಾಶ್‌ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಹಾಯಕ ನಿರ್ದೇಶಕ ಡಾ| ಪಿ. ನಾಗರಾಜ ಸ್ವಾಗತಿಸಿದರು. ಭರತ್‌ ಗುರವ ಪ್ರಾರ್ಥಿಸಿದರು. ಡಾ| ಗಜಾನನ ನಾಯ್ಕ ನಿರೂಪಿಸಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ| ಮಹೇಶ ಗಾಜಪ್ಪನವರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next