ಬೆಳಗಾವಿ: ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಸುರಿದು ಬಹಳ ಆತಂಕ ಉಂಟುಮಾಡಿದ್ದ ಮಳೆಯ ಆರ್ಭಟ ಬುಧವಾರ ಕಡಿಮೆಯಾಗಿದೆ. ನದಿ ಹಾಗೂ ಹಳ್ಳಗಳಲ್ಲಿ ನೀರಿನ ರಭಸ ಇಳಿಕೆಯಾಗಿದೆ. ಪ್ರವಾಹದ ಆತಂಕದಿಂದಲೇ ಹಗಲು ರಾತ್ರಿ ಕಳೆಯುತ್ತಿದ್ದ ಜನತೆ ನಿಟ್ಟುಸಿರು ಬಿಟ್ಟಿದೆ.
ಬೆಳಗಾವಿ ನಗರದಲ್ಲಿ ಸಹ ಮಳೆ ಬುಧವಾರ ಬಹುತೇಕ ಬಿಡುವು ಕೊಟ್ಟಿದೆ. ಬೆಳಗ್ಗೆಯಿಂದ ಆಗಾಗ ಮಳೆ ಬಂದರೂ ಸತತವಾಗಿ ಸುರಿಯಲಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಕಳೆದ ನಾಲ್ಕೈದು ದಿನಗಳಿಗಿಂತ ಬುಧವಾರ ಹೆಚ್ಚಿನ ಜನ ಜಂಗುಳಿ ಕಂಡುಬಂತು. ಈ ಮಧ್ಯೆ ಸತತ ಮಳೆಯಿಂದ ಕೆಳಗೆ ಜರುಗಿದ್ದ ಗೋಕಾಕದ ಮಲ್ಲಿಕಾರ್ಜುನ ಗುಡ್ಡದ ಮೇಲಿನ ಬಂಡೆಕಲ್ಲುಗಳನ್ನು ಬುಧವಾರ ತೆರವುಗೊಳಿಸುವ ಕಾರ್ಯ ಆರಂಭವಾಯಿತು.
ಬೆಳಗ್ಗೆಯಿಂದ ಬಂಡೆ ಕೋರೆಯುವ ಕಾರ್ಯ ಆರಂಭಿಸಿರುವ ಎನ್‌ಡಿಆರ್ ಎಫ್ ತಂಡಕ್ಕೆ ಸ್ಥಳೀಯ ಸತೀಶ್ ಫೌಂಡೇಶನ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. 220 ಟನ್ ಭಾರದ ಬಂಡೆಯನ್ನು 3,4,5, ಟನ್‌ಗಳಲ್ಲಿ ತುಂಡು ಮಾಡಿ ಕೆಳಗೆ ತರುವ ಕಾರ್ಯ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಟ್ಟದ ಕೆಳಗಿರುವ ಮನೆಗಳನ್ನು ಖಾಲಿ ಮಾಡಲು ಕ್ರಮಕೈಗೊಂಡಿರುವ ನಗರಸಭೆ ಅಧಿಕಾರಿಗಳು ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದಾರೆ. ಈ ಬಗ್ಗೆ ತೀವ್ರ ಆತಂಕಗೊಂಡಿದ್ದ ಗೋಕಾಕದ ಗುಡ್ಡದ ಕೆಳಗಡೆ ನೆಲಸಿರುವ ಸಾರ್ವಜನಿಕರು ಬುಧವಾರ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಮಲಪ್ರಭಾ ಜಲಾಶಯದಿಂದ ಬಹಳ ಆತಂಕ ಪಟ್ಟಿದ್ದ ರಾಮದುರ್ಗ ತಾಲೂಕಿನ ನದಿ ತೀರದ ಜನ ಈಗ ನಿರಾಳರಾಗಿದ್ದಾರೆ. ಬೈಲಹೊಂಗಲ, ಕಿತ್ತೂರು ಹಾಗೂ ಖಾನಾಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಬಹುತೇಕ ಕಡಿಮೆಯಾಗಿರುವುದರಿಂದ ಮಲಪ್ರಭಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.
ಜಲಾಶಯಕ್ಕೆ ಈಗ 5700 ಕ್ಯೂಸೆಕ್ ನೀರು ಬರುತ್ತಿದ್ದು ಇಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗಡೆ ಬಿಡಲಾಗುತ್ತಿದ್ದು, ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಮಲಪ್ರಭಾ ನದಿಯಲ್ಲಿ ಆದಿಲ್ ಹುಸೇನ್ ಸಾಬ್(38) ಶವ ಪತ್ತೆಯಾಗಿದೆ.
ಚಿಕ್ಕೋಡಿ ಭಾಗದಲ್ಲಿ: ಕಳೆದ ನಾಲ್ಕು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಈಗ ತಗ್ಗಿದ್ದು ನದಿ ನೀರಿನ ಮಟ್ಟ ಸಹ ಸಾಕಷ್ಟು ಇಳಿಕೆಯಾಗಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ ಮೂಲಕ ಕೃಷ್ಣಾ ನದಿಯಿಂದ ರಾಜ್ಯಕ್ಕೆ 75 ಸಾವಿರ ಕ್ಯೂಸೆಕ್ ದೂಧಗಂಗಾಮತ್ತು ವೇಧಗಂಗಾ ನದಿ ಮೂಲಕ 18 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 93 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಭಾರೀ ಮಳೆಯಿಂದಾಗಿ ನಿಪ್ಪಾಣಿ ತಾಲೂಕಿನ ಭೋಜ-ಹುನ್ನರಗಿ ರಸ್ತೆ ಕಿತ್ತು ಹೋಗಿದೆ. ರಸ್ತೆಯ ದೇಸಾಯಿ ತೋಟದ ಹತ್ತಿರ ಇರುವ ಸೇತುವೆ ಬಳಿ ರಸ್ತೆ ಕಿತ್ತು 10 ಅಡಿಯಷ್ಟು ತಗ್ಗು ಬಿದ್ದಿದೆ. ಕೃಷ್ಣಾ ನದಿ ಇನ್ನೂ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗದ ಕೃಷ್ಣಾ ಮತ್ತು ಉಪನದಿಗಳ ಆರು ಸೇತುವೆಗಳು ಇನ್ನೂ ಜಲಾವೃತಗೊಂಡಿವೆ.