ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮಾತು ಕೊಟ್ಟಂತೆ ಬೆಳಗಾವಿಯಲ್ಲಿ ಮನೆ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಎರಡು ಮಹಡಿಯ ಮನೆಯನ್ನು ಬಾಡಿಗೆ ಪಡೆದಿರುವ ಜಗದೀಶ್ ಶೆಟ್ಟರ್ ಯುಗಾದಿ ಹಬ್ಬದ ದಿನವೇ ಗೃಹಪ್ರವೇಶ ಮಾಡಿದ್ದಾರೆ.
ಹೊಸ ಮನೆಯಲ್ಲಿ ಜಗದೀಶ್ ಶೆಟ್ಟರ್ ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಗದೀಶ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್, ಸಂಸದೆ ಮಂಗಲ ಅಂಗಡಿ, ಸೊಸೆ ಶೃದ್ಧಾ ಶೆಟ್ಟರ್, ಪುತ್ರ ಸಂಕಲ್ಪ, ಸ್ಫೂರ್ತಿ ಪಾಟೀಲ ಇದ್ದರು.
ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ವಿರೋಧಿಗಳಿಗೆ ಉತ್ತರ ಕೊಡಲು ಮನೆಮಾಡಿಲ್ಲ. ಚುನಾವಣೆಗೆ ಮೊದಲು ನಾನು ಹೇಳಿಕೆ ನೀಡಿದಂತೆ ಮನೆ ಮಾಡಿದ್ದೇನೆ ಎಂದರು.
ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಬಗ್ಗೆ ಮಾಡುತ್ತಿರುವ ಟೀಕೆಗಳಿಗೆ ಉತ್ತರ ನೀಡಿದ ಅವರು ಬಹುಶಃ ಹೆಬ್ಬಾಳಕರ್ ನನ್ನ ಹೇಳಿಕೆಗಳನ್ನು ಗಮನಿಸಿರಲಿಕ್ಕಿಲ್ಲ. ನಾನು ಬಿಜೆಪಿ ಬಿಟ್ಟಾಗ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡಿರಲಿಲ್ಲ. ಸುಮ್ಮನೇ ಅರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.