ಬೆಳಗಾವಿ: ಪ್ರವಾಹ ಹೊಡೆತದ ಬಿಸಿ ಈರುಳ್ಳಿಗೂ ತಟ್ಟಿದ್ದು, ಕೆಲವು ದಿನಗಳಿಂದ ಶತಕದ ಗಡಿ ದಾಟಿದ್ದ ಈರುಳ್ಳಿ ದರ ಈಗ ದ್ವಿಶತಕದತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಕ್ವಿಂಟಲ್‌ಗೆ 16ರಿಂದ 17 ಸಾವಿರ ರೂ. ವರೆಗೆ ಆಗಿದ್ದು, ಈ ಸಲದ ದರ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.
ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಂದುಕೊಂಡಷ್ಟು ಈರುಳ್ಳಿ ಬಾರದ್ದಕ್ಕೆ ಬೆಲೆ ಗಗನಕ್ಕೇರಿತ್ತು. ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಆವಕ ಆಗಿದ್ದರಿಂದ ದರ ಹೆಚ್ಚಾಗಿದೆ. ಇವತ್ತು ಕ್ವಿಂಟಲ್‌ಗೆ 8ರಿಂದ 16 ಸಾವಿರ ರೂ. ವರೆಗೂ ದರ ಇತ್ತು. ಕೆ.ಜಿ.ಗೆ 160ರಿಂದ 170 ರೂ.ವರೆಗೆ ಇತ್ತು. ಮಳೆ ಪ್ರಮಾಣ ಹೆಚ್ಚಾಗಿ ಆಗಿದ್ದರಿಂದ ಈರುಳ್ಳಿ ಇಳುವರಿ ಸರಿಯಾಗಿ ಬಂದಿಲ್ಲ. ಕೈಗೆ ನಿಲುಕದಷ್ಟು ಈರುಳ್ಳಿ ದರ ಹೆಚ್ಚುತ್ತಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.
ಈರುಳ್ಳಿಯಿಂದಾಗಿ ಗ್ರಾಹಕರ ಕಣ್ಣೀರು ಮತ್ತಷ್ಟು ಹೆಚ್ಚಿಸಿದೆ. 2013-14ರಲ್ಲಿ ಅತಿ ಹೆಚ್ಚು ಅಂದರೆ ಕ್ವಿಂಟಲ್‌ಗೆ 9 ಸಾವಿರ ರೂ.ವರೆಗೆ ದರ ಇತ್ತು. ಆ ನಂತರ ಕ್ವಿಂಟಲ್‌ಗೆ 16 ಸಾವಿರ ರೂ. ದರ ಆಗುವ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಪ್ರತಿ ವಾರ ಮಾರುಕಟ್ಟೆಗೆ ಈರುಳ್ಳಿ ತುಂಬಿಕೊಂಡು 400ರಿಂದ 500 ವಾಹನಗಳು ಬರುತ್ತವೆ.
ಆದರೆ ಈ ಬುಧವಾರ ಕೇವಲ 70 ವಾಹನಗಳು(3500 ಕ್ವಿಂಟಲ್ ಈರುಳ್ಳಿ) ಬಂದಿದ್ದರಿಂದ ದರ ಮುಗಿಲು ಮುಟ್ಟಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಈರುಳ್ಳಿ ಬೆಳೆ ಸರಿಯಾಗಿ ಬಂದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ರೈತರದ್ದಾಗಿದೆ. ಹೀಗಾಗಿ ಬೆಳೆ ನೀರು ಪಾಲಾಗಿದೆ. ಮಣ್ಣಿನ ಉಷ್ಣಾಂಶದಲ್ಲಿಯೇ ಚೆನ್ನಾಗಿ ಬೆಳೆ ಬರುವ ಈರುಳ್ಳಿ ಮಳೆಯಿಂದ ಮಣ್ಣಿನಲ್ಲಿಯೇ ಕೊಳೆತು ಹೋಗಿದೆ.
ಬರಗಾಲ ಪೀಡಿತ ಪ್ರದೇಶಗಳಲ್ಲಿಯೂ ಈ ಸಲ ಮಳೆ ಆಗಿದ್ದರಿಂದ ರೈತರಿಗೆ ಹೊಡೆತ ಬಿದ್ದಿದೆ. ಆದರೂ ಕೆಲವು ರೈತರು ಸಾಹಸಪಟ್ಟು ಬೆಳೆದ ಬೆಳೆ ಮಾರುಕಟ್ಟೆಗೆ ತರುವಷ್ಟರಲ್ಲಿಯೇ ಕೊಳೆತು ಹೋದ ಉದಾಹರಣೆಗಳೂ ಇವೆ. ಈ ವರ್ಷ ರೈತರಿಂದ ವ್ಯಾಪಾರಸ್ಥರು ಈರುಳ್ಳಿ ಖರೀದಿಸಿದರೂ ಇವರ ಕೈಗೂ ಸರಿಯಾದ ಬೆಲೆ ಸಿಕ್ಕಿಲ್ಲ. ಈರುಳ್ಳಿ ಖರೀದಿಸಿ ಮಧ್ಯಪ್ರದೇಶ, ಛತ್ತೀಸಗಡ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಬೆಳಗಾವಿಯಿಂದ ಅಲ್ಲಿಗೆ ತಲುಪಲು ಮೂರು ದಿನಗಳು ಬೇಕಾಗುತ್ತದೆ. ಅಷ್ಟರೊಳಗೆ ಎಲ್ಲ ಈರುಳ್ಳಿ ಕೊಳೆತು ಹೋಗಿದೆ. ಇದರಿಂದ ವ್ಯಾಪಾರಸ್ಥರಿಗೆ ಭಾರೀ ನಷ್ಟ ಉಂಟಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಬೆಳಗಾವಿಗೆ ಮಹಾರಾಷ್ಟ್ರದ ನಾಸಿಕ್, ಕರ್ನಾಟಕದ ಕಲ್ಬುರ್ಗಿ, ಗದಗ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಈರುಳ್ಳಿ ಬರುತ್ತದೆ. ಸಾಮಾನ್ಯವಾಗಿ ವಾರಕ್ಕೊಮ್ಮೆ 500 ವಾಹನಗಳವರೆಗೂ ಬರುತ್ತವೆ. ಈರುಳ್ಳಿ ತುಂಬಿಕೊಂಡು 300 ವಾಹನಗಳು ಬಂದಾಗಲೂ ದರ ಕ್ವಿಂಟಲ್‌ಗೆ 5 ಸಾವಿರ ರೂ.ವರೆಗೂ ಇತ್ತು. ಸಣ್ಣ ಪ್ರಮಾಣದ ಈರುಳ್ಳಿ ದರ ಕ್ವಿಂಟಲ್‌ಗೆ 8 ಸಾವಿರ ರೂ.ವರೆಗೆ ದರ ಇತ್ತು. ಒನ್ ನಂಬರ್ ಈರುಳ್ಳಿ ದರ ಪ್ರತಿ ಕೆ.ಜಿ.ಗೆ 160-170 ರೂ. ನಿಗದಿ ಆಗಿತ್ತು.
ಸಾಮಾನ್ಯವಾಗಿ ಗ್ರಾಹಕರು ಮನೆಯಲ್ಲಿ ಬಳಸುವ ಈರುಳ್ಳಿ ದರ 120 ರಿಂದ 130 ರೂ. ದರ ಇದೆ. ಮಾರುಕಟ್ಟೆಗಳಲ್ಲಿಯೂ ಈರುಳ್ಳಿ ದರ ಕೇಳಿ ಗ್ರಾಹಕರು ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.