ಬೆಳಗಾವಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ನಲುಗಿದ ನಗರ ಹಾಗೂ ಗಡಿ ಜಿಲ್ಲೆಯ ಜನತೆ ಈ ಬಾರಿ ಶ್ರೀ ಗಣೇಶೋತ್ಸವ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದು, ಪ್ರವಾಹದಿಂದ ಇಡೀ ಜನಜೀವನವೇ ಅಸ್ತವ್ಯಸ್ತ ಆಗಿರುವುದರಿಂದ ಅದ್ಧೂರಿ ಆಚರಣೆ ಕೈಬಿಟ್ಟು ಇದೇ ಖರ್ಚನ್ನು ಪ್ರವಾಹ ಸಂತ್ರಸ್ತರ ನೀಡಲು ಬಹುತೇಕ ಮಂಡಳಗಳು ತೀರ್ಮಾನ ತೆಗೆದುಕೊಂಡಿವೆ.
ಬೆಳಗಾವಿಯ ಶ್ರೀ ಗಣೇಶನ ಹಬ್ಬ ಎಂದರೆ ಇಡೀ ರಾಜ್ಯಕ್ಕೆ ಮಾದರಿ. ಮಹಾರಾಷ್ಟ್ರದ ಮುಂಬೈ, ಪುಣೆ ಬಿಟ್ಟರೆ ಬೆಳಗಾವಿಯಲ್ಲಿ ನಡೆಯುವ ಹಬ್ಬಕ್ಕೆ ವಿಶೇಷ ಮೆರಗು. ಪ್ರತಿ ವರ್ಷ ಒಂದಿಲ್ಲೊಂದು ವಿನೂತನ ಆಚರಣೆ ಮೂಲಕ ಗಮನ ಸೆಳೆಯುವ ಹಬ್ಬಕ್ಕೆ ಪ್ರವಾಹದ ವಿಘ್ನ ತಟ್ಟಿದ್ದು, ಸಂತ್ರಸ್ತರ ನೆರವಿಗೆ ನಿಲ್ಲಲು ಬಹುತೇಕ ಎಲ್ಲ ಗಣೇಶ ಮಂಡಳಗಳು ನಿರ್ಧರಿಸಿ ಸರಳ ಆಚರಣೆಗೆ ಒತ್ತು ನೀಡಿವೆ.
ಗಣೇಶ ಉತ್ಸವದ ಪರಂಪರೆಗೆ ಧಕ್ಕೆಯಾಗದಂತೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಮಂಡಳಗಳು ಮುಂದಾಗಿವೆ. ಕುಂದಾನಗರಿಯಲ್ಲಿ ಪ್ರತಿ ವರ್ಷ ಒಟ್ಟು 386 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆಲ ಮಂಡಳಗಳಂತೂ ನೂರು ವರ್ಷದ ಗಡಿ ದಾಟಿ ಗಣಪನನ್ನು ಪ್ರತಿಷ್ಠಾಪಿಸುತ್ತ ಬಂದಿವೆ. ಪ್ರತಿ ವರ್ಷವೂ ಅದ್ಧೂರಿ ಆಚರಣೆ ಮಾಡುತ್ತ ಜನರನ್ನು ಆಕರ್ಷಿಸುವಲ್ಲಿ ಯಾವ ಮಂಡಳಗಳೂ ಹಿಂದೆ ಬಿದ್ದಿಲ್ಲ.
ಪ್ರವಾಹ ಸಂತ್ರಸ್ತರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮೂಲಕ ಅವರ ಬೆನ್ನಿಗೆ ನಿಲ್ಲಬೇಕಾಗಿದೆ. ಹೀಗಾಗಿ ಈ ಸಲದ ಗಣೇಶೋತ್ಸವವನ್ನು ಆಡಂಬರದಿಂದ ಆಚರಿಸದೇ ಸರಳವಾಗಿ ಆಚರಿಸಿದರೂ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಹಬ್ಬಕ್ಕೆ ಕಳೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮಂಡಳ ಮಾನವೀಯತೆ ದೃಷ್ಟಿಯಿಂದ ನೆರೆ ಪೀಡಿತ ಜನರ ಸಹಾಯಕ್ಕೆ ಮುಂದಾಗಬೇಕು ಎಂದು ಲೋಕಮಾನ್ಯ ಗಣೇಶೋತ್ಸವ ಮಂಡಳದವರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಕೆಲ ಮಂಡಳದ ಪದಾಧಿಕಾರಿಗಳು ಅದ್ಧೂರಿ ಆಚರಣೆ ಕೈಬಿಟ್ಟು ಹೆಚ್ಚುವರಿ ಹಣವನ್ನು ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಈಗಾಗಲೇ ಗಣೇಶೋತ್ಸವದ ತಯಾರಿ ಜೋರಾಗಿ ನಡೆದಿದ್ದರೂ ಈ ಹಿಂದಿನ ವರ್ಷಗಳಂತೆ ಜನರಲ್ಲಿ ಹುರುಪು ಇಲ್ಲದಂತಾಗಿದೆ. ಗಣೇಶನ ಮೂರ್ತಿ ತಯಾರಕರೂ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಿಲ್ಲ. ಮುಂಗಡ ಹೇಳಿದವರ ಮೂರ್ತಿಗಳು ಮಾತ್ರ ಬಾಕಿ ಉಳಿದಿವೆ. ಎಲ್ಲೆಡೆಯೂ ನೆರೆ ಆವರಿಸಿ ಜನರನ್ನು ಆತಂಕದ ಕೂಪಕ್ಕೆ ತಳ್ಳಿದ್ದು, ಜನ ಜೀವನ ಮಟ್ಟವನ್ನು ವರ್ಷಗಳಷ್ಟು ಹಿಂದಕ್ಕೆ ಒಯ್ದಿವೆ. ಜನ ಅಷ್ಟೊಂದು ಉತ್ಸಾಹಿತರಾಗಿಲ್ಲ.